ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ: ಎಂಜಿನಿಯರ್‌ ಅಮಾನತಿಗೆ ಶಿಫಾರಸು

ನೀರು ಪೂರೈಕೆ ಸಹಾಯಕ ಅಮಾನತು, ನೀರುಗಂಟಿಗಳಿಬ್ಬರು ಸೇವೆಯಿಂದ ವಜಾ
Published 3 ಆಗಸ್ಟ್ 2023, 16:02 IST
Last Updated 3 ಆಗಸ್ಟ್ 2023, 16:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯ ಕಲುಷಿತ ನೀರು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ನೀರು ಪೂರೈಕೆ ಸಹಾಯಕರೊಬ್ಬರನ್ನು ಅಮಾನತುಗೊಳಿಸಲಾಗಿದೆ. ನೀರುಗಂಟಿ ಸೇವೆ ಸಲ್ಲಿಸುತ್ತಿದ್ದ ಇಬ್ಬರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಗುರುವಾರ ಆದೇಶಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಇಬ್ಬರು ಎಂಜಿನಿಯರುಗಳನ್ನು ಅಮಾನತು ಮಾಡುವಂತೆ ಅವರು ಶಿಫಾರಸು ಮಾಡಿದ್ದಾರೆ.

ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ ಆರ್‌.ಗಿರಡ್ಡಿ, ಕಿರಿಯ ಎಂಜಿನಿಯರ್‌ ಎಸ್‌.ಆರ್‌.ಕಿರಣ್‌ ಕುಮಾರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಅವರು ನಗರಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ನೀರು ಹಂಚಿಕೆಯ ಹೊಣೆ ನಿಭಾಯಿಸುತ್ತಿದ್ದ ನಗರಸಭೆಯ ‘ಡಿ’ ಗ್ರೂಪ್‌ ನೌಕರ ಸಿ.ಎಚ್‌. ಪ್ರಕಾಶ ಬಾಬು ಎಂಬುವರನ್ನು ಅಮಾನತು ಮಾಡಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಕವಾಡಿಗರಹಟ್ಟಿಯ ನೀರುಗಂಟಿಗಳಾದ ಸುರೇಶ್‌ ಮತ್ತು ಪ್ರಕಾಶ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೌರಾಯುಕ್ತ ಶ್ರೀನಿವಾಸ್‌ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ.

ನಗರಸಭೆಯ 17ನೇ ವಾರ್ಡ್‌ನ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಸಾವು ಸಂಭವಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಬುಧವಾರ ಸೂಚನೆ ನೀಡಿದ್ದರು.

ನೀರು ಕುಡಿಯಲು ಯೋಗ್ಯವಾಗಿಲ್ಲ:

ಕವಾಡಿಗರಹಟ್ಟಿಗೆ ಪೂರೈಕೆಯಾಗಿದ್ದ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿ ನೀಡಿದೆ. ಕಲುಷಿತ ನೀರು ಕುಡಿದು ಅಸ್ವಸ್ಥರಾದವರ ಮಲದ ಮಾದರಿಯಲ್ಲಿ ಕಾಲರಾ ಹರಡಬಹುದಾದ ಸೂಕ್ಷ್ಮಾಣು ಸಹ ಪತ್ತೆಯಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಂಡ ಪ್ರಕರಣ ಬಹಿರಂಗಗೊಂಡ ಬಳಿಕ ಕವಾಡಿಗರ ಹಟ್ಟಿಯ 50,000 ಲೀಟರ್‌ ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್, ಮಿನಿ ಟ್ಯಾಂಕ್, ನಲ್ಲಿಯಿಂದ ಮನೆಗಳಿಗೆ ಪೂರೈಕೆ ಮಾಡಿದ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಅಸ್ವಸ್ಥರ ಸಂಖ್ಯೆ 149ಕ್ಕೆ ಏರಿಕೆ:

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ ಗುರುವಾರ 149ಕ್ಕೆ ಏರಿಕೆಯಾಗಿದೆ. ಗುರುವಾರ 51 ಜನರು ವಾಂತಿ–ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, 30 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಕವಾಡಿಗರಹಟ್ಟಿಯ 735 ಮನೆಗಳಲ್ಲಿ 220 ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗಿದೆ. ಈ ಕುರಿತು ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದ್ದು, ಆ ಪ್ರದೇಶದಲ್ಲಿ 24 ಗಂಟೆ ತಾತ್ಕಾಲಿಕ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT