ಚಿತ್ರದುರ್ಗ: ಕವಾಡಿಗರಹಟ್ಟಿಯ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಚಿಕಿತ್ಸೆಗೆ ದಾಖಲಾಗಿರುವವರ ಆರೋಗ್ಯ ವಿಚಾರಿಸಲು ಧಾವಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.
ಮಕ್ಕಳ ವಾರ್ಡ್‍ನಲ್ಲಿ ಸ್ವಚ್ಛತೆಯ ಕೊರತೆ, ವಾರ್ಡ್‍ಗಳಲ್ಲಿ ಸರಿಯಾದ ಬೆಡ್ ವ್ಯವಸ್ಥೆ ಇಲ್ಲದಿರುವುದು ಸಚಿವರ ಅಸಮಾಧಾನಕ್ಕೆ ಕಾರಣವಾಯಿತು. ಹಾಸಿಗೆಗಳು ಸ್ವಚ್ಛವಾಗಿಲ್ಲದಿರುವುದು, ಸಾರ್ವಜನಿಕರು ಮತ್ತು ರೋಗಿಗಳು ಆಸ್ಪತ್ರೆಯಲ್ಲಿ ಎಲ್ಲಂದರಲ್ಲಿ ಕುಳಿತು ಊಟ ಮಾಡುತ್ತಿರುವುದು ಅವ್ಯವಸ್ಥೆಗೆ ಕನ್ನಡಿ ಹಿಡಿಯಿತು. ಕುಡಿಯುವ ನೀರು, ರೋಗಿಗಳಿಗೆ ಊಟ ಉಪಚಾರದ ಕೊರತೆ ಕಂಡು ಸಚಿವರ ದಂಗಾದರು.
‘ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ. ಈಗಿರುವ ವಾರ್ಡ್‍ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ರೋಗಿಗಳು ದಾಖಲಾಗುತ್ತಿದ್ದಾರೆ’ ಎಂದು ಶಸ್ತ್ರಚಿಕಿತ್ಸಕ ಡಾ.ಎಚ್.ಬಸವರಾಜ ಸಚಿವರಿಗೆ ಸಮಜಾಯಷಿ ನೀಡಲು ಪ್ರಯತ್ನಿಸಿದರು.
‘ಜಿಲ್ಲಾ ಆಸ್ಪತ್ರೆಯ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಇರುವ ಕ್ರಮ ಹಾಗೂ ಯೋಜನೆಯನ್ನು ಸಿದ್ಧಪಡಿಸಿ ನೀಡಿ’ ಎಂದು ಸಚಿವರು ಸೂಚನೆ ನೀಡಿದರು.
ಯುರಾಲಾಜಿ ವಿಭಾಗದಲ್ಲಿ ದಾಖಲಾಗಿದ್ದ ಅಸ್ವಸ್ಥರೊಬ್ಬರು ‘ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ’ ಎಂದು ಸಚಿವರಲ್ಲಿ ಅಂಗಲಾಚಿದರು. ಸಚಿವರ ಪ್ರಶ್ನೆಗೆ ಪ್ರತಿಕ್ರಿಯಿಸಲು ಶುಶ್ರೂಷಕಿಯೊಬ್ಬರು ತಡಬಡಾಯಿಸಿದರು. ಸ್ಥಳದಲ್ಲೇ ಇದ್ದ ವೈದ್ಯರನ್ನು ಸಚಿವರು ತರಾಟೆ ತೆಗೆದುಕೊಂಡರು. ‘ನೀವು ಸರಿಯಾಗಿ ಮೇಲ್ವಿಚಾರಣೆ ನಡೆಸುತ್ತಿಲ್ಲ. ಪ್ರತಿರೋಗಿಯ ಕೇಸ್‌ಶೀಟ್ ಬೇಕಾಬಿಟ್ಟಿಯಾಗಿ ನಿರ್ವಹಿಸಲಾಗುತ್ತಿದೆ. ಪ್ರಕರಣದಲ್ಲಿ ಆಸ್ಪತ್ರೆ ದಾಖಲಾದವರಿಗೆ ಹೊರಗಿನಿಂದ ಅಶುಚಿತ್ವ ಆಹಾರ ನೀಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಇದ್ದರು.
ತಜ್ಞರ ಸಮಿತಿ ಭೇಟಿ
ಸಚಿವ ‘ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅಸ್ವಸ್ಥರ ಮೇಲೆ ನಿಗಾ ವಹಿಸಲು ಹಾಗೂ ಘಟನೆಯ ಕಾರಣಗಳನ್ನು ವಿಶ್ಲೇಷಿಸಲು ರಾಜ್ಯ ಮಟ್ಟದಿಂದ ತಜ್ಞರ ಸಮಿತಿ ಕರೆಸಲು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರಂತೆ ಸರ್ಕಾರ ತಜ್ಞರ ಸಮಿತಿ ನೇಮಿಸಿ ಜಿಲ್ಲೆಗೆ ಕಳುಹಿಸಿಕೊಟ್ಟಿದೆ’ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ‘ನೀರಿನ ಕುರಿತು ಸಾರ್ವಜನಿಕರು ಮಾಡಿರುವ ಆರೋಪಗಳ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ದುರ್ಘಟನೆ ನಡೆಯಲು ಯಾರದಾದರೂ ಕೈವಾಡ ಇದೆಯಾ ಅಥವಾ ಶಾಂತಿಸಾಗರದಿಂದ ನೀರು ಸರಬರಾಜು ವೇಳೆಯಲ್ಲಿ ಎಲ್ಲಾದರೂ ಲೋಪದೋಷ ಆಗಿದೆಯಾ ಎಂಬುದನ್ನು ಪರಿಶೀಲಿಸಲು ತಂಡವನ್ನು ರಚಿಸಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲೂ ಇಂತಹ ಘಟನೆ ಮರುಕಳಿಸದ ಹಾಗೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಾ ಕುಡಿಯುವ ನೀರಿನ ಮೂಲಗಳ ವರದಿಯನ್ನು ವಾರದ ಒಳಗೆ ತರಿಸಿಕೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.