ಸೋಮವಾರ, ನವೆಂಬರ್ 30, 2020
27 °C
ದೇವರಗುಡ್ಡದ ತಪ್ಪಲಿನಲ್ಲಿ ನೀರ ಧಾರೆ; ಸ್ಥಳೀಯರು ಪುಳಕ

ಬರದ ನಾಡಲ್ಲಿ ಜಲಪಾತ; ಅಭಿವೃದ್ಧಿಗೆ ಒತ್ತಾಯ

ಎಸ್‌.ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಬಯಲು ಸೀಮೆಯ ಬರದ ನಾಡಿನ ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ ಪಶ್ಚಿಮಕ್ಕಿರುವ ದೇವರಗುಡ್ಡದ ತಪ್ಪಲಿನಲ್ಲಿ ಜಲಪಾತ ಸೃಷ್ಟಿಯಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಗ್ರಾಮದಿಂದ ಕೇವಲ 3 ಕಿ.ಮೀ ದೂರದಲ್ಲಿ ಗುಡ್ಡವಿದೆ. ಸುಮಾರು 450 ಎಕರೆ ವಿಸ್ತೀರ್ಣ ಇರುವ ಈ ಗುಡ್ಡದ ಮೇಲ್ಭಾಗದಲ್ಲಿ ಮಲ್ಲಯ್ಯನಕೆರೆ, ಯರ್‍ರಪ್ಪನಕೆರೆ, ಶಿವಲಿಂಗಯ್ಯನ ಕೆರೆಗಳಿವೆ. ಈ ಬಾರಿ ಸುರಿದ ಭಾರಿ ಮಳೆಗೆ ಈ ಮೂರೂ ಕೆರೆಗಳು ಭರ್ತಿಯಾಗಿವೆ. ಈ ಭಾಗದಲ್ಲಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಸಾಕಷ್ಟು ಜೋಪುನೀರು ಬೆಟ್ಟದ ಮೇಲಿಂದ ಧುಮ್ಮಿಕ್ಕುತ್ತಿದೆ. ಇದರಿಂದ ಈ ಜಾಗ ನೀರು ಧುಮ್ಮಿಕ್ಕುವ ಸರೋವರವೆಂದೇ ಪ್ರಸಿದ್ಧಿಯಾಗಿದೆ.

15 ದಿನಗಳಿಂದ ಇಲ್ಲಿ ಫಾಲ್ಸ್‌ ನಿರ್ಮಾಣವಾಗಿದೆ. ಇಲ್ಲಿ ಧುಮ್ಮಿಕ್ಕುವ ನೀರು ಹಕ್ಕಿತಿಮ್ಮಯ್ಯನಹಟ್ಟಿ, ಹೊನ್ನೇನಹಳ್ಳಿ ಕೆರೆ ತುಂಬಿಸಿದೆ. ಈ ಎರಡು ಕೆರೆ ಕೋಡಿಬಿದ್ದು ಕಾನಿಹಳ್ಳದ ಮೂಲಕ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. ಕೊರೊನಾ ಭೀತಿಯಿಂದ ರಾಜ್ಯ, ಹೊರರಾಜ್ಯಗಳಿಗೆ ಪ್ರವಾಸ ಹೋಗುವುದನ್ನು ಹಲವರು ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಜಲಪಾತ ಸೃಷ್ಟಿಯಾಗಿರುವುದು ಹಲವರಿಗೆ ಖುಷಿ ತಂದಿದೆ. ಇದರಿಂದಾಗಿ ಕುತೂಹಲದಿಂದ ಸುತ್ತಮುತ್ತಲಿನ ಹಲವು ಜನರು ಇಲ್ಲಿಗೆ ಬರುತ್ತಿದ್ದಾರೆ. ಧುಮ್ಮಿಕ್ಕುತ್ತಿರುವ ನೀರಿನಲ್ಲಿ ಮಿಂದು ಶಿಳ್ಯೆ, ಕೇಕೆ ಹಾಕುತ್ತಾ ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದಾರೆ.

‘ಬಯಲು ಸೀಮೆಯ ಜನ ಜಲಪಾತಗಳನ್ನು ನೋಡಲು ಮಲೆನಾಡು ಪ್ರದೇಶಗಳಿಗೆ ಹೋಗುತ್ತಿದ್ದರು. ಆದರೆ, ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಉತ್ತಮವಾಗಿ ಮಳೆ ಬರುತ್ತಿದೆ. ಈ ಬಾರಿ ಶೇ 23ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ಬೆಟ್ಟಗುಡ್ಡಗಳು ಮಲೆನಾಡಿನಂತೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. ಮಳೆರಾಯನ ಕೃಪೆಯಿಂದ ಪ್ರಕೃತಿಯ ಸೊಬಗು ಸವಿಯುವ ಭಾಗ್ಯ ಬರದ ನಾಡಿನ ಜನರಿಗೆ ಸಿಕ್ಕಿದೆ. ಆದರೆ, ಜಲಪಾತ ಸೃಷ್ಟಿಯಾಗಿರುವ ಜಾಗಕ್ಕೆ ಹೋಗಲು ದಾರಿಯಾಗಲಿ, ರಸ್ತೆಯಾಗಲಿ ಇಲ್ಲದಿರುವುದು ಬೇಸರವನ್ನುಂಟು ಮಾಡಿದೆ’ ಎನ್ನುತ್ತಾರೆ ಡಿ.ಮಲ್ಲೇಶ್‌.

ಸಮೀಪದಲ್ಲಿಯೇ ರಾಜ್ಯದ ಪುರಾಣ ಪ್ರಸಿದ್ಧ ಹಾಲುರಾಮೇಶ್ವರ ಪುಣ್ಯಕ್ಷೇತ್ರವಿದೆ. ಇಲ್ಲಿಗೆ ನಿತ್ಯವೂ ನೂರಾರು ಭಕ್ತರು ಬೇರೆ, ಬೇರೆ ಕಡೆಯಿಂದ ಬರುತ್ತಾರೆ. ಈ ಪಣ್ಯಕ್ಷೇತ್ರದ ಹಿಂಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚಾನಲ್‌ ಇದೆ. ಈ ಎರಡು ಸ್ಥಳಕ್ಕೆ ಹೊಂದಿಕೊಂಡಂತೆ ಜಲಪಾತ ಸೃಷ್ಟಿಯಾಗಿದ್ದು, ಡಿಸೆಂಬರ್‌ವರೆಗೂ ಫಾಲ್ಸ್‌ ಇರಲಿದೆ. ಹಾಗಾಗಿ, ಈ ಸ್ಥಳಕ್ಕೆ ಮೂಲಸೌಕರ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು