ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಕಲಿಗರ ಪಾದಪೂಜೆ ನೆರವೇರಿಸಿದ ಗೋವಿಂದ ಎಂ.ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ

ದಕ್ಕಲಿಗ ಸಮಾಜದ ರಾಜ್ಯ ಮಟ್ಟದ ಸಮಾವೇಶ
Last Updated 7 ಜನವರಿ 2022, 11:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಅಸ್ಪೃಶ್ಯತೆಯ ನೋವಿನಲ್ಲೇ ಜೀವನ ಸಾಗಿಸುತ್ತಿರುವ ದಕ್ಕಲಿಗ ದಂಪತಿಗಳ ಪಾದಪೂಜೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೆರವೇರಿಸಿದರು.

ಇಲ್ಲಿನ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಟ್ರಸ್ಟ್‌ ವತಿಯಿಂದ ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಕ್ಕಲಿಗ ಸಮಾಜದ ರಾಜ್ಯ ಮಟ್ಟದ ಸಮಾವೇಶ ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಯಿತು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಲಾಗಿ ಕುಳಿತಿದ್ದ ದಂಪತಿಗಳ ಪಾದಗಳಿಗೆ ಸಚಿವರು ನೀರು ಹಾಕಿದರು. ಶುಚಿಯಾದ ಪಾದಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ಈ ವೇಳೆ ಅನೇಕರು ಕೈಮುಗಿದು ವಿನೀತರಾಗಿದ್ದರು. ಶತಮಾನಗಳಿಂದ ಅನುಭವಿಸುತ್ತಿರುವ ಸಮುದಾಯದ ನೋವು ನಿವಾರಿಸುವ ಪ್ರಯತ್ನದಂತೆ ಇದು ಕಂಡುಬಂದಿತು.

ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್‌ ಮಾತನಾಡಿ, ‘ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳಲ್ಲಿ ದಕ್ಕಲಿಗರೂ ಇದ್ದಾರೆ. ಮಾದಿಗ ಸಮುದಾಯದ 29 ಉಪಜಾತಿಗಳಲ್ಲಿ ಇವರು ಸೇರಿದ್ದಾರೆ. ರಾಜ್ಯದ 48 ಸ್ಥಳಗಳಲ್ಲಿ 481 ಕುಟುಂಬಗಳು ನೆಲೆಸಿದ್ದು, 1,708 ಜನಸಂಖ್ಯೆ ಹೊಂದಿದೆ. ಭಿಕ್ಷಾಟನೆ ಇವರ ಪಾರಂಪರಿಕ ವೃತ್ತಿ. ರಾಜ್ಯದ ಎಲ್ಲೆಡೆ ಸಂಚರಿಸಿ ಸಮುದಾಯದ ಸ್ಥಿತಿಗತಿಯ ಅಧ್ಯಯನ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ದಕ್ಕಲಿಗ ಸಮುದಾಯದಲ್ಲಿ ಇಬ್ಬರು ಶಿಕ್ಷಕರು, ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದಾರೆ. ಒಬ್ಬರು ಎಂಬಿಎ ಪದವೀಧರ, ಮತ್ತಿಬ್ಬರು ಸ್ನಾತಕೋತ್ತರ ಪದವೀಧರರು ಇದ್ದಾರೆ. 12 ಕುಟುಂಬ ಹೊರತುಪಡಿಸಿ ಬೇರೆ ಯಾರಿಗೂ ಭೂಮಿ ಇಲ್ಲ. ಮನೆ, ನಿವೇಶನದ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಪರಿಣಾಮಕಾರಿ ಮತ್ತು ಗಟ್ಟಿ ಹೆಜ್ಜೆಗಳನ್ನು ಇಟ್ಟು ಈ ಸಮುದಾಯದ ಜನರ ಮೊಗದಲ್ಲಿ ನಗು ಕಾಣುವಂತೆ ಮಾಡಬೇಕು’ ಎಂದು ಕೋರಿದರು.

‘ಭೂಮಿ, ಜಾತಿ ಪ್ರಮಾಣ ಪತ್ರಕ್ಕೆ ಕ್ರಮ’

ದಕ್ಕಲಿಗ ಸಮಾಜದ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಭೂ ಮಂಜೂರಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಶ್ವಾಸನೆ ನೀಡಿದರು.

‘ಅಧಿಕಾರಿಗಳೊಂದಿಗೆ ಚರ್ಚಿಸಿ ಜಾತಿ ಪ್ರಮಾಣ ಪತ್ರದ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ವಾಸವಾಗಿರುವ ಸ್ಥಳದಲ್ಲಿಯೇ ಭೂಮಿ ನೀಡಲು ಅವಕಾಶವಿದೆ. ₹ 15 ಲಕ್ಷ ವೆಚ್ಚದಲ್ಲಿ ಪ್ರತಿ ಕುಟುಂಬಕ್ಕೆ ಭೂಮಿ ಮಂಜೂರು ಮಾಡಲಾಗುವುದು. ಸಮುದಾಯದ ಮುಖಂಡರೊಂದಿಗೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ’ ಎಂದರು.

‘ಇನ್ನು ನೀವೆಲ್ಲ ಮಾದಿಗರು’

‘ಮಾದಿಗರೇ ಸಮಾಜದ ಬಹಿಷ್ಕೃತರು. ಇಂತಹ ಮಾದಿಗರ ಹಟ್ಟಿಯನ್ನು ಪ್ರವೇಶ ಮಾಡಲು ಸಾಧ್ಯವಾಗದ ದಯನೀಯ ಸ್ಥಿತಿಯಲ್ಲಿ ದಕ್ಕಲಿಗರು ಇರುವುದು ಶೋಚನೀಯ. ಇನ್ನು ಮುಂದೆ ನೀವೆಲ್ಲರೂ ಮಾದಿಗ ಸಮುದಾಯದ ಭಾಗ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

‘ಎಚ್‌.ಡಿ.ಕೋಟೆ ತಾಲ್ಲೂಕಿನ ಹಾಡಿಯೊಂದರ ದಕ್ಕಲಿಗರು ಸಮಸ್ಯೆಗೆ ಸಿಲುಕಿದಾಗ ಮಠ ನೆರವು ನೀಡಿತು. ಅವರೆಲ್ಲರೂ ಮಠದ ಭಕ್ತರಾಗಿ ನಡೆದುಕೊಳ್ಳುತ್ತಿದ್ದಾರೆ. ಮಾದಿಗ ಸಮುದಾಯದ ಉಪಜಾತಿಯಾಗಿರುವ ದಕ್ಕಲಿಗರು ಕೂಡ ಮಠದ ಭಕ್ತರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಮಠ ಮಾಡಲಿದೆ’ ಎಂದರು.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಇದ್ದರು.

***

ದಕ್ಕಲಿಗ ಜಾತಿಯ ಹೆಸರಿನಲ್ಲಿ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಹಾಗೂ ಸರ್ಕಾರಿ ಸೌಲಭ್ಯಗಳಿಂದ ಸಮುದಾಯದ ಮಹಿಳೆ ಮತ್ತು ಮಕ್ಕಳು ವಂಚಿತರಾಗುತ್ತಿದ್ದಾರೆ.

ಲಲಿತಾ, ದಕ್ಕಲಿಗ ಸಮಾಜದ ಮಹಿಳೆ

***

ಪಡಿತರ ಚೀಟಿ, ಆಧಾರ್‌ ಸೇರಿ ಯಾವುದೇ ಗುರುತಿನ ಚೀಟಿಯನ್ನು ಸರ್ಕಾರ ನೀಡಿಲ್ಲ. ಯಾರಾದರೂ ನಿಧನರಾದರೆ ಹೊಳೆ ದಂಡೆ ಹುಡುಕಿ ಅಂತ್ಯಕ್ರಿಯೆ ಮಾಡುತ್ತೇವೆ. ನಮಗೆ ಕಸಗುಡಿಸುವ ಕೆಲಸವಾದರೂ ಕೊಡಿ.

ಲಕ್ಷ್ಮಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT