ಶುಕ್ರವಾರ, ಸೆಪ್ಟೆಂಬರ್ 17, 2021
21 °C

PV Web Exclusive | ಉಕ್ಕಿನ ಕೋಟೆಯ ಮೋಹಕ ಜಲಧಾರೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹತ್ತಾರು ಮೈಲಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಏಳು ಸುತ್ತಿನ ಕೋಟೆಗೆ ಉಕ್ಕಿನ ಕೋಟೆ ಎಂಬ ಪ್ರತೀತಿ ಇದೆ. ಕೋಟೆಯನ್ನು ಭೇದಿಸಲು ಶತ್ರುಗಳು ನಡೆಸಿದ ಪ್ರಯತ್ನ ಇತಿಹಾಸದಲ್ಲಿ ದಾಖಲಾಗಿದೆ. ಕೋಟೆಯೊಳಗೆ ನುಸುಳಲು ನಡೆಸಿದ ಘಟನೆ ಶತಮಾನಗಳ ಬಳಿಕವೂ ಮೈಮನ ರೋಮಾಂಚನಗೊಳಿಸುತ್ತವೆ. ನಿಸರ್ಗದತ್ತವಾಗಿ ಸೃಷ್ಟಿಯಾದ ಕಲ್ಲು ಬಂಡೆಗಳನ್ನೇ ರಕ್ಷಣೆಗೆ ಬಳಸಿದ ರೀತಿಗೆ ಮನಸೋಲದವರು ಅಪರೂಪ. ಕಣ್ಣು ಹಾಯಿಸಿದಷ್ಟು ದೂರ ಕಲ್ಲಿನ ರಾಶಿ ಕಾಣುತ್ತಿದ್ದ ಕೋಟೆಯಲ್ಲೀಗ ಮೋಹಕ ಜಲಧಾರೆ ಸೃಷ್ಟಿಯಾಗಿದೆ.

ಕಲ್ಲಿಗೂ ನೀರಿಗೂ ಸಂಬಂಧ ಸೃಷ್ಟಿಯಾಗುವುದು ಅಪರೂಪ. ಸಾಧಾರಣ ಮಳೆ ಬೀಳುವ ಪ್ರದೇಶದಲ್ಲಿ ಜಲಧಾರೆ ಕಾಣಿಸುವುದು ವಿಸ್ಮಯ. ಅಂತಹದೊಂದು ಅಪರೂಪದ ವಿಸ್ಮಯಕ್ಕೆ ಕಲ್ಲಿನ ಕೋಟೆ ಸಾಕ್ಷಿಯಾಗಿದೆ. ಬಿಡುವು ನೀಡದೇ ಸುರಿದ ಚಿತ್ತಾ ಮಳೆಗೆ ಕಲ್ಲಿನ ಕೋಟೆ ಕರಗಿದಂತೆ ಭಾಸವಾಗುತ್ತಿದೆ. ಹೆಬ್ಬಂಡೆಯ ನೆತ್ತಿಯ ಮೇಲೆ ನೀರ ಹನಿಗಳು ಜಿನುಗುತ್ತಿವೆ. ಕಲ್ಲುಗಳ ಸಂದುಗಳಲ್ಲಿ ಜರಿಗಳು ಹರಿಯುತ್ತಿವೆ. ಅಂಗಾಲು ಸುಡುವ ಬಂಡೆಗಳ ಮೇಲೆ ಕಾಲಿಡುವುದು ಮುದ ನೀಡುತ್ತಿದೆ.


ಚಿತ್ರದುರ್ಗದ ಕಲ್ಲಿನ ಕೋಟೆಯ ಒನಕೆ ಓಬವ್ವನ ಕಿಂಡಿಯ ಬಳಿ ಹರಿಯುವ ಜಲಧಾರೆ.

ವಾರ್ಷಿಕ 550 ಮಿ.ಮೀ ಮಳೆ ಬೀಳುವ ಚಿತ್ರದುರ್ಗದಲ್ಲಿ ಅ.2ರಂದು 14 ಸೆಂ.ಮೀ ಮಳೆ ಸುರಿದಿದೆ. ಒಂದೇ ದಿನ ಈ ಪ್ರಮಾಣದಲ್ಲಿ ಮಳೆ ಬಿದ್ದಿದ್ದು ಕೋಟೆನಾಡ ಇತಿಹಾಸದಲ್ಲಿ ಅಪರೂಪ. ಹೀಗೆ ಬಿದ್ದ ಮಳೆ ಕಲ್ಲಿನ ಕೋಟೆಯ ಸೊಬಗನ್ನು ಮತ್ತೊಂದು ರೀತಿಯಲ್ಲಿ ಪರಿಚಯಿಸಿದೆ. ಕೋಟೆಯ ನೆತ್ತಿಯ ಮೇಲೆ ನಿರ್ಮಾಣವಾದ ಜಲಧಾರೆಗಳು ಸಾಮಾಜಿಕ ಜಾಲತಾಣವನ್ನು ಆವರಿಸಿಕೊಂಡವು. ಈ ದೃಶ್ಯವನ್ನು ನೋಡಲು, ನೀರಿನಲ್ಲಿ ಮಿಂದೇಳಲು ಪ್ರವಾಸಿಗರು, ಸ್ಥಳೀಯರು ಲಗ್ಗೆ ಇಟ್ಟರು. ಕೋಟೆಯ ಮೋಹಕ ಸೌಂದರ್ಯಕ್ಕೆ ಮನಸೋತರು.

ಏಳು ಸುತ್ತಿನ ಕೋಟೆಗೆ ಗಿರಿದುರ್ಗ ಹಾಗೂ ಜಲದುರ್ಗದ ಲಕ್ಷಣಗಳಿವೆ ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಜಲದುರ್ಗವೆಂದರೆ ಏನೆಂಬುದು ನಿಧಾನವಾಗಿ ಅರ್ಥವಾಗತೊಡಗಿದೆ. ಕೋಟೆಯ ಮೇಲೆ ಬಿದ್ದ ನೀರ ಹನಿ ವ್ಯರ್ಥವಾಗದಂತೆ ನಿರ್ಮಿಸಿದ ಹೊಂಡ, ಕಲ್ಯಾಣಿ ರಾಜವಂಶಸ್ಥರ ಜಲಸಂರಕ್ಷಣೆಯ ಕಾಳಜಿಯನ್ನು ತೋರಿಸುತ್ತವೆ. ಕೋಟೆಯೊಳಿಗಿನ ಜಲಮೂಲಗಳೆಲ್ಲ ಭರ್ತಿಯಾಗಿವೆ. ಕೊಳಗಳ ತಿಳಿನೀರಲ್ಲಿ ಕೋಟೆಯ ಪ್ರತಿಬಿಂಬಗಳು ಕಾಣುತ್ತಿವೆ.


ಚಿತ್ರದುರ್ಗದ ಕೋಟೆಯಲ್ಲಿ ಹರಿಯುತ್ತಿರುವ ನೀರು.

ಉಕ್ಕಿನ ಕೋಟೆಯಲ್ಲಿರುವ ಹೊಂಡ, ಒಡ್ಡು, ಪುಷ್ಕರಣಿ, ಕೆರೆ ಹಾಗೂ ಬಾವಿಗಳ ನಡುವೆ ವೈಜ್ಞಾನಿಕ ಜಲವಿನ್ಯಾಸವಿದೆ. ಮಳೆ ನೀರನ್ನು ಹಿಡಿದಿಡುವ ಪರಿಯೂ ಅದ್ಭುತವಾಗಿದೆ. ಶತಮಾನಗಳ ಹಿಂದೆ ಇದನ್ನು ವಿನ್ಯಾಸ ಮಾಡಿದ ರೀತಿಗೆ ಆಧುನಿಕ ಜಲತಜ್ಞರು ತಲೆದೂಗಿದ್ದಾರೆ. ಬಂಡೆಕಲ್ಲುಗಳಿಂದ ಕೂಡಿದ ಬೆಟ್ಟದ ಮೇಲೆ ಬಿದ್ದ ನೀರು ಹೊಂಡ, ಒಡ್ಡು ಹಾಗೂ ಅಗಳು ಸೇರುತ್ತದೆ. ಹೊಂಡದಿಂದ ಅಗಳಿಗೆ, ಅಲ್ಲಿಂದ ಪುಷ್ಕರಣಿಗೆ, ಕೆರೆಗೆ ನೀರು ಹರಿದು ಹೋಗುವ ರೀತಿ ಅಧ್ಬುತವಾಗಿದೆ.

ಕೋಟೆಯ ತುದಿಯಲ್ಲಿರುವ ತುಪ್ಪದ ಕೊಳ ಮತ್ತೊಂದು ಬದಿಗೆ ಗೋಪಾಲಸ್ವಾಮಿ ಹೊಂಡವಿದೆ. ಅಲ್ಲಿಂದ ಹರಿಯುವ ನೀರು ಅಕ್ಕ–ತಂಗಿಯರ ಜೋಡಿ ಹೊಂಡ ಸೇರುತ್ತದೆ. ಅಲ್ಲಿಂದ ತಣ್ಣೀರು ದೋಣಿಯಲ್ಲಿ ಸಾಗಿ ಕಲ್ಲು – ಬಂಡೆಗಳ ಮೂಲಕ ಹರಿದು ಸಿಹಿನೀರು ಹೊಂಡ ಸೇರುತ್ತದೆ. ಕಲ್ಲು ಬಂಡೆಗಳ ನಡುವೆ ಅಂತರ್ಗತವಾಗಿ ಹರಿಯುವ ನೀರು ಜನವಸತಿ ಪ್ರದೇಶದಲ್ಲಿರುವ ಹೊಂಡಗಳನ್ನು ತಲುಪುತ್ತದೆ. ಅಲ್ಲಿಂದ ಕೆರೆಗೆ ಸಂಪರ್ಕ ಕಲ್ಪಿಸಲಾಗಿದೆ. ಮಳೆ ಬಿದ್ದಾಗ ಜಲಮೂಲಗಳು ಭರ್ತಿಯಾಗಿ ಒಂದರಿಂದ ಮತ್ತೊಂದಕ್ಕೆ ನೀರು ಹರಿಯುತ್ತದೆ. ಕೋಟೆಗೆ ಹೊಂದಿಕೊಂಡಿರುವ ಸಿಹಿನೀರಿನ ಹೊಂಡ ಒಂದು ಕಾಲದಲ್ಲಿ ಕೋಟೆನಗರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿತ್ತು.


ಚಿತ್ರದುರ್ಗದ ಐತಿಹಾಸಿಕ ಕೋಟೆಯ ಮೇಲುದುರ್ಗದ ಮೆಟ್ಟಿಲುಗಳಿಂದ ನೀರು ಹರಿಯುತ್ತಿರುವುದು

ಗೋಪಾಲಸ್ವಾಮಿ ಹೊಂಡದಿಂದ ಹರಿಯುವ ನೀರು ಜಲಪಾತ ಸೃಷ್ಟಿಸಿದೆ. ಅಕ್ಕ–ತಂಗಿಯರ ಹೊಂಡದಿಂದ ಅಂತರ್ಗತವಾಗಿ ಹರಿಯುವ ನೀರು ತಣ್ಣೀರು ದೋಣಿಯಲ್ಲಿ ಮೇಲೇಳುತ್ತದೆ. ಹೆಸರೇ ಸೂಚಿಸುವಂತೆ ಇದು ತಣ್ಣೀರ ದೋಣಿಯೇ. ಬೇಸಿಗೆಯ ಕಡು ಬಿಸಿಲಿನಲ್ಲಿಯೂ ಇಲ್ಲಿನ ನೀರು ತಣ್ಣನೆಯ ಅನುಭವ ನೀಡುತ್ತದೆ. ಬಂಡೆಗಳನ್ನು ಹಾದು ಬರುವಾಗ ನೀರಿನ ಉಷ್ಣಾಂಶ ಕಡಿಮೆಯಾಗುವುದು ವಿಸ್ಮಯವೇ ಸರಿ. ಅಲ್ಲಿಂದ ಕೆಳಮುಖವಾಗಿ ಹರಿಯುವ ನೀರು ಒನಕೆ ಓಬವ್ವನ ಕಿಂಡಿಯಲ್ಲಿ ಸಾಗುತ್ತದೆ. ಶತ್ರುಗಳು ಕೋಟೆಯೊಳಗೆ ನುಸುಳಿದ ಈ ಸ್ಥಳದಲ್ಲಿ ಪ್ರವಾಸಿಗರು ನೀರಿಗೆ ಮೈಯೊಡ್ಡುತ್ತಿದ್ದಾರೆ.

‘ಇದೊಂದು ಅಪರೂಪದ ದೃಶ್ಯ. ಮಳೆ ಸುರಿದಾಗ ಸೃಷ್ಟಿಯಾಗುವ ಕೋಟೆಯ ಮೋಹಕತೆಯನ್ನು ಆಸ್ವಾದಿಸಿದ್ದು ಇದೇ ಮೊದಲು. ಫೇಸ್‌ಬುಕ್‌ನಲ್ಲಿ ಸ್ನೇಹಿತರೊಬ್ಬರು ಹಂಚಿಕೊಂಡ ವಿಡಿಯೊ ಗಮನಿಸಿ ಕುತೂಹಲದಿಂದ ಕೋಟೆಗೆ ಬಂದೆ. ಮಳೆ ನೀರಿನಲ್ಲಿ ಕೋಟೆ ಹೊಸ ಅನುಭವ ನೀಡಿತು’ ಎಂಬುದು ಹಿರಿಯೂರಿನ ಧರ್ಮ ಎಂಬುವರ ಅನುಭವ.


ಕೋಟೆಯ ಮೆಟ್ಟಿಲುಗಳಿಂದ ರಭಸವಾಗಿ ಹರಿಯುತ್ತಿರುವ ಮಳೆ ನೀರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು