ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದರ್ಶನ ಪಡೆದು ಪುನೀತರಾದ ಭಕ್ತರು

ದೇಗುಲಗಳಲ್ಲಿ ಸರಳವಾಗಿ ನಡೆದ ವೈಕುಂಠ ಏಕಾದಶಿ, ಕೋವಿಡ್‌ ಮಾರ್ಗಸೂಚಿ ಪಾಲನೆ
Last Updated 14 ಜನವರಿ 2022, 6:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್, ಓಮೈಕ್ರಾನ್ ಸೋಂಕಿನ ಆತಂಕದಲ್ಲೇ ಸರ್ಕಾರದ ಮಾರ್ಗಸೂಚಿಯ ಅನ್ವಯ ಜಿಲ್ಲೆಯಾದ್ಯಂತ ಗುರುವಾರ ವೈಕುಂಠ ಏಕಾದಶಿಯನ್ನು ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇಗುಲದ ಒಳ ಆವರಣದಲ್ಲಿ ಆಚರಿಸಲಾಯಿತು.

ಮುಂಜಾನೆಯಿಂದಲೇ ಇಲ್ಲಿಯ ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ, ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ, ತಿಪ್ಪಜ್ಜಿ ಸರ್ಕಲ್ ಬಳಿಯ ಪ್ರಸನ್ನ ವೆಂಕಟರಮಣ ಸ್ವಾಮಿ, ಆನೆಬಾಗಿಲ ಬಳಿಯ ಲಕ್ಷ್ಮೀ ವೆಂಕಟೇಶ್ವರ, ಕೋಟೆಯ ವೇಣುಗೋಪಾಲ ಸ್ವಾಮಿ, ಜೆಸಿಆರ್ ವೃತ್ತದ ಇಸ್ಕಾನ್ ಮಂದಿರ, ಬ್ಯಾಂಕ್ ಕಾಲೊನಿಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಹಾಗೂ ಕೆಳಗೋಟೆಯ ಚನ್ನಕೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ಪೂಜೆಗಳು ಜರುಗಿದವು.

ದರ್ಶನಕ್ಕೆ ಕಡಿಮೆ ಕಾಲಾವಕಾಶವಿದ್ದ ಕಾರಣ ಭಕ್ತರು ಬೆಳಿಗ್ಗೆ 6.30ರವೇಳೆಗೆ ದೇವಸ್ಥಾನಗಳಿಗೆ ಬಂದಿದ್ದರು. ದೇಗುಲದ ಆವರಣದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಸಮಿತಿಯವರು ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಸ್ಯಾನಿಟೈಸರ್ ಹಾಕಿ ದರ್ಶನಕ್ಕೆ ಅವಕಾಶ ನೀಡಿದ್ದು ಕಂಡು ಬಂದಿತು.

ತಿಪ್ಪಜ್ಜಿ ವೃತದ ದೇವಸ್ಥಾನದಲ್ಲಿ ಜನಜಂಗುಳಿ ನಿರ್ಮಾಣವಾಗುತ್ತದೆ ಎಂಬ ಸೂಚನೆಯಿದ್ದ ಕಾರಣ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಭಕ್ತರು ಸಹ ಎರಡು ಡೋಸ್ ಲಸಿಕೆ ಪಡೆದಿರುವುದನ್ನು ತೋರಿಸಿ ಅಂತರದೊಂದಿಗೆ ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು.

ಮಾರ್ಗಸೂಚಿ ಇತಿಮಿತಿಯಲ್ಲಿ ವೆಂಕಟೇಶ್ವರ ವೈಭವದೊಂದಿಗೆ ವೈಕುಂಠ ದರ್ಶನಕ್ಕೆ ವಿಶೇಷ ಅಲಂಕಾರದೊಂದಿಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಾತ್ರ ಬೆಳಿಗ್ಗೆ 6.3ಕ್ಕೆ ಪೂಜೆ, ಸಂಕಲ್ಪ, ಮಹಾಮಂಗಳಾರತಿ ನೆರವೇರಿಸಲಾಯಿತು. 50 ಭಕ್ತರ ಒಂದು ತಂಡದಂತೆ ದರ್ಶನಕ್ಕೆ ಅವಕಾಶ ನೀಡಿ ಬೆಳಿಗ್ಗೆ 10.30ರ ಸುಮಾರಿಗೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಯಿತು.

ವೈಕುಂಠ ಏಕಾದಶಿ, ಧನುರ್ಮಾಸದ ನಿಮಿತ್ತ ಮೇಲುದುರ್ಗದ ಏಕನಾಥೇಶ್ವರಿ, ಕೋಟೆ ರಸ್ತೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಲಕ್ಷ್ಮಿ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ನಗರ ಪೊಲೀಸ್ ಠಾಣೆ ಆವರಣದ ಕಣಿವೆ ಮಾರಮ್ಮ ಸೇರಿ ವಿವಿಧ ದೇವಸ್ಥಾನಗಳಲ್ಲಿ ಪೂಜೆಗಳು ನೆರವೇರಿದವು. ವಿಶೇಷ ಸೇವೆಗಳನ್ನು ಹೊರತುಪಡಿಸಿ ತೀರ್ಥ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

ಹೂವಿನ ಅಲಂಕಾರ

ವೈಕುಂಠ ಏಕಾದಶಿ ನಿಮಿತ್ತ ವೆಂಕಟೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ಸಕಲಾಭರಣ, ತುಳಸಿ, ದುಂಡು ಮಲ್ಲಿಗೆ, ಕನಕಾಂಬರ, ಸಂಪಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ದೇವರನ್ನು ಅಲಂಕರಿಸಲಾಗಿತ್ತು. ಭಕ್ತರು ಸಪ್ತಗಿರಿ ವಾಸ ಶ್ರೀನಿವಾಸ, ಶ್ರೀವೆಂಕಟೇಶ, ಗೋವಿಂದ, ನಾರಾಯಣ, ಶ್ರೀಹರಿ ಸೇರಿದಂತೆ ಶ್ರೀವಿಷ್ಣುವಿನ ನಾನಾ ನಾಮಸ್ಮರಣೆಯ ಉದ್ಘಾರ ಘೋಷಗಳನ್ನು ಮೊಳಗಿಸಿದರು.

ದೇಗುಲಗಳಲ್ಲಿ ವಿಶೇಷ ಪೂಜೆ

ಮೊಳಕಾಲ್ಮುರು: ತಾಲ್ಲೂಕಿನ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ದೇಗುಲಗಳಲ್ಲಿ ಗುರುವಾರ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು.

ಪಟ್ಟಣದ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ತೊಟ್ಟಿಲು ಪೂಜೆ ನೆರವೇರಿಸಲಾಯಿತು. ದೇವರ ದರ್ಶನ ಪಡೆದ ಭಕ್ತರು ದ್ವಾರದ ಮೂಲಕ ಹೊರ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಪಾಂಡುರಂಗಸ್ವಾಮಿ, ರಾಘವೇಂದ್ರಸ್ವಾಮಿ ದೇವಸ್ಥಾನಗಳಲ್ಲಿ ಹಲವು ಪೂಜೆಗಳು ಜರುಗಿದವು.

ಬ್ರಹ್ಮಗಿರಿ ಬೆಟ್ಟ,ದೇವಸಮುದ್ರ ಜಟಂಗಿ ರಾಮೇಶ್ವರ, ರಾಂಪುರ ಪರುಶುರಾಮವದೂತರ ಮಠ, ಮುದುಕೇಶ್ವರ ಮಠ, ಬಾಂಡ್ರವಿ ಸೇರಿ ಹಲವು ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT