ಗುರುವಾರ , ಡಿಸೆಂಬರ್ 3, 2020
23 °C
ಭೂಮಿ ಕಳೆದುಕೊಳ್ಳುತ್ತಿರುವ ರೈತರ ಒತ್ತಾಯ

ಪರಿಹಾರದ ಬದಲು ಜಮೀನು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಭೂಮಿಗೆ ನಗದು ಪರಿಹಾರದ ಬದಲು ಪರ್ಯಾಯ ಜಮೀನು ನೀಡಿ ಎಂದು ಭೂಮಿ ಕಳೆದುಕೊಳ್ಳುತ್ತಿರುವ ರೈತರು ಸರ್ಕಾರವನ್ನು ಒತ್ತಾಯಿಸಿದರು.

ತಾಲ್ಲೂಕಿನ ಕಲ್ಲೇನಹಳ್ಳಿ ಹಾಗೂ ಬೆಳಗಟ್ಟ ಗ್ರಾಮದಲ್ಲಿ ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ ಹಾಗೂ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುನರ್ ವಸತಿ, ಪುನರ್ ವ್ಯವಸ್ಥೆ ಸಭೆಯಲ್ಲಿ ರೈತರು ಈ ಬೇಡಿಕೆ ಮುಂದಿಟ್ಟರು.

‘ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದೇವೆ. ಆದರೆ, ಸರ್ಕಾರ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲ. ಬೆಳೆಗೆ ಸರಿಯಾದ ವಿಮೆ ಕೂಡ ಪಾವತಿಸುತ್ತಿಲ್ಲ. ಇದರಿಂದ ಸಮಸ್ಯೆಗೆ ಸಿಲುಕಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯಿಂದ ಆರಂಭವಾಗುವ ಭದ್ರಾ ಮೇಲ್ದಂಡೆ ನಾಲೆ ಗೋನೂರು, ಕಲ್ಲೇನಹಳ್ಳಿ, ಬೆಳಗಟ್ಟ, ಹಾಯ್ಕಲ್, ಪೇಲೂರಹಟ್ಟಿ ಹಾಗೂ ದ್ಯಾಮವ್ವನಹಳ್ಳಿ ಮೂಲಕ ಚಳ್ಳಕೆರೆ ತಾಲ್ಲೂಕು ಸೇರಲಿದೆ. ಭೂಮಿ ಕಳೆದುಕೊಳ್ಳುತ್ತಿರುವ ರೈತರ ಅಹವಾಲು ಆಲಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು.

‘ಭೂಮಿ ಪರಿಹಾರ ಹಾಗೂ ಬೆಳೆ ಪರಿಹಾರವನ್ನು ಆದಷ್ಟು ಬೇಗ ನೀಡಲು ಕ್ರಮ ಕೈಗೊಳ್ಳಲಾಗುತ್ತದ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಆಶ್ವಾಸನೆ ನೀಡಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಮುಂದಿನ ಜನವರಿ ಒಳಗೆ ರೈತರಿಗೆ ನ್ಯಾಯಯುತ ಪರಿಹಾರ ತಲುಪಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಭೂಸ್ವಾಧೀನಾಧಿಕಾರಿ ಹರಿಶಿಲ್ಪ, ತಹಶೀಲ್ದಾರ್‌ ವೆಂಕಟೇಶಯ್ಯ, ಕಾರ್ಯಪಾಲಕ ಎಂಜಿನಿಯರ್‌ ಶ್ರೀಧರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌.ಎಸ್‌.ನಾಗರಾಜ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು