ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಕುರಿತು ಸಿಎಂ ಜತೆ ಚರ್ಚೆ: ಶಿವಾಚಾರ್ಯ ಸ್ವಾಮೀಜಿ

Last Updated 19 ಜುಲೈ 2022, 13:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಭೂಸ್ವಾಧೀನ ಹಾಗೂ ಜಗಳೂರು ಶಾಖಾ ಕಾಲುವೆ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುವುದಾಗಿ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶ್ವಾಸನೆ ನೀಡಿದ್ದಾರೆ.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳು ಸದ್ದರ್ಮ ನ್ಯಾಯಪೀಠದಲ್ಲಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಸೋಮವಾರ ಮಾತುಕತೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕುಂಠಿತಗೊಂಡಿರುವುದು ಹಾಗೂ ತುಂಗಭದ್ರಾ ನದಿಯಿಂದ ಚಿತ್ರದುರ್ಗ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ ಕುರಿತು ಚರ್ಚಿಸಿದರು.

‘ತುಂಗಭದ್ರಾ ನದಿಯಿಂದ ಈಗಾಗಲೇ ಭರಮಸಾಗರ ಕೆರೆಗೆ ನೀರು ತರಲಾಗಿದೆ. ಅಲ್ಲಿಂದ ಕಾತ್ರಾಳು ಹಾಗೂ ಇತರ ಕೆರೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಕೊಳವೆ ಮಾರ್ಗ ನಿರ್ಮಾಣಕ್ಕೆ ಒಂದಷ್ಟು ತಕರಾರುಗಳು ಕೇಳಿಬರುತ್ತಿವೆ. ತಕರಾರು ಬಗೆಹರಿದರೆ ಕಾತ್ರಾಳು ಕೆರೆಗೆ ನೀರು ಹರಿಯಲಿದೆ’ ಎಂದು ಹೇಳಿದರು.

‘ತಾಲ್ಲೂಕಿನ ಸುಲ್ತಾನಿಪುರ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಲು ಉದ್ದೇಶಿಸಲಾಗಿತ್ತು. ಈ ಕೆರೆಯು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸೇರಿದ್ದು, ನೀರು ತುಂಬಿಸಲು ತೊಡಕು ಎದುರಾಗಿದೆ. ಸುಲ್ತಾನಿಪುರ ರೈತರು ತುಂಗಭದ್ರಾ ನದಿಯಿಂದಲೇ ನೀರು ಕೊಡುವಂತೆ ನ್ಯಾಯಪೀಠವನ್ನು ಕೋರಿಕೊಂಡಿದ್ದಾರೆ. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳನ್ನು ಸದ್ದರ್ಮ ಪೀಠಕ್ಕೆ ಕರೆಯಿಸಿ ಚರ್ಚಿಸಲಾಗಿದೆ’ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ದಾವಣಗೆರೆ ಜಿಲ್ಲೆಯ ಕೆಲವರು ಆಕ್ಷೇಪಿಸುತ್ತಿರುವುದಕ್ಕೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ‘ನೀರಿನ ವಿಚಾರದಲ್ಲಿ ಎಲ್ಲ ರೈತರೂ ಒಂದೇ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಜಿ.ಬಿ.ಶೇಖರ್, ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT