ಬುಧವಾರ, ಜೂನ್ 29, 2022
24 °C
ವಿವಿಸಾಗರದ ಮತ್ತೊಂದು ದಡ ಸೇರಿದ್ದವರು ಪಾರು

ತೆಪ್ಪ ಹತ್ತಿ, ದಿಕ್ಕು ತಪ್ಪಿ ಅಪಾಯದಲ್ಲಿ ಸಿಲುಕಿದ್ದ ಯುವಕರ ರಕ್ಷಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದಲ್ಲಿ ಭಾನುವಾರ ರಾತ್ರಿ ಹುಟ್ಟುಹಬ್ಬ ಆಚರಣೆಗೆ ಹೋದ ಯುವಕರ ಗುಂಪೊಂದು ತೆಪ್ಪ ಹತ್ತಿ, ದಿಕ್ಕು ತಪ್ಪಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ಬಬ್ಬೂರು ಗ್ರಾಮದ ಸಂಪತ್, ಯೋಗೇಶ್ ಹಾಗೂ ಧನುಷ್ ಸಾವಿನ ದವಡೆಯಿಂದ ಪಾರಾಗಿ ಬಂದವರು.

ಬಬ್ಬೂರಿನ 9 ಜನ ಯುವಕರು ಭಾನುವಾರ ಸಂಜೆ ಹುಟ್ಟುಹಬ್ಬ ಆಚರಿಸಲು ಆರನಕಣಿವೆ ರಂಗನಾಥ
ಸ್ವಾಮಿ ದೇವಸ್ಥಾನದ ಕೆಳಭಾಗದಲ್ಲಿರುವ ವಾಣಿವಿಲಾಸ ಜಲಾಶಯದ ಹಿನ್ನೀರು ಭಾಗಕ್ಕೆ ಹೋಗಿದ್ದರು. ಕೆಲವರು ದಡದಲ್ಲಿದ್ದ ತೆಪ್ಪದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಗೂಟಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡಿದೆ. ಒಂದಿಬ್ಬರು ಹೆದರಿ ತೆಪ್ಪದಿಂದ ಜಿಗಿದು ದಡಕ್ಕೆ ಬಂದಿದ್ದಾರೆ. ಮೂವರು ಮಾತ್ರ ತೆಪ್ಪದಲ್ಲಿ ಉಳಿದಿದ್ದರು. ಅದೇ ಸಮಯಕ್ಕೆ ಜೋರಾಗಿ ಬೀಸುತ್ತಿದ್ದ ಗಾಳಿ ತೆಪ್ಪವನ್ನು ದಡದಿಂದ ದೂರಕ್ಕೆ ಎಳೆದೊಯ್ದಿದೆ.

ಎಷ್ಟು ಹೊತ್ತಾದರೂ ಗೆಳೆಯರ ಸುಳಿವು ಕಾಣದಿದ್ದರಿಂದ ಗಾಬರಿಗೊಂಡ ಸ್ನೇಹಿತರು ನೆನಪಿಗೆ ಬಂದವರಿಗೆಲ್ಲ ದೂರವಾಣಿ ಕರೆ ಮಾಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕ್ರೀಡಾ ಇಲಾಖೆ ಸಿಬ್ಬಂದಿ ಸಹಾಯದಿಂದ ಕಣ್ಮರೆಯಾದ ಯುವಕರ ಪತ್ತೆ ಕಾರ್ಯಕ್ಕೆ ಮುಂದಾದರು. ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮದ ಹಿನ್ನೀರಿನವರೆಗೆ ಹುಡುಕಾಟ ನಡೆಸಿದರೂ ತೆಪ್ಪ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಹೊಸದುರ್ಗದ ಗಡಿಭಾಗದಲ್ಲಿ ಜಲಾಶಯದ ದಂಡೆಯ ಮೇಲೆ ಕುಳಿತಿದ್ದ ಸಂಪತ್, ಯೋಗೇಶ್ ಹಾಗೂ ಧನುಷ್ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಕರೆತಂದಿದ್ದಾರೆ.

ತೆಪ್ಪದಲ್ಲಿ ಧೈರ್ಯ ಕಳೆದುಕೊಳ್ಳದೆ ಗಾಳಿ ಬೀಸಿದತ್ತ ಸಾಗಿ, ದಡ ಸೇರಿದ್ದ ಯುವಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದೆಡೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಕೆಲವರಿಂದ ಟೀಕೆಗೆ ಗುರಿಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಎಸ್ಐ ಶಶಿಕಲಾ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು