ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಅಲ್ಪ ಜಮೀನಿನಲ್ಲೂ ಉತ್ತಮ ಆದಾಯ ತರುವ ಸುಗಂಧರಾಜ

ಹೊಸದುರ್ಗದ ಅಂಚಿಬಾರಿಹಟ್ಟಿಯ ಶಿವಣ್ಣ ಅವರಿಂದ ಯಶಸ್ವಿ ಪುಷ್ಪ ಕೃಷಿ
Last Updated 27 ಏಪ್ರಿಲ್ 2022, 4:03 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಅಂಚಿಬಾರಿಹಟ್ಟಿಯಲ್ಲಿಯ ಶಿವಣ್ಣ ಅವರ ಜಮೀನಿನಲ್ಲಿರುವ ಸುಗಂಧರಾಜ ಹೂವಿನ ಸುವಾಸನೆ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿ ಗಿಡದ ತುಂಬ ಹೂ ತುಂಬಿ, ಪರಿಮಳ ಬೀರುತ್ತ, ಮನಕ್ಕೆ ಮುದ ನೀಡುತ್ತಿವೆ. ಅಲ್ಲದೇ ಮಾಲೀಕರಿಗೂ ಉತ್ತಮ ಆದಾಯ ತಂದುಕೊಟ್ಟಿದೆ. 2 ವರ್ಷಗಳಿಗೆ ₹ 4 ಲಕ್ಷ ಆದಾಯ ನೀಡಿದ್ದು, ರೈತ ಶಿವಣ್ಣ ಅವರಲ್ಲಿ ಹರ್ಷ ಮೂಡಿಸಿದೆ.

ಮೊದಲೆಲ್ಲ ಎಲ್ಲ ರೈತರಂತೆ ಶಿವಣ್ಣ ಅವರು ಸಹ ಮೆಕ್ಕೆಜೋಳ, ರಾಗಿ, ಸಜ್ಜೆ ಹಾಗೂ ಇತರ ಬೆಳೆಗಳನ್ನು ಬೆಳೆಯುತ್ತಿದ್ದರೂ ಮಾಡಿದ ಖರ್ಚು ಕೈಗೆಟುಕುತ್ತಿರಲಿಲ್ಲ. ಹಾಗಾಗಿ ಕಡಿಮೆ ಬಂಡವಾಳ ಹೂಡಿ ಹೆಚ್ಚು ಬೆಳೆ ಬೆಳೆಯುವ ಮಾರ್ಗ ಕುರಿತು ಆಲೋಚನೆ ಮಾಡಿದರು. ಸ್ನೇಹಿತನ ಸಲಹೆಯ ಮೇರೆಗೆ ಸುಗಂಧರಾಜ ಬೆಳೆಯಲು ನಿರ್ಧರಿಸಿದರು.

2 ವರ್ಷಗಳ ಹಿಂದೆ ಮುಕ್ಕಾಲು ಎಕರೆ ಭೂಮಿಯಲ್ಲಿ ಈ ಹೂವಿನ ಸಸಿಗಳನ್ನು ನಾಟಿ ಮಾಡಿದ್ದು, ಐದು ತಿಂಗಳ ನಂತರ ನಿರಂತರ ಹೂ ಕೊಯ್ಲು ಮಾಡುತ್ತಿದ್ದಾರೆ. ನಾಟಿ ಮಾಡುವ ಮೊದಲು ಭೂಮಿ ಸಮತಟ್ಟುಗೊಳಿಸಿ, ಮಾಗಿ ಮಾಡಿ ಒಂದು ತಿಂಗಳ ನಂತರ ಉಳುಮೆ ಮಾಡಿಸಿದ್ದಾರೆ. ಭೂಮಿ ಹದ ಮಾಡಿ, 2 ಅಡಿಗೊಂದು ಸಾಲು ಮಾಡಿ ನಾಟಿ ಮಾಡಲು ಅಣಿಗೊಳಿಸಿದ್ದಾರೆ.

‘ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿಯಿಂದ 15 ಚೀಲ ಸುಗಂಧರಾಜ ಹೂವಿನ ಗಡ್ಡೆಗಳನ್ನು ತರಿಸಿ, ಅದರಲ್ಲಿ ಸ್ವಲ್ಪವೂ ಮಣ್ಣಿರದಂತೆ ಶುಚಿಗೊಳಿಸಿದೆ. ದಪ್ಪ ಗಡ್ಡೆಗಳನ್ನು 2 ಹೋಳು ಮಾಡಿ, ಪ್ರತಿ ಗಡ್ಡೆಯಲ್ಲೂ ಬೇರು ಇರದಂತೆ ನೋಡಿಕೊಂಡಿದ್ದೆ. ನಂತರ ಹದ ಮಾಡಿದ ಭೂಮಿಗೆ ಗಡ್ಡೆ ನಾಟಿ ಮಾಡಿದ್ದೆ. ತಿಂಗಳಿಗೊಮ್ಮೆ ಕಳೆ ತೆಗೆಯುತ್ತಿರಬೇಕು. ಕಳೆ ತೆಗೆದರೆ ಸಮೃದ್ಧ ಬೆಳೆ ಪಡೆಯಬಹುದು. ದಿನ ಬಿಟ್ಟು ದಿನ ನೀರು ಬಿಡುತ್ತಿರಬೇಕು. ಭೂಮಿ ಸದಾ ತಂಪಾಗಿರುವಂತೆ ನೋಡಿಕೊಳ್ಳಬೇಕು. ಗೊಬ್ಬರ ಔಷಧ ಸೇರಿದಂತೆ ಇನ್ನಿತರ ಖರ್ಚು ವರ್ಷಕ್ಕೆ ₹ 30 ಸಾವಿರದಿಂದ ₹ 40 ಸಾವಿರದಷ್ಟು ಆಗುತ್ತದೆ. ಮನೆಯವರೆಲ್ಲ ಸೇರಿ ಬೆಳಿಗ್ಗೆ ಅವಧಿಯಲ್ಲಿ ಹೂ ಬಿಡಿಸಲು ತೊಡಗುತ್ತೇವೆ’ ಎಂದು ರೈತ ಶಿವಣ್ಣ ತಿಳಿಸಿದರು.

ಆದಾಯ: ಸುಗಂಧರಾಜ ಹೂವನ್ನು ನಿತ್ಯ ಹಿರಿಯೂರು ಮಾರುಕಟ್ಟೆಗೆ ಒಯ್ಯಲಾಗುತ್ತದೆ. ಊರಿನ ಇತರ ರೈತರು ತುಮಕೂರಿನವರೆಗೂ ಮಾರಾಟಕ್ಕೆ ಹೋಗಿದ್ದುಂಟು. ದಿನಕ್ಕೆ 30-40 ಕೆ.ಜಿ ಹೂ ಪಡೆಯಬಹುದು. ಋತುಗಳಿಗೆ ಅನುಗುಣವಾಗಿ ಹೂ ಬಿಡುತ್ತವೆ. ಕೆ.ಜಿ.ಗೆ ₹ 50 ರಂತೆ ಸಿಕ್ಕರೂ ಆದಾಯಕ್ಕೇನೂ ಕೊರತೆಯಿಲ್ಲ. ಹಬ್ಬ, ಮದುವೆ ಸಂದರ್ಭಗಳಲ್ಲಿ ಕೆ.ಜಿಗೆ ₹ 100ರಿಂದ ₹ 150ರವರೆಗೂ ದರ ಲಭಿಸುತ್ತದೆ.

ಶ್ರಾವಣ ಮಾಸದಲ್ಲಿ ಕೆ.ಜಿಗೆ ₹ 500 ಬೆಲೆಯೂ ಸಿಕ್ಕಿದ್ದಿದೆ. ಈ ಸಂದರ್ಭದಲ್ಲಿ ಹೆಚ್ಚು ಲಾಭ ಗಳಿಸಬಹುದು. ಸುಗಂಧರಾಜ ಹೂವಿನ ಜೊತೆ ಅಡಿಕೆಯನ್ನೂ ಹಾಕಲಾಗಿದೆ. ಸುಗಂಧರಾಜ 3 ವರ್ಷದ ಬೆಳೆ. ಅದು ಮುಗಿಯುವುದರೊಳಗೆ ಗೊಬ್ಬರ, ನೀರು ಪಡೆದ ಅಡಿಕೆ ಸಸಿಗಳು ಸಮೃದ್ಧವಾಗಿರುವಂತೆ ವ್ಯವಸ್ಥೆ ಮಾಡಲಾಗಿದೆ.

ನಿತ್ಯ ಮನೆಯವರಿಗೆ ಕೆಲಸ ನೀಡುವ ಪುಷ್ಪ ಕೃಷಿ ಕುಟುಂಬಕ್ಕೆ ಆರ್ಥಿಕ ಸ್ವಾವಲಂಬನೆ ಒದಗಿಸಿಕೊಡುತ್ತದೆ. ಸ್ವಲ್ಪ ಜಮೀನಿನಲ್ಲೂ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ಅಂಚಿಬಾರಿಹಟ್ಟಿ ಶಿವಣ್ಣ ಅವರ ಪುಷ್ಪ ಕೃಷಿ ಇತರರಿಗೂ ಮಾದರಿಯಾಗಿದೆ.

ಬೆಲೆ ನಿಗದಿ ಅಗತ್ಯ
ಸುಗಂಧರಾಜ ಹೂವಿಗೆ ನಿತ್ಯ ಒಂದೊಂದು ದರ ಇರುತ್ತದೆ. ಅದರ ಬದಲು ಇಂತಿಷ್ಟೇ ಬೆಲೆ ಎಂದು ಸರ್ಕಾರ ನಿಗದಿ ಪಡಿಸಬೇಕು. ಈ ಹೂವಿಗೆ ಹೆಚ್ಚಾಗಿ ಕಾಡುವ ಬಿಳಿಜೋನಿ ರೋಗದಿಂದ ಇಡೀ ಹೊಲವೇ ನಾಶವಾಗುವ ಕಾರಣ, ಈ ಹೂ ಬೆಳೆಯ ಹಾನಿಗೂ ಪರಿಹಾರ ನೀಡಿದರೆ ಒಳಿತು. ಸುಗಂಧರಾಜ ಹೂ ಬೆಳೆಯಿಂದ ನಷ್ಟವಾಗುವುದೇ ಇಲ್ಲ, ರೈತರು ಹೆಚ್ಚಿನ ಲಾಭ ಗಳಿಸಬಹುದು. ನಾಟಿ ಮಾಡಲು ಫೆಬ್ರುವರಿಯಲ್ಲಿ ತಯಾರಿ ಮಾಡಿಕೊಳ್ಳಬೇಕು.
– ಶಿವಣ್ಣ, ಸುಗಂಧರಾಜ ಹೂ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT