ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ದ್ವಿಚಕ್ರ ವಾಹನ ಅಡ್ಡಾದಿಡ್ಡಿ ನಿಲುಗಡೆ

Published 6 ಫೆಬ್ರುವರಿ 2024, 6:19 IST
Last Updated 6 ಫೆಬ್ರುವರಿ 2024, 6:19 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ, ಜನ ಸಂದಣಿ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದ್ದು, ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ.

ವಾಹನ ನಿಲುಗಡೆಗೆ ಸಂಬಂಧಿಸಿದಂತೆ ನಿಯಮ ಪಾಲನೆಯಾಗುತ್ತಿಲ್ಲ. ‘ನೋ ಪಾರ್ಕಿಂಗ್‌’ ಎಂದು ಹಾಕಿರುವ ನಾಮಫಲಕಗಳ ಎದುರೇ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳಾದ ಕೆನರಾ ಬ್ಯಾಂಕ್‌ ಮುಂಭಾಗ (ಹಳೆ ಬಸ್‌ ನಿಲ್ದಾಣ), ಎಸ್‌ಬಿಐ, ಕರ್ನಾಟಕ ಬ್ಯಾಂಕ್‌, ಹೂವಿನ ಅಂಗಡಿಗಳ ಮುಂಭಾಗ, ಮಠದ ಹೊಂಡದ ರಸ್ತೆ ಹಾಗೂ ಹಲವು ಅಂಗಡಿಗಳ ಮುಂಭಾಗದಲ್ಲಿ ಸೇರಿ ಹತ್ತು ಹಲವು ಕಡೆಗಳಲ್ಲಿ ವಾಹನಗಳನ್ನು ರಸ್ತೆ ಮೇಲೆ ಅಥವಾ ಬದಿಯಲ್ಲಿ ಅಡ್ಡಲಾಗಿ ನಿಲ್ಲಿಸಲಾಗುತ್ತಿದೆ. ಹೆಚ್ಚಾಗಿ ಬ್ಯಾಂಕ್‌ ಮುಂಭಾಗಗಳಲ್ಲಿಯೇ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದ್ದು, ನಿತ್ಯ ಓಡಾಡುವವರಿಗೆ ಕಿರಿಕಿರಿಯಾಗುತ್ತಿದೆ.

ಗ್ರಾಹಕರು, ಸಾರ್ವಜನಿಕರು ಬ್ಯಾಂಕ್‌ ಮುಂಭಾಗ ನಿತ್ಯ ಹತ್ತಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದು, ಮುಂಭಾಗದಲ್ಲಿ ಮೊದಲೇ ಬಂದು ನಿಲ್ಲಿಸಿದ ವಾಹನವನ್ನು ತೆಗೆಯಲು ಪ್ರಯಾಸಪಡಬೇಕಾಗಿದೆ. ‘ಬೆಳಿಗ್ಗೆ ಬೇಗ ಬಂದು ದ್ವಿಚಕ್ರ ವಾಹನ ನಿಲ್ಲಿಸುತ್ತೇನೆ. ಮಧ್ಯಾಹ್ನದ ಊಟಕ್ಕೆ ತೆರಳಲು ಬೈಕ್‌ ಬಳಸುವುದನ್ನೇ ಬಿಟ್ಟಿದ್ದೇನೆ. ಬ್ಯಾಂಕ್‌ ಅವಧಿ ಮುಗಿದ ನಂತರ ವಾಹನ ತೆಗೆಯುತ್ತೇನೆ. ಈ ಬಗ್ಗೆ ಅಧಿಕಾರಿಗಳ ಬಳಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲಿ. ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವವರಿಗೆ ಪೊಲೀಸರು ಸೂಕ್ತ ಎಚ್ಚರಿಕೆ ನೀಡಿ, ದಂಡ ವಿಧಿಸಿದರೆ ನಿಯಂತ್ರಣಕ್ಕೆ ಬರಬಹುದು’ ಎಂದು ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಕೆನರಾ ಬ್ಯಾಂಕ್‌ ಮುಂಭಾಗ ಬೈಕ್‌ಗಳ ದಂಡೇ ಇರುತ್ತದೆ. ಪುರಸಭೆ ಮಳಿಗೆಗಳಿರುವ ಈ ಜಾಗದಲ್ಲಿ ಕೆನರಾ ಬ್ಯಾಂಕ್‌, ಮೊಬೈಲ್‌ ಅಂಗಡಿ, ಪುಸ್ತಕ ಮಳಿಗೆ, ಹೋಟೆಲ್‌ಗಳು, ಆಸ್ಪತ್ರೆಗಳು ಇವೆ. ನಿತ್ಯ ನೂರಾರು ಜನ ಓಡಾಡುತ್ತಾರೆ. ದ್ವಿಚಕ್ರ ವಾಹನಗಳ ಪಕ್ಕದಲ್ಲಿ ಅಲ್ಪ ಸ್ವಲ್ಪ ಜಾಗದಲ್ಲಿ ಪ್ರಯಾಸಪಟ್ಟು ಓಡಾಡುವಂತಾಗಿದೆ. ಸರಿಯಾದ ಸ್ಥಳವಕಾಶ ಇದ್ದರೂ ನಿಯಮಬದ್ಧವಾಗಿ ವಾಹನ ನಿಲುಗಡೆಯಾಗುತ್ತಿಲ್ಲ’ ಎಂದು ಇಲ್ಲಿನ ನಿವಾಸಿ ರಾಜಪ್ಪ ಬೇಸರ ವ್ಯಕ್ತಪಡಿಸಿದರು.

‘ಬ್ಯಾಂಕ್‌ಗಳ ಮುಂದೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ತಪ್ಪಿಸಲು ಬ್ಯಾಂಕ್‌ನಿಂದಲೇ ಭದ್ರತಾ ಸಿಬ್ಬಂದಿ ನೇಮಿಸಬೇಕು. ಅವರ ಕಚೇರಿ ಸ್ಥಳದಲ್ಲಿ ವಾಹನಗಳ ಕ್ರಮಬದ್ಧ  ನಿಲುಗಡೆಗೆ ಬ್ಯಾಂಕ್‌ ಆಡಳಿತವೇ ಜವಾಬ್ದಾರಿ. ಹಿರಿಯೂರು ವೃತ್ತ, ಹಳೇ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಸಂಚಾರ ಪೊಲೀಸ್‌ ಪಡೆಗಳನ್ನು ನೇಮಿಸಲಾಗಿದೆ. ಈ ಭಾಗಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳ ಬಳಿ ವಾಹನ ನಿಲ್ಲಿಸಲು ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಸಂಚಾರ ನಿಯಮ ಉಲ್ಲಂಘನೆ ಕುರಿತು ನಿತ್ಯ ಪ್ರಕರಣಗಳು ದಾಖಲಾಗುತ್ತಿವೆ. ವಾಹನ ನಿಲುಗಡೆಗೆ ಶೀಘ್ರ ಸ್ಥಳಾವಕಾಶ ಕಲ್ಪಿಸಲಾಗುವುದು’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ತಿಮ್ಮಣ್ಣ ಮಾಹಿತಿ ನೀಡಿದರು.

ಏಕಮುಖ ರಸ್ತೆ ಕಲ್ಪಿಸಿ

ಖಾಸಗಿ ಬಸ್‌ ನಿಲ್ದಾಣದ ಬಳಿಯೂ ದ್ವಿಚಕ್ರ ವಾಹನ ಕಾರುಗಳ ಓಡಾಟ ತುಸು ಜೋರಾಗಿಯೇ ಇರುತ್ತದೆ. ನಿತ್ಯ ಹತ್ತಾರು ಬಸ್ ಆಟೊ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಜತೆಗೆ ರಸ್ತೆಯುದ್ದಕ್ಕೂ ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸುತ್ತಾರೆ. ಈ ಸಂಚಾರ ದಟ್ಟಣೆ ಎದುರಿಸಿ ಬಸ್‌ ನಿಲ್ದಾಣ ತಲುಪಲು ಹರಸಾಹಸ ಪಡಬೇಕು. ಮಠದ ಹೊಂಡದ ರಸ್ತೆ (ಗುರು ಒಪ್ಪತ್ತಸ್ವಾಮಿ ಮಠದ ರಸ್ತೆ) ಏಕಮುಖ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಆಗ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು. ವಾಹನಗಳ ಸಂಚಾರವೂ ಸುಗಮವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಬ್ಯಾಂಕ್‌ ಹಾಗೂ ಪೊಲೀಸ್‌ ಇಲಾಖೆಗೆ ತಿಳಿಸಲಾಗಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತಿಳಿವಳಿಕೆ ಪತ್ರ ರವಾನಿಸಲಾಗುವುದು.
ತಿಮ್ಮರಾಜು, ಪುರಸಭೆ ಮುಖ್ಯಾಧಿಕಾರಿ
ಹೊಸದುರ್ಗದ ಬ್ಯಾಂಕ್‌ವೊಂದರ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ದ್ವಿಚಕ್ರ ವಾಹನಗಳು
ಹೊಸದುರ್ಗದ ಬ್ಯಾಂಕ್‌ವೊಂದರ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ದ್ವಿಚಕ್ರ ವಾಹನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT