ಗುರುವಾರ , ಮಾರ್ಚ್ 30, 2023
32 °C

ಮೀಸಲಾತಿಯಿಂದ ವಿಪ್ರ ಸಮುದಾಯ ವಂಚಿತ: ಅಶೋಕ ಹಾರನಹಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮೀಸಲಾತಿಯಿಂದ ವಿಪ್ರ ಸಮುದಾಯ ವಂಚಿತವಾಗಿದೆ. ಇದರಿಂದಾಗಿ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಅದನ್ನು ಕೊಡಿಸುವುದು ನನ್ನ ಪ್ರಮುಖ ಧ್ಯೇಯವಾಗಿದೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಹಾರನಹಳ್ಳಿ ಹೇಳಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದುವರಿದ ಸಮುದಾಯ ಎಂಬುದು ಬ್ರಾಹ್ಮಣರಿಗೆ ಹೆಸರಿಗೆ ಮತ್ತು ಹಣೆಪಟ್ಟಿಗೆ ಮಾತ್ರ ಸೀಮಿತವಾಗಿದೆ. ಈಗಲೂ ಅನೇಕರು ಪುರೋಹಿತರಾಗಿ, ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದಲ್ಲಿ ಬಹುತೇಕರು ಸಂಕಷ್ಟದಲ್ಲೇ ಇದ್ದಾರೆ’ ಎಂದರು.

‘ರಾಜ್ಯದಾದ್ಯಂತ ಸಮುದಾಯ ಮೊದಲು ಸಂಘಟನೆಯಾಗಬೇಕು. ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಅಧಿಕಾರ ಮುಖ್ಯವಾಗಿರದೇ ಸಮುದಾಯಕ್ಕಾಗಿ ಶ್ರಮಿಸಬೇಕು. ಆಗ ಮಾತ್ರ ಸಮುದಾಯ ಹೊಸ ಸ್ವರೂಪ ಪಡೆಯಲು ಸಾಧ್ಯ. ಇಲ್ಲದಿದ್ದರೆ, ಪ್ರಗತಿ ಸಾಧ್ಯವಿಲ್ಲ. ಸಮುದಾಯದವರ ಅಭಿವೃದ್ಧಿ ದೃಷ್ಟಿಯಿಂದ ಪುನಃ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 50 ಸಾವಿರ ವಿಪ್ರ ಮತದಾರರಿದ್ದಾರೆ. ಬೆಂಗಳೂರು, ಶಿವಮೊಗ್ಗ, ರಾಯಚೂರಿನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ನೂರಾರು ಮತದಾರರಿದ್ದಾರೆ. ಚುನಾವಣೆಯೂ ಡಿಸೆಂಬರ್ 12ಕ್ಕೆ ರಾಜ್ಯದಲ್ಲಿ ಹಾಗೂ 19ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ನನ್ನನ್ನು ಈ ಬಾರಿಯೂ ಬೆಂಬಲಿಸುವ ಮೂಲಕ ಸಮುದಾಯದ ಸೇವೆ ಮಾಡಲು ಅವಕಾಶ ಕಲ್ಪಿಸಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಸುರೇಶ್, ಹೊನ್ನಪ್ಪ, ಆರ್.ವಿ. ಸುಬ್ರಮಣ್ಯ, ಅನಂತ, ಪುರುಷೋತ್ತಮ, ರಾಜೇಂದ್ರ ಪ್ರಸಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು