ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ಸ್ಥಾನ ಅಧಿಕಾರವಲ್ಲ, ಹೊಣೆಗಾರಿಕೆ: ವಿಜಯೇಂದ್ರ

Published 16 ನವೆಂಬರ್ 2023, 15:42 IST
Last Updated 16 ನವೆಂಬರ್ 2023, 15:42 IST
ಅಕ್ಷರ ಗಾತ್ರ

ಸಿರಿಗೆರೆ: ‘ನನಗೆ ದೊರೆತಿರುವ ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರವಲ್ಲ. ಅದು ಹೊಣೆಗಾರಿಕೆ. ರಾಜ್ಯದ ಎಲ್ಲ ಹಿರಿಯರ ಮಾರ್ಗದರ್ಶನದಿಂದ ಅದನ್ನು ನಿಭಾಯಿಸುವೆ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿನ ತರಳಬಾಳು ಬೃಹನ್ಮಠಕ್ಕೆ ಗುರುವಾರ ಭೇಟಿ ನೀಡಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದರು.

‘ಹಾದಿಯಲ್ಲಿ ಕಲ್ಲುಮುಳ್ಳುಗಳೂ ಇವೆ. ಹಿರಿಯರ ಮಾರ್ಗದರ್ಶನದಲ್ಲಿ ಅವುಗಳನ್ನು ದಾಟಿಕೊಂಡು ಮುನ್ನಡೆಯುತ್ತೇನೆ. ಶಿಕಾರಿಪುರ ಕ್ಷೇತ್ರದ ಜನರು ಶಾಸನಸಭೆಗೆ ನನ್ನನ್ನು ಆಯ್ಕೆ ಮಾಡಿದ್ದರಿಂದ ಈ ಹೊಣೆಗಾರಿಕೆ ಸಂದಿದೆ’ ಎಂದರು.

‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಮಾತಿನಲ್ಲಿ ನಮ್ಮ ತಂದೆಗೆ ಅಪಾರ ವಿಶ್ವಾಸ. ಹಾಗಾಗಿಯೇ ಅವರು ಧರ್ಮಪೀಠಗಳಿಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ, ನಾಯಕ ಎಂಬ ಎಲ್ಲ ಬಿಗುಮಾನ ತೊರೆದು ವಿನೀತಭಾವದಿಂದ ಇರುತ್ತಿದ್ದರು. ಮಠದ ಶಿಷ್ಯನಾಗಿ ನಾನೂ ಸಹ ಅವರದೇ ದಾರಿಯಲ್ಲಿ ಹೆಜ್ಜೆ ಹಾಕುತ್ತೇನೆ. ಆ ಕೆಲಸದಲ್ಲಿ ತರಳಬಾಳು ಶ್ರೀಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಕೋರುತ್ತೇನೆ’ ಎಂದು ಹೇಳಿದರು.

‘ನನ್ನಿಂದ ತಪ್ಪುಗಳೇನಾದರೂ ಆದರೆ ಶ್ರೀಗಳು ಮಾರ್ಗದರ್ಶನ ಮಾಡಬೇಕು’ ಎಂದು ಮನವಿ ಮಾಡಿದರು.

‘ವಿಜಯೇಂದ್ರ ಅವರ ನೇಮಕ ಹಲವರಲ್ಲಿ ವಿಸ್ಮಯವನ್ನೂ, ಯುವಕರಲ್ಲಿ ಉತ್ಸಾಹವನ್ನು ತಂದಿದೆ. ಅವರು ಹೊಸ ಜವಾಬ್ದಾರಿಯಲ್ಲಿ ಒಳದನಿಗೆ ಕಿವಿಗೊಟ್ಟು ಕೆಲಸ ಮಾಡಬೇಕು. ಯಾರನ್ನೂ ವೈಯುಕ್ತಿಕವಾಗಿ ದೂಷಣೆ ಮಾಡದೆ, ವಿನಾಕಾರಣ ಟೀಕಿಸದೆ ನೀವು ಮಾಡಬೇಕಾಗಿರುವ ಕೆಲಸವನ್ನು ಮಾಡಿ’ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

‘ನಾವು ದೇಶದ ಪ್ರಜ್ಞಾವಂತ ಪ್ರಜೆ. ಪಕ್ಷಾತೀತರಾಗಿ ಎಲ್ಲಾ ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಸಾಮಾಜಿಕ ಕೆಲಸಗಳನ್ನು ಮಾಡಿದ್ದೇವೆ. ಭರಮಸಾಗರ ಏತ ನೀರಾವರಿ, ಹಳೇಬೀಡು ರಣಗಟ್ಟ ನೀರಾವರಿ ಯೋಜನೆ, ಹಾವೇರಿ ಜಿಲ್ಲೆಯ ಬ್ಯಾಡಗಿ ಹಾಗೂ ಅಣೂರು ಯೋಜನೆ, ಸಾಸ್ವೆಹಳ್ಳಿ ನೀರಾವರಿ ಯೋಜನೆಗಳು ಸರ್ಕಾರದ ನೆರವಿನಿಂದ ಜಾರಿಗೊಂಡಿವೆ. ಇವುಗಳಿಂದ ರೈತ ವರ್ಗಕ್ಕೆ ನೆರವಾಗಿದೆ. ಈ ಯೋಜನೆಗಳು ಬೇರೆ ಬೇರೆ ಸರ್ಕಾರಗಳು ಇದ್ದಾಗ ಮಂಜೂರಾಗಿದ್ದರೂ ಇವುಗಳಿಗೆ ಹಣ ಬಿಡುಗಡೆಯಾದದ್ದು ಬಿ.ಎಸ್.‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ’ ಎಂದು ಶ್ರೀಗಳು ಹೇಳಿದರು.

ಚಿತ್ರದುರ್ಗ, ಜಗಳೂರು, ಹೊಳಲ್ಕೆರೆ, ಹೊಸದುರ್ಗ, ಹರಿಹರ, ಶಿಕಾರಿಪುರ, ಹೊನ್ನಾಳಿ ಭಾಗಗಳಿಂದ ನೂರಾರು ಕಾರ್ಯಕರ್ತರು, ತಾಲ್ಲೂಕು ಮುಖಂಡರು ವಿಜಯೇಂದ್ರಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.

ಇದಕ್ಕೂ ಮುನ್ನ ಐಕ್ಯಮಂಟಪದಲ್ಲಿ ಶಿವಕುಮಾರಶ್ರೀ ಪ್ರತಿಮೆಗೆ ವಿಜಯೇಂದ್ರ ನಮನ ಸಲ್ಲಿಸಿದರು.

ಮಾಜಿ ಆಶಸಕ ಜಿ.ಎಚ್.‌ ತಿಪ್ಪಾರೆಡ್ಡಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಸಂಸದ ಜನಾರ್ದನ ಸ್ವಾಮಿ, ವಿಧಾನಪ‍ರಿಷತ್‌ ಸದಸ್ಯರಾದ ನಾರಾಯಣಸ್ವಾಮಿ, ಕೆ.ಎಸ್‌. ನವೀನ್‌, ಯುವ ಮೋರ್ಚಾದ ಶೈಲೇಶ್‌ ಕುಮಾರ್‌, ಕೋಗುಂಡೆ ಎಚ್.ಎಂ. ಮಂಜುನಾಥ್‌, ಜಿ.ಬಿ. ತೀರ್ಥಪ್ಪ ಮುಖಂಡರಾದ ಭೀಮಸಮುದ್ರದ ಅನಿತ್‌, ಲಿಂಗಮೂರ್ತಿ, ಕೆ.ಬಿ. ಮೋಹನ್‌, ಸಂದೀಪ ಹಂಚಿನಮನೆ ಿದ್ದರು.

ಸಂಘರ್ಷದಿಂದ ಸಹಮತದ ಕಡೆ ಬಂದಿದ್ದೇನೆ. ವಿಜಯೇಂದ್ರ ಅವರ ನೇಮಕ ಯುವಪಡೆಯನ್ನು ಹುರಿದುಂಬಿಸಿದೆ. ಪಕ್ಷ ಮತ್ತೆ ಬಲಿಷ್ಠವಾಗುತ್ತದೆ.
ಎಂ.ಪಿ. ರೇಣುಕಾಚಾರ್ಯ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT