ಮಂಗಳವಾರ, ಸೆಪ್ಟೆಂಬರ್ 21, 2021
23 °C
ಮೂರು ವರ್ಷ ಕಳೆದರೂ ಪೂರ್ಣಗೊಳ್ಳದ ಆಶ್ರಯ ಮನೆ, ಶೌಚಾಲಯ

ಚಿತ್ರದುರ್ಗ: ಬಾಲಕಿ ಬಲಿಗೆ ಕಾರಣವಾಯಿತೇ ಬಿಡುಗಡೆಯಾಗದ ಅನುದಾನ?

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕನಸಿನ ಸೂರು ನಿರ್ಮಿಸಿಕೊಳ್ಳುವ ಬಹುದಿನಗಳ ಬಯಕೆಗೆ ಇಷ್ಟೊಂದು ದುಬಾರಿ ಬೆಲೆ ತೆರಬೇಕಾದ ಸಂದರ್ಭ ಎದುರಾಗಬಹುದು ಎಂಬುದನ್ನು ಊಹಿಸಿರದ ಕುಟುಂಬ ‘ಕರ್ಮ ಸಿದ್ಧಾಂತ’ದ ತಳಹದಿಯಲ್ಲಿ ತಪ್ಪು ಹುಡುಕತೊಡಗಿದೆ. ಆಶ್ರಯ ಮನೆಗೆ ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡಿದ್ದರೆ ಬಹುಶ ಇಂತಹದೊಂದು ದುರಂತ ಸಂಭವಿಸುತ್ತಿರಲಿಲ್ಲ ಎಂದು ಇಲ್ಲಿಗೆ ಭೇಟಿ ನೀಡಿದ ವರು ಮಾತನಾಡಿಕೊಳ್ಳುತ್ತಿದ್ದರು.

ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವ್ಯವಸ್ಥೆಯ ಮತ್ತೊಂದು ಕರಾಳತೆಯನ್ನು ತೆರೆದಿಡುತ್ತದೆ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಗ್ರಾಮಕ್ಕೆ ಭೇಟಿ ನೀಡುವ ಬಹುತೇಕರ ಕಣ್ಣಾಲಿಗಳು ಒದ್ದೆಯಾಗುತ್ತಿವೆ.

ನೆರಕೆಯಲ್ಲಿ ಕಾಲ ಕಳೆಯುತ್ತಿದ್ದ ಕುಟುಂಬ ಶಾಶ್ವತ ಸೂರು ನಿರ್ಮಿಸಿಕೊಳ್ಳಲು ದಶಕದಿಂದ ಕಷ್ಟಪಟ್ಟಿದೆ. ಆಶ್ರಯ ಮನೆಗೆ ಕಾಯುತ್ತ ದಿನಗಳನ್ನು ದೂಡಿದೆ. ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ನೀಡಿದ ಸಹಕಾರದಿಂದ ಆಶ್ರಯ ಮನೆ ಮಂಜೂರಾಗಿದೆ. ಮನೆ ಕಟ್ಟಿಕೊಳ್ಳಲು ಗುಡಿಸಲು ಕೆಡವಿದ ಕುಟುಂಬ ಸಮೀಪದಲ್ಲೇ ಇದ್ದ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡಿದೆ. ಸಕಾಲಕ್ಕೆ ಅನುದಾನ ಬಿಡುಗಡೆಯಾಗಿದ್ದರೆ ಸ್ವಂತ ಸೂರಿನ ಕನಸು ನನಸಾಗಿ ವರ್ಷಗಳೇ ಕಳೆದಿರುತ್ತಿದ್ದವು. ಶೌಚಾಲಯಕ್ಕೆ ಬಯಲು ಆಶ್ರಯಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿರಲಿಲ್ಲ.

‘ಮನೆ ಮಂಜೂರಾತಿ ಸಿಕ್ಕ ತಕ್ಷಣ ಏಳು ಅಡಿಯ ಅಡಿಪಾಯವನ್ನು ಒಬ್ಬನೇ ತೆಗೆದೆ. ಮನೆ ನಿರ್ಮಾಣಕ್ಕೆ ಮತ್ತೊಬ್ಬರ ನೆರವು ಪಡೆದು ಗುತ್ತಿಗೆ ನೀಡಿದೆ. ಮನೆ ಕಟ್ಟುವ ಕಾರ್ಯದಲ್ಲಿ ಕೂಲಿಯಂತೆ ನಾನೂ ಕೆಲಸ ಮಾಡಿದೆ. ಆದರೆ, ಹಣ ಹೊಂದಿಸಲು ಆಗಲಿಲ್ಲ’ ಎಂದು ದುಃಖಿತರಾದರು ಕೊಲೆಯಾದ ಬಾಲಕಿಯ ತಂದೆ.

ಆಶ್ರಯ ಮನೆಗಳಿಗೆ ನಾಲ್ಕು ಹಂತಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಅಡಿಪಾಯ ಸಿದ್ಧವಾದ ತಕ್ಷಣ ಮೊದಲ ಕಂತು, ಏಳು ಅಡಿ ಗೋಡೆ ನಿರ್ಮಾಣವಾದಾಗ ಎರಡನೇ ಕಂತು, ಚಾವಣಿ ನಿರ್ಮಿಸಿದಾಗ ಮೂರನೇ ಕಂತು ಹಾಗೂ ಪೂರ್ಣ ಸಿದ್ಧವಾದ ಬಳಿಕ ನಾಲ್ಕನೇ ಕಂತು ಹಣ ಮಂಜೂರಾಗುತ್ತದೆ. ಹೀಗೆ ಕಂತುಗಳಲ್ಲಿ ಹಣ ಮಂಜೂರಾಗಲು ವರ್ಷಗಳೇ ಹಿಡಿದಿವೆ.

‘ಕಂತಿನ ಹಣ ಮಂಜೂರಾದರೆ ಮಾತ್ರ ಮನೆ ನಿರ್ಮಾಣದ ಮುಂದಿನ ಕಾರ್ಯ ಸಾಗುತ್ತಿತ್ತು. ಪ್ರತಿ ಕಂತಿನ ಸಂದರ್ಭದಲ್ಲಿ ನಾಲ್ಕು, ಆರು, ಎಂಟು, ಹತ್ತು ತಿಂಗಳು ವಿಳಂಬವಾಗಿದೆ. ಕೈಯಲ್ಲಿ ಹಣ ಇಲ್ಲದಿರುವ ಕಾರಣಕ್ಕೆ ಸಕಾಲಕ್ಕೆ ಮನೆ ನಿರ್ಮಿಸಿಕೊಳ್ಳಲು ಆಗಲಿಲ್ಲ. ಈಗ ಮನೆ ಪೂರ್ಣಗೊಂಡಿದ್ದು, ಆ.20ರಂದು ಗೃಹ ಪ್ರವೇಶ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ನೂತನವಾಗಿ ನಿರ್ಮಾಣದ ಶೌಚಾಲಯವನ್ನು ಗೃಹ ಪ್ರವೇಶದ ಬಳಕವೇ ಬಳಕೆ ಮಾಡಲು ನಿರ್ಧರಿಸಿದ್ದೆವು’ ಎಂದು ಅವರು ಗದ್ಗದಿತರಾದರು.

21X29 ಅಡಿಯ ಮನೆ ಗೃಹ ಪ್ರವೇಶಕ್ಕೆ ಸಿದ್ಧವಾಗಿದೆ. ಆದರೆ, ಕುಟುಂಬ ಮಾತ್ರ ಶೋಕ ಸಾಗರದಲ್ಲಿ ಮುಳುಗಿದೆ. ‘ಇಂತಹದೊಂದು ಕಷ್ಟವನ್ನು ಯಾರಿಗೂ ನೀಡಬೇಡ ದೇವರೆ...’ ಎಂದು ದುಃಖಿಸುತ್ತಿದ್ದಾರೆ ಬಾಲಕಿಯ ತಾಯಿ. ಅವರನ್ನು ಸಂತೈಸುವ ಧೈರ್ಯ ಯಾರಲ್ಲಿಯೂ ಇಲ್ಲ. ದುಃಖದ ಕಡಲಲ್ಲಿ ಮೂರು ದಿನಗಳಿಂದ ಮುಳುಗಿದರೂ ಕಣ್ಣೀರ ಒರತೆ ಇನ್ನೂ ಬತ್ತಿಲ್ಲ.

ಮನೆಯ ಮುಂಭಾಗದ ಮಾರಮ್ಮನ ದೇಗುಲಕ್ಕೆ ಹೊಂದಿಕೊಂಡ ಸಮುದಾಯ ಭವನದಲ್ಲಿ ಕುಟುಂಬ ನೆಲೆಸಿದೆ. ಚಿಕ್ಕ ಕೊಠಡಿಯಂತೆ ಕಾಣುವ ಈ ಕಟ್ಟಡ ಕಂಡವರಿಗೆ ‘ಭವನ’ದ ಕಲ್ಪನೆಯನ್ನು ಮರು ಸೃಷ್ಟಿಸಿಕೊಳ್ಳಬೇಕಾಗಬಹುದು. ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯು 11 ವರ್ಷದ ಸಹೋದರಿ, 9 ವರ್ಷದ ಸಹೋದರ ಹಾಗೂ ಪೋಷಕರೊಂದಿಗೆ ಇಲ್ಲಿ ವಾಸವಾಗಿದ್ದರು. ಭವನದ ಬೇಲಿಯ ಸಮೀಪದಲ್ಲಿ ಬಚ್ಚಲು ನಿರ್ಮಿಸಿಕೊಳ್ಳಲಾಗಿದೆ. ನೆರಕೆ ಕಡ್ಡಿ, ಹರಿದ ಸೀರೆಯಿಂದ ಮರೆ ಮಾಡಿಕೊಂಡಿದ್ದಾರೆ. ಬಾಲಕಿಯರು ಹಾಗೂ ಅವರ ತಾಯಿ ಸ್ನಾನಕ್ಕೆ ರಾತ್ರಿಯವರೆಗೆ ಕಾಯುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.