ಚಿತ್ರದುರ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಮಾತ್ರ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದಾರೆ. ರಾಜ್ಯದ ಜನರ ಕಷ್ಟ ಕೇಳದ ಈ ಸರ್ಕಾರ ಕೆಟ್ಟ, ದುಷ್ಟ, ದರಿದ್ರ ಸರ್ಕಾರವಾಗಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಸೋಮವಾರ ಸಂಜೆ ಬಿಜೆಪಿ ಸದಸ್ಯತ್ವ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು ‘ಲೋಕಸಭೆ ಚುನಾವಣೆ ಬಳಿಕ ಗೃಹಲಕ್ಷ್ಮಿ ಹಣ ಬಂದಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗ ಐದಾರು ತಿಂಗಳು ಹಣ ಹಾಕಬಹುದು. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಬಿಡುಗಡೆ ಮಾಡಿದ್ದ ಅನುದಾನವನ್ನು ಕಾಂಗ್ರೆಸ್ ತಡೆಹಿಡಿದಿದೆ. ಎಸ್‌ಸಿಪಿ– ಟಿಎಸ್‌ಪಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಈಗ ಮುಖ್ಯಮಂತ್ರಿಗಳು ದಲಿತ ಸಮುದಾಯಗಳ ಪರ ಮೊಸಳೆ ಕಣ್ಣೀರು ಇಡುತ್ತಿದ್ದಾರೆ. ಮುಡಾ ಹಗರಣದ ವಿರುದ್ಧ ನಾವು ಪಾದಯಾತ್ರೆ ಆರಂಭಿಸಿದಾಗ, 4 ದಿನ ಮೈಸೂರಿನಲ್ಲೇ ಕುಳಿತಿದ್ದ ಮುಖ್ಯಮಂತ್ರಿ ಅದಕ್ಕೆ ವಿರುದ್ಧವಾಗಿ ಜನಾಂದೋಲನ ಯಾತ್ರೆ ಮಾಡಿದರು. ಅವರ ಗೊಡ್ಡು ಬೆದರಿಕೆಗೆ ಹೆದರದೆ ನಾವು ಯಶಸ್ವಿಯಾಗಿ ಪಾದಯಾತ್ರೆ ಮುಗಿಸಿದೆವು’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂಟಿ ಕಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಕಚ್ಚಾಟ ಶುರುವಾಗಿದೆ. ದಲಿತರಿಗೆ, ರೈತರಿಗೆ ಅನ್ಯಾಯ ಮಾಡಿರುವ ಸಿದ್ದರಾಮಯ್ಯ ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೋ ಗೊತ್ತಿಲ್ಲ. ಶೀಘ್ರವೇ ಕಾಂಗ್ರೆಸ್ ಸರ್ಕಾರ ಬಿದ್ದರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಅವರು ಹೇಳಿದರು.