ಶನಿವಾರ, ಅಕ್ಟೋಬರ್ 16, 2021
22 °C
ಮುರುಘ ಮಠ

ಮಹಿಳೆಯರಲ್ಲಿ ಪ್ರತಿಭೆಯಿದೆ, ಪ್ರೋತ್ಸಾಹ ಇಲ್ಲ: ಶಿವಮೂರ್ತಿ ಮುರುಘಾ ಶರಣರ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮಹಿಳೆಯರಲ್ಲಿ ಪ್ರತಿಭೆ ಇದ್ದರೂ ಪ್ರೋತ್ಸಹದ ಕೊರತೆ ಕಾಣುತ್ತಿದೆ ಎಂದು ಮುರುಘ ಮಠದ ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದ ಮುರುಗಿಯ ಶಾಂತವೀರಸ್ವಾಮಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಚಿತ್ರದುರ್ಗ ಸ್ಥಳೀಯ ಮಹಿಳೆಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಹೆಣ್ಣುಮಕ್ಕಳಿಗೆ ತಮ್ಮ ಶಕ್ತಿ ಮತ್ತು ಯುಕ್ತಿಯನ್ನು ತೋರಿಸುವ ದಿಸೆಯಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಸಂಘಟಿಸುವ ಆಲೋಚನೆಯಿದೆ. ಅದಕ್ಕಾಗಿ ತಾವುಗಳು ಈಗಿನಿಂದಲೇ ಹೆಚ್ಚಿನ ತಯಾರಿ ಮಾಡಿಕೊಂಡಲ್ಲಿ ಯಶಸ್ಸುಗಳಿಸಲು ಸಾಧ್ಯ’ ಎಂದರು.

‘ಮಹಿಳೆಯರಿಗೆ ಅತಿ ಹೆಚ್ಚು ಹೊಣೆಗಾರಿಕೆಗಳಿವೆ. ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸುವುದು ಮಹಿಳೆಯರ ಕರ್ತವ್ಯ. ಮಹಿಳೆಯರಲ್ಲಿರುವ ಪ್ರತಿಭೆಗೆ ಮುರುಘಾ ಮಠ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅ.13ರಿಂದ ಸಹಜ ಶಿವಯೋಗ ಆರಂಭವಾಗಲಿದೆ. ಎಲ್ಲ ಮಾನವರಿಗೂ ಶಿವಯೋಗ ಅವಶ್ಯಕ. ಅಂತರಂಗದ ಶುದ್ಧಿಗೆ ಶಿವಯೋಗ ಮಾಡಬೇಕು. ತಾವೆಲ್ಲರೂ ಕುಟುಂಬ ಸಮೇತ ಸಹಜ ಶಿವಯೋಗದಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ಧಾರವಾಡದ ಬಸವತತ್ವ ಪ್ರಚಾರಕರಾದ ಅಕ್ಕ ನಾಗಲಾಂಬಿಕೆ ಮಾತನಾಡಿ, ‘ಈ ಹಿಂದೆ ಹೆಣ್ಣು ಮಕ್ಕಳಿಗೆ ಅವಕಾಶಗಳಿರಲಿಲ್ಲ. ಅಕ್ಕ ನಾಗಲಾಂಬಿಕೆ ಸಾಧನೆಗೆ ಬಸವಣ್ಣನವರು ಅವಕಾಶ ಮಾಡಿಕೊಟ್ಟಿದ್ದರು. ಅಕ್ಕ ನಾಗಲಾಂಬಿಕೆ, ಅಕ್ಕ ಮಹಾದೇವಿಯವರ ನೆನಪಿಗಾಗಿ ಅವರ ಹೆಸರಿನಲ್ಲಿ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸ್ತ್ರೀಯರಿಗೆ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಶರಣ ಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹರಿಹರದ ಕವಲೆತ್ತುವಿನ ಶರಣೆ ಮುಕ್ತಾಯಕ್ಕ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಇದ್ದರು.

ಹಗ್ಗಜಗ್ಗಾಟ, ಬಾಲ್ ಇನ್ ದಿ ಬಕೆಟ್, ಮಡಿಕೆ ಒಡೆಯುವುದು, ಮೆಡಿಸಿನ್ ಬಾಲ್ ಎಸೆತ, ಆಲೂಗಡ್ಡೆ ಓಟ, ಗೋಣಿಚೀಲ ಓಟ, ಮೇಣದ ಬತ್ತಿ ಹಚ್ಚುವುದು, ಮ್ಯುಸಿಕಲ್ ಛೇರ್ ಸ್ಪರ್ಧೆಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.