ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ–ನಷ್ಟದ ಲೆಕ್ಕಾಚಾರ ಹಾಕದೇ ಪ್ರತಿ ಗ್ರಾಮಕ್ಕೂ ಬಸ್‌ ಸೌಲಭ್ಯ: ಸಚಿವ ಶ್ರೀರಾಮುಲು

ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ
Last Updated 18 ಸೆಪ್ಟೆಂಬರ್ 2021, 12:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಭ–ನಷ್ಟದ ಲೆಕ್ಕಾಚಾರ ಹಾಕದೇ ರಾಜ್ಯದ ಪ್ರತಿ ಹಳ್ಳಿಗೂ ಬಸ್‌ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನಿಸಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಲವು ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಇಲ್ಲ ಎಂಬುದು ಮಾಧ್ಯಮದ ಮೂಲಕ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಸಂಕಷ್ಟ ಇರುವುದು ಗೊತ್ತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಸಂಪರ್ಕ ಕಲ್ಪಿಸಿ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಹೇಳಿದರು.

‘ಚಿತ್ರದುರ್ಗವೂ ಸೇರಿ ರಾಜ್ಯದ ಹಲವೆಡೆ ಖಾಸಗಿ ಬಸ್‌ ಹಾವಳಿ ಹೆಚ್ಚಾಗಿದೆ. ಲಾಭದಾಯ ಮಾರ್ಗಗಳನ್ನು ಖಾಸಗಿ ಬಸ್‌ಗಳು ಕಬಳಿಸಿವೆ. ಇದರಿಂದ ಸಾರಿಗೆ ನಿಗಮ ಸಂಕಷ್ಟಕ್ಕೆ ಸಿಲುಕಿವೆ. ಡೀಸೆಲ್‌ ಹೊರೆಯ ಕಾರಣಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಸಿಎನ್‌ಜಿ ಇಂಧನ ಬಳಕೆ ಹೆಚ್ಚಿಸಿ ನಷ್ಟದ ಪ್ರಮಾಣವನ್ನು ತಪ್ಪಿಸಲು ಚರ್ಚಿಸಲಾಗಿದೆ’ ಎಂದು ಹೇಳಿದರು.

‘ಮುಷ್ಕರದ ಕಾರಣಕ್ಕೆ ಅನೇಕ ಸಿಬ್ಬಂದಿಯನ್ನು ಅಮಾನತು ಹಾಗೂ ವಜಾ ಮಾಡಲಾಗಿದೆ. ಇನ್ನೂ ಕೆಲವರನ್ನು ವರ್ಗಾವಣೆ ಮಾಡಲಾಗಿದೆ. ಅಮಾನತು ಹಾಗೂ ವಜಾ ಮಾಡಿದವರನ್ನು ಕರ್ತವ್ಯಕ್ಕೆ ನಿಯೋಜಿಸುವ ಪ್ರಕ್ರಿಯೆ ನಡೆಯುತ್ತಿದೆ. ವರ್ಗಾವಣೆ ಮಾಡಿದವರನ್ನು ಸ್ವಸ್ಥಾನಕ್ಕೆ ನಿಯೋಜಿಸಲಾಗುತ್ತದೆ. ಸಿಬ್ಬಂದಿಯನ್ನು ವಿಶ್ವಾಸಕ್ಕೆ ಪಡೆದು ನಿಗಮಗಳನ್ನು ನಷ್ಟದಿಂದ ಪಾರು ಮಾಡಲಾಗುವುದು’ ಎಂದರು.

‘ಪೆಟ್ರೋಲ್‌, ಡೀಸೆಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಬಾರದು. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆಯಲ್ಲಿ ಬದಲಾವಣೆ ಆಗುತ್ತಿದೆ. ರಾಜ್ಯಗಳು ತೆರಿಗೆ ಕಡಿಮೆ ಮಾಡಿ ಇಂಧನ ಬೆಲೆ ಇಳಿಸುವಂತೆ ಕಾಂಗ್ರೆಸ್‌ ಸಲಹೆ ನೀಡಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೀಗೆ ತೆರಿಗೆ ಕಡಿಮೆ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.

‘ನಂಜನಗೂಡು ದೇಗುಲ ಧ್ವಂಸ ಮಾಡಬಾರದಿತ್ತು. ಸರ್ಕಾರದ ಗಮನಕ್ಕೆ ಬಾರದೇ ಇಂತಹ ಘಟನೆ ನಡೆದಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆ ದಿಕ್ಸೂಚಿಯಂತೆ ಕಾಣುತ್ತಿದೆ. 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. 150ಕ್ಕೂ ಹೆಚ್ಚು ಸ್ಥಾನ ಗಳಿಸುವ ಗುರಿ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಮೊಳಕಾಲ್ಮುರಿಗೆ ಡಿಪೊ, ನಿಲ್ದಾಣ

ಮೊಳಕಾಲ್ಮುರು ಪಟ್ಟಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬಸ್‌ ನಿಲ್ದಾಣ ಹಾಗೂ ಡಿಪೊ ಮಂಜೂರಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

‘ಮೊಳಕಾಲ್ಮುರು ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿದೆ. ತಾಲ್ಲೂಕು ಕಚೇರಿ ಶೀಘ್ರದಲ್ಲೇ ಸ್ಥಳಾಂತರ ಆಗಲಿದೆ. ಈ ಸ್ಥಳದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಮಾಡಲಾಗುವುದು. ಡಿಪೊಗೆ ರಾಯಪುರದ ಕಡೆ ತೆರಳುವ ಮಾರ್ಗದಲ್ಲಿ ಸ್ಥಳ ಗುರುತಿಸಲಾಗಿದೆ. ನಾಯಕನಹಟ್ಟಿಗೂ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಮಂಜೂರಾಗಿದ್ದು, ಸ್ಥಳಕ್ಕೆ ಹುಡುಕಾಟ ನಡೆಯುತ್ತಿದೆ’ ಎಂದರು.

***

ಕಾಂಗ್ರೆಸ್‌ ಅಧಿಕಾರಕ್ಕೆ ಬರಬಾರದು ಎಂಬುದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿಲುವು. ಮುಂದಿನ ಚುನಾವಣೆ ಬಳಿಕದ ಹೊಂದಾಣಿಕೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ.

ಬಿ.ಶ್ರೀರಾಮುಲು

ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT