ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಇನ್ನೂ ಸಿಗದ ಪರಿಹಾರ

ಜಿಲ್ಲೆಯಲ್ಲಿ 77 ಸಾವಿರ ಕಟ್ಟಡ ಕಾರ್ಮಿಕರ ನೋಂದಣಿ l ಒಬ್ಬರ ಖಾತೆಗೂ ಜಮಾ ಆಗದ ₹ 3 ಸಾವಿರ
Last Updated 17 ಜೂನ್ 2021, 4:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ 77 ಸಾವಿರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕಾರ್ಮಿಕ ಮಂಡಳಿಯಲ್ಲಿ ನೋಂದಣಿ ಆಗಿದ್ದಾರೆ. ಸರ್ಕಾರ ಘೋಷಿಸಿದ ಕೋವಿಡ್–ಲಾಕ್‌ಡೌನ್‌ ₹ 3 ಸಾವಿರ ‘ಪರಿಹಾರ’ ಒಬ್ಬರ ಖಾತೆಗೂ ಜಮಾ
ಆಗಿಲ್ಲ.

ರಾಜ್ಯದಲ್ಲಿ 23 ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಇದ್ದು, ಕೋವಿಡ್ ಎರಡನೇ ಅಲೆಯಿಂದಾಗಿ ಮೊದಲಿನಂತೆ ಕಟ್ಟಡ ನಿರ್ಮಾಣ ಕೆಲಸ ಇಲ್ಲದೆಯೇ ಕಂಗಾಲಾಗಿದ್ದರು. ಇದನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೇ 19ರಂದು ₹ 3 ಸಾವಿರ ಸಹಾಯಧನ ಘೋಷಿಸಿದ್ದರು. ಇದರಲ್ಲಿ ಬಹುತೇಕರ ಖಾತೆಗೆ ಈವರೆಗೂ ನಯಾ ಪೈಸೆಯೂ ಜಮಾ ಆಗಿಲ್ಲ. ಇದು ಕಾರ್ಮಿಕರ ನಿರಾಸೆಗೆ ಕಾರಣವಾಗಿದೆ.

ಫಲಾನುಭವಿಯ ಹೆಸರು, ಆಧಾರ್ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಸಂಖ್ಯೆ, ಮೊಬೈಲ್‌ ಸಂಖ್ಯೆ, ವಿಳಾಸ, ಅಂಚೆ ಸೂಚ್ಯಂಕ ಸಂಖ್ಯೆ ಸೇರಿ ಅಗತ್ಯ ದಾಖಲೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿರಬೇಕು. ಆದರೆ, ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಸಮಸ್ಯೆಯಿಂದಾಗಿ ಲಕ್ಷಾಂತರ ಕಾರ್ಮಿಕರು ಸಹಾಯಧನ ಸಿಗುತ್ತದೋ, ಇಲ್ಲವೋ ಎಂಬ ಆತಂಕದಲ್ಲಿ
ಇದ್ದಾರೆ.

ಬದುಕು ದೂಡುವುದೇ ಕಷ್ಟಕರ ಆಗಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಧನ ಸಿಗುತ್ತದೆ ಎಂಬ ಆಶಾಭಾವ ಅನೇಕ ಕಾರ್ಮಿಕರಲ್ಲಿ ಇತ್ತು. ಮಂಡಳಿಯ ಅಧಿಕಾರಿಗಳು ನಮ್ಮ ಬಳಿ ಎಲ್ಲ ಕಾರ್ಮಿಕರ ಮಾಹಿತಿ ಇದೆ ಎಂಬ ವಿಚಾರವನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ, ಪರಿಹಾರ ಘೋಷಿಸಿ ಒಂದು ತಿಂಗಳು ಕಳೆದರೂ ಖಾತೆಗೆ ಜಮಾ ಆಗದಿರುವ ಕಾರಣ ಕಾರ್ಮಿಕರ ಮುಖಂಡರು ಪರಿಹಾರಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ.

ಕಠಿಣ ನಿಯಮಗಳೇಕೆ?: ಹಿಂದಿನ ವರ್ಷ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಕೆಲಸ ಮಾಡಿದ ಕಾರ್ಮಿಕರಿಗೂ ಸರ್ಕಾರ ತಲಾ ₹ 5 ಸಾವಿರ ಪರಿಹಾರ ಘೋಷಿಸಿತ್ತು. ಹಣದ ಆಸೆಗಾಗಿ ಫಲಾನುಭವಿಯ ಹೆಸರಿಗೆ ಬೇರೆಯವರ ಆಧಾರ್‌ ಸಂಖ್ಯೆ ಜೋಡಣೆ ಮಾಡಿ ನವೀಕರಣ ಮತ್ತು ಹೊಸ ಕಾರ್ಡ್‌ಗಳನ್ನು ಗುರುತಿನ ಚೀಟಿಯಾಗಿ ನೀಡುವ ಜಾಲಗಳು ಸಕ್ರಿಯವಾಗಿ ವಂಚಿಸಿದ್ದವು. ಇದರಿಂದ ಬಹುತೇಕ ಅರ್ಹರಿಗೆ ಸಹಾಯಧನ ಸಿಕ್ಕಿರಲಿಲ್ಲ. ಈ ಪ್ರಕರಣ ಬೆಳಕಿಗೆ ಬಂದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಜೋಡಣೆಯಾಗಿದ್ದ ನರೇಗಾ ಕೂಲಿ ಕಾರ್ಮಿಕರ ಹೆಸರನ್ನು ಮಂಡಳಿ ಸೇವಾ ಸಿಂಧು ಪೋರ್ಟಲ್‌ನಿಂದ
ಹೊರತೆಗೆಯುತ್ತಿದೆ.

ಕಡ್ಡಾಯವಾಗಿ ಮಂಡಳಿಯಲ್ಲಿ ನೋಂದಣಿಯಾದ ಅರ್ಹ ಫಲಾನುಭವಿಗೆ ಮಾತ್ರ ಸಹಾಯಧನ ಸಿಗಬೇಕು. ಮಂಡಳಿಯಿಂದಲೇ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಬೇಕು. ಯಾರ ಹೆಸರು ಪುನರಾವರ್ತನೆ ಆಗಬಾರದು. ನಕಲಿ ಮಾಡಲು ಅವಕಾಶ ಇಲ್ಲದಂತೆ ಜಾಗ್ರತೆ ವಹಿಸಬೇಕು ಎಂಬ ಸರ್ಕಾರದ ಕಠಿಣ ನಿಯಮದಿಂದಾಗಿಯೂ ವಿಳಂಬವಾಗುತ್ತಿದೆ.

‘ಲಾಕ್‌ಡೌನ್‌ನಿಂದಾಗಿ
ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ ಮಂಡಳಿಯ ಸುಂಕ ನಿಧಿಯಿಂದ
ತಲಾ ₹ 3 ಸಾವಿರದಂತೆ ಸಹಾಯಧನವಾಗಿ ವಿಳಂಬ ಮಾಡದೆಯೇ ಪಾವತಿಸಲು ಸರ್ಕಾರ ಸೂಚನೆ ನೀಡಿದೆ. ಜೀವನ ನಡೆಸಲು ತುಂಬಾ ಕಷ್ಟವಿರುವ ಈ ಪರಿಸ್ಥಿತಿಯಲ್ಲೇ ನೀಡಿದರೆ, ಪರಿಹಾರ ವರದಾನವಾಗಲಿದೆ’ ಎಂದು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ತಿಳಿಸಿದ್ದಾರೆ.

.......................

ಜೂನ್‌ ತಿಂಗಳು ಮುಕ್ತಾಯ ಆಗುವುದರೊಳಗೆ ಅರ್ಹರ ಖಾತೆಗೆ ಪರಿಹಾರ ವರ್ಗಾವಣೆಯಾಗಲಿದೆ. ಮೊದಲ ಹಂತದಲ್ಲಿ 6.5 ಲಕ್ಷ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಮಂಡಳಿ ಇದನ್ನು ಸ್ಪಷ್ಟಪಡಿಸಿದೆ.

-ವಿನುತಾ, ಕಾರ್ಮಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT