ಬುಧವಾರ, ಜನವರಿ 22, 2020
28 °C
ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಕ್ಕೆ ಸೂಚನೆ

ಭೂಸ್ವಾಧೀನ ವಿಳಂಬಕ್ಕೆ ಶಾಸಕರು ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಗೆ ಗುರುತಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮತ್ತು ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಇಲಾಖೆಯ ನಡುವೆ ಸಮನ್ವಯತೆ ಕಾಪಾಡಿಕೊಂಡು ಕಾಮಗಾರಿ ತ್ವರಿತಗೊಳಿಸಲು ತಾಕೀತು ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಕಾಮಗಾರಿ ಸ್ಥಿತಿ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ಭೂಮಿ ಕಳೆದುಕೊಂಡ ರೈತರು ಅಳಲು ತೋಡಿಕೊಂಡರು. ಬರದ ನಾಡಿಗೆ ನೀರು ತರುವ ಮಹತ್ತರ ಯೋಜನೆಯ ಸ್ಥಿತಿ ಅರಿಯಲು ಪ್ರತಿ ತಿಂಗಳು ಸಮನ್ವಯ ಸಭೆ ನಡೆಸಲು ಶಾಸಕರು ತೀರ್ಮಾನಿಸಿದರು.

ಚಿತ್ರದುರ್ಗ ಶಾಖಾ ಕಾಲುವೆಗೆ ಸಂಬಂಧಿಸಿದಂತೆ ರೈತರ ಒಪ್ಪಿಗೆ ಪಡೆದು ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಿದ್ದಾರೆ. ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಇಂತಹ ಸ್ಥಳದಲ್ಲಿ ಭೂಸ್ವಾಧೀನ ಪ್ರಕಿಯೆ ಹಾಗೂ ಭೂ ಪರಿಹಾರ ನಿಗದಿ ಕಾರ್ಯ ತ್ವರಿತವಾಗಿ ಆಗಬೇಕು. ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ಸಿಗಬೇಕು ಎಂದು ಶಾಸಕರು ಸೂಚಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ರೈತರು ಕಾಮಗಾರಿಗೆ ಸಹಕಾರ ನೀಡಿದ್ದಾರೆ. ತಾಲ್ಲೂಕುಗಳಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು. ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕುಗಳಿಗೆ ಹಂಚಿಕೆಯಾದ ನೀರಿನ ಪ್ರಮಾಣವನ್ನು ಕಡ್ಡಾಯವಾಗಿ ಕೊಡಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯಿಂದ ಬಿಟ್ಟು ಹೋದ ಕೆರೆಗಳಿಗೂ ನೀರು ಹರಿಸಬೇಕು. ಹಿರಿಯೂರು ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿ, ಚಿತ್ರದುರ್ಗ ತಾಲ್ಲೂಕಿನ ಕುರುಮರಡಿಕೆರೆ, ನಂದಿಪುರ, ಅನ್ನೇಹಾಳ್, ಗೊಡಬನಾಳ್, ಹುಲ್ಲೂರು ಕೆರೆಗಳಿಗೆ ನೀರು ತುಂಬಿಸಬೇಕು’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಅವರಿಗೆ ತಿಪ್ಪಾರೆಡ್ಡಿ ಸೂಚಿಸಿದರು.

827ಎಕರೆ ಭೂಸ್ವಾಧೀನ: ಚಿತ್ರದುರ್ಗ ಶಾಖಾ ಕಾಲುವೆಗೆ 15 ಗ್ರಾಮ ವ್ಯಾಪ್ತಿಯ 827 ಎಕರೆ 18 ಗುಂಟೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಅಗತ್ಯವಿದೆ.

‘ಶಾಖಾ ಕಾಲುವೆ ಮೂಲಕ 1.1ಹೆಕ್ಟೇರ್ ಕೃಷಿ ಭೂಮಿ ನೀರಾವರಿ ಸೌಲಭ್ಯ ಪಡೆಯಲಿದೆ. 119 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಭೂ ಸ್ವಾಧೀನಗೊಳ್ಳಲಿರುವ ಜಮೀನಿನ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ ಶ್ರೀಧರ್‌ ಮಾಹಿತಿ ನೀಡಿದರು.

ಭರಂಪುರ ವ್ಯಾಪ್ತಿಯಲ್ಲಿ 17 ಎಕರೆ, ಪಾಲವ್ವನಹಳ್ಳಿ- 58 ಎಕರೆ, ಮರಡಿದೇವಿಗೆರೆ-74 ಎಕರೆ, ಚಿಕ್ಕಸಿದ್ದವ್ವನಹಳ್ಳಿ-74 ಎಕರೆ, ದೊಡ್ಡಸಿದ್ದವ್ವನಹಳ್ಳಿ- 28 ಎಕರೆ, ದೊಡ್ಡಸಿದ್ದವ್ವನಹಳ್ಳಿ-111 ಎಕರೆ, ಕುಂಚಿಗನಾಳ್-17 ಎಕರೆ, ದ್ಯಾಮವ್ವನಹಳ್ಳಿ- 2 ಎಕರೆ, ಗೋನೂರು 58 ಎಕರೆ, ಕಲ್ಲೇನಹಳ್ಳಿ- 42 ಎಕರೆ, ಬೆಳಗಟ್ಟ-114 ಎಕರೆ, ಹಾಯ್ಕಲ್-31 ಎಕರೆ, ಪೇಲೂರಹಟ್ಟಿ- 77 ಎಕರೆ, ದ್ಯಾಮವ್ವನಹಳ್ಳಿ- 111 ಎಕರೆ, ಜನ್ನೇನಹಳ್ಳಿ- 7 ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದೆ.

ಚೆಕ್‌ ಬೌನ್ಸ್‌– ರೈತನ ಅಳಲು

ಬೆಳೆ ನಷ್ಟ ಪರಿಹಾರವಾಗಿ ಗುತ್ತಿಗೆದಾರ ನೀಡಿದ ಚೆಕ್‌ವೊಂದು ಬೌನ್ಸ್‌ ಆಗಿರುವುದಕ್ಕೆ ಸಂಬಂಧಿಸಿದಂತೆ ಚಿಕ್ಕಸಿದ್ದವ್ವನಹಳ್ಳಿ ರೈತ ವೀರಭದ್ರಪ್ಪ ಸಭೆಯಲ್ಲಿ ಅಳಲು ತೋಡಿಕೊಂಡರು.

ಅಂಗವಿಕಲ ರೈತನ ಐದು ಎಕರೆ ಹತ್ತು ಗುಂಟೆ ಜಮೀನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿದೆ. ಅಧಿಸೂಚನೆ ಪ್ರಕಟ, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಗುತ್ತಿಗೆದಾರ ಕಾಮಗಾರಿ ಆರಂಭಿಸಿದ್ದಾರೆ. ಪ್ರತಿ ಎಕರೆಗೆ ₹ 20 ಸಾವಿರ ಬೆಳೆನಷ್ಟ ಪರಿಹಾರ ನಿಗದಿ ಮಾಡಿದ್ದಾರೆ. ಇದಕ್ಕೆ ಭದ್ರಾ ಮೇಲ್ದಂಡೆ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

ಮುಂಗಾರು ಹಂಗಾಮಿನ ಬೆಳೆನಷ್ಟ ಪರಿಹಾರವಾಗಿ 2019ರ ಜೂನ್‌ ತಿಂಗಳಲ್ಲಿ ನೀಡಿದ ₹ 1.05 ಲಕ್ಷದ ಚೆಕ್‌ ಬೌನ್ಸ್‌ ಆಗಿದೆ. ಪರಿಹಾರವೂ ಇಲ್ಲದೇ, ಭೂಮಿಯೂ ಇಲ್ಲದೇ ರೈತ ಅತಂತ್ರ ಸ್ಥಿತಿಗೆ ಸಿಲುಕಿದ್ದಾನೆ.

ಅಧಿಕಾರಿಗಳಾದ ಸತ್ಯನಾರಾಯಣ, ಸೋಮಶೇಖರ್, ಕಲಾವತಿ, ಕುಲಕರ್ಣಿ, ವೆಂಕಟೇಶ್, ತಿಪ್ಪೇರುದ್ರಪ್ಪ, ಶ್ರೀಧರ್, ರಾಮಚಂದ್ರ, ರೈತ ಮುಖಂಡ ಕೊಂಚೆ ಶಿವರುದ್ರಪ್ಪ, ಬಸ್ತಿಹಳ್ಳಿ ಸುರೇಶ್ ಬಾಬು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು