ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾವತಿ ನದಿಯಲ್ಲಿ ತಿಂಗಳು ಹರಿದ ನೀರು: ದಾಖಲೆ ನಿರ್ಮಾಣ

ಮತ್ತೊಂದು ದಾಖಲೆ ನಿರ್ಮಾಣ; ತಡೆಗೋಡೆ ನಿರ್ಮಿಸಲು ಆಗ್ರಹ
Last Updated 4 ಅಕ್ಟೋಬರ್ 2022, 4:55 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಹಾದು ಹೋಗಿರುವ ವೇದಾವತಿ ನದಿಯಲ್ಲಿ ಬರೋಬ್ಬರಿ ಒಂದು ತಿಂಗಳು ನೀರು ಹರಿಯುವ ಮೂಲಕ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.

ವೇದಾವತಿ ನದಿಗೆ ತಾಲ್ಲೂಕಿನ ಮಾರಿಕಣಿವೆ ಎಂಬಲ್ಲಿ ನಿರ್ಮಿಸಿರುವ ವಾಣಿವಿಲಾಸ ಜಲಾಶಯ 1933ರಲ್ಲಿ ಒಮ್ಮೆ ಮಾತ್ರ ಭರ್ತಿಯಾಗಿತ್ತು. 2022ರ ಸೆ. 2ರಂದು ಮತ್ತೊಮ್ಮೆ ಕೋಡಿ ಹರಿಯುವ ಮೂಲಕ ಎರಡನೇ ಬಾರಿ ಜಲಾಶಯ ಭರ್ತಿಯಾದ ದಾಖಲೆ ನಿರ್ಮಾಣವಾಗಿತ್ತು.

ಸಮೃದ್ಧ ಮಳೆಗಾಲದಲ್ಲಿ ಹೆಚ್ಚೆಂದರೆ ಐದಾರು ದಿನ ಹರಿಯುತ್ತಿದ್ದ ವೇದಾವತಿ ನದಿ ಈ ಬಾರಿ ಸೆ. 2ರಿಂದ ಅ. 2ರವರೆಗೆ ಸುಮಾರು 15.50 ಟಿಎಂಸಿ ಅಡಿಯಷ್ಟು ನೀರು ಹರಿಯುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇಂದಿಗೂ ಎರಡು ಅಡಿಯಷ್ಟು ನೀರು ನದಿಯಲ್ಲಿ ಹರಿಯುತ್ತಿದೆ.

ಮಳೆ ಮುಂದುವರಿದಲ್ಲಿ ಅಪಾಯ: 1999–2000ದಲ್ಲಿ ಸುರಿದ ಮಳೆಗೆ ವೇದಾವತಿ ನದಿ ತುಂಬಿ ಹರಿದ ಪ್ರಯುಕ್ತ ನದಿ ತೀರದಲ್ಲಿನ 20ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ಪ್ರಸಕ್ತ ವರ್ಷ ಸೆ. 7ರಂದು ನದಿಯಲ್ಲಿ 11,000 ಕ್ಯುಸೆಕ್‌, 8ರಂದು 14,891 ಕ್ಯುಸೆಕ್‌, 9ರಂದು 14,892 ಹಾಗೂ ಸೆ. 10ರಂದು 13,767 ಕ್ಯುಸೆಕ್ ನೀರು ಹರಿದು ಪ್ರವಾಹ ಉಂಟಾಗಿದ್ದರಿಂದ ನದಿ ದಡದಲ್ಲಿರುವ 132 ಮನೆಗಳಿಗೆ ನೀರು ನುಗ್ಗಿದ್ದರೆ, 30 ಮನೆಗಳು ಸಂಪೂರ್ಣ ಜಲಾವೃತವಾಗಿದ್ದವು. ನಿರಾಶ್ರಿತರಿಗೆ ನಗರದಲ್ಲಿ ಎರಡು ಕಡೆ ಹಾಗೂ ಗ್ರಾಮೀಣ ಭಾಗದಲ್ಲಿ ಮೂರು ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಹೀಗಾಗಿ ಹಿಂಗಾರು ಮಳೆ ಬಿರುಸು ಪಡೆದಲ್ಲಿ ಅಪಾಯ ತಪ್ಪಿದ್ದಲ್ಲ.

ತಡೆಗೋಡೆ ಅನಿವಾರ್ಯ, ಅಗತ್ಯ: ‘ಈ ಭಾಗದಲ್ಲಿ ಮುಂಗಾರಿಗಿಂತ ಹಿಂಗಾರು ಮಳೆ ಉತ್ತಮವಾಗಿ ಆಗುತ್ತದೆ. ವಾಣಿವಿಲಾಸ ಜಲಾಶಯ ಭರ್ತಿ ಆಗಿರುವ ಕಾರಣ ಮಳೆಯಿಂದ ಬೀಳುವ ನೀರು ವೇದಾವತಿ ನದಿಯಲ್ಲಿ ಹರಿದು ಬಂದು ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ತುಂಗಾ ನದಿಗೆ ತಡೆಗೋಡೆ ನಿರ್ಮಿಸಿರುವಂತೆ ಹಿರಿಯೂರಿನಲ್ಲಿ ಲಕ್ಕವ್ವನಹಳ್ಳಿಯಿಂದ ಬೈಪಾಸ್ ರಸ್ತೆವರೆಗೆ ತಡೆಗೋಡೆ ನಿರ್ಮಾಣವಾಗಬೇಕು. ಇದರಿಂದ ನದಿ ತೀರದ ಒತ್ತುವರಿ, ಪ್ರವಾಹದಿಂದ ಆಗುವ ಹಾನಿ ಎರಡನ್ನೂ ತಪ್ಪಿಸಬಹುದು’ ಎನ್ನುವುದು ಸಾರ್ವಜನಿಕರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT