ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿಗೆ ಖರೀದಿ ಭರಾಟೆ ಜೋರು

ಬಟ್ಟೆ ಖರೀದಿಗೆ ಮುಗಿಬಿದ್ದಿದ್ದ ಜನರು, ಮಾರುಕಟ್ಟೆಯಲ್ಲಿ ಜನ ಜಾತ್ರೆ
Last Updated 1 ಏಪ್ರಿಲ್ 2022, 5:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನಿಂದಾಗಿ ಕಳೆದೆರಡು ವರ್ಷದಿಂದ ಆತಂಕದಲ್ಲೇ ಯುಗಾದಿ ಹಬ್ಬ ಆಚರಿಸಿದ್ದ ಜನರು ಈ ಬಾರಿ ನಿರಾತಂಕವಾಗಿದ್ದಾರೆ. ಎರಡು ವರ್ಷದ ನೋವನ್ನು ಮರೆತು ಮನೆ ಮಂದಿಯಲ್ಲ ಮಾರುಕಟ್ಟೆಗೆ ಬಂದು ಖರೀದಿಯಲ್ಲಿ ಮುಳುಗಿದ್ದೇ ಜನರ ಸಂಭ್ರಮವನ್ನು ಸಾಕ್ಷೀಕರಿಸುತ್ತಿದೆ.

ಯುಗಾದಿ ಹಬ್ಬದ ಖರೀದಿ ಕಳೆದೊಂದು ವಾರದಿಂದ ನಡೆಯುತ್ತಿದ್ದು, ಗುರುವಾರ ವೇಗ ಪಡೆಯಿತು. ನಗರದ ಪ್ರಮುಖ ರಸ್ತೆಗಳಷ್ಟೇ ಅಲ್ಲದೆ, ಪಾದಚಾರಿ ಮಾರ್ಗಗಳಲ್ಲಿ ಕಂಡಿದ್ದು ಜನವೋ ಜನ.

ಶುಕ್ರವಾರದಿಂದ ಭಾನುವಾರದವರೆಗೂ ನಡೆಯಲಿರುವ ಯುಗಾದಿ ಹಬ್ಬಕ್ಕೆ ಬಟ್ಟೆ, ಮಾವಿನ ತೋರಣ, ಬೇವಿನ ಸೊಪ್ಪು, ಉಡುದಾರ, ಬಳೆ ಸೇರಿ ಮಹಿಳೆಯರ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು. ಈ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ಸುಡು ಬಿಸಿಲಿಗೂ ಜಗ್ಗದ ಜನರು ಖರೀದಿಯಲ್ಲಿ ತಲ್ಲೀನರಾಗಿದ್ದರು.

ಬೆಂಗಳೂರು, ಮೈಸೂರು ಮಾದರಿಯಲ್ಲಿ ರಸ್ತೆ ಬದಿ ಬಟ್ಟೆ ವ್ಯಾಪಾರ ಕಂಡುಬಂದಿತು. ಬಿಡಿ ರಸ್ತೆ, ವಾಸವಿ ಮಹಲ್ ರಸ್ತೆ, ಲಕ್ಷ್ಮಿ ಬಜಾರ್‌ ಮಾರ್ಗದ ಇಕ್ಕೆಲಗಳಲ್ಲೂ ಸಿದ್ಧ ಉಡುಪುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಕೆಲವರು ಮುಗಿಬಿದ್ದು ಖರೀದಿಗೆ ಮುಂದಾದರು. ಗಾಂಧಿ ವೃತ್ತ, ಮೇದೆಹಳ್ಳಿ ರಸ್ತೆವರೆಗೂ ವ್ಯಾಪಾರದ ಭರಾಟೆ ವಿಸ್ತರಿಸಿತ್ತು.

ಜೀನ್ಸ್ ಪ್ಯಾಂಟ್, ರೆಡಿಮೇಡ್ ಶರ್ಟ್, ಟೀ–ಶರ್ಟ್‌ ಅತ್ಯಂತ ಕಡಿಮೆ ಬೆಲೆಗೆ ಸಾರ್ವಜನಿಕರು ಖರೀದಿಸಿದರು. ಬೆಳಿಗ್ಗೆ 9ರಿಂದ ರಾತ್ರಿಯವರೆಗೂ ಅಲ್ಲಲ್ಲಿ ಬಟ್ಟೆ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಗರದ ಬಹುತೇಕ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಇದರ ನಡುವೆ ಬೀದಿ ಬದಿಯ ವ್ಯಾಪಾರಿಗಳು ಕಡಿಮೆ ಬೆಲೆಗೆ ಬಟ್ಟೆಗಳನ್ನು ಕೊಳ್ಳುವಂತೆ ರಸ್ತೆಯಲ್ಲಿ ಕೂಗುತ್ತಿದ್ದ ದೃಶ್ಯ ಕಂಡುಬಂದಿತು. ರಂಗೋಲಿ, ಬಣ್ಣದ ಪುಡಿ ಮಾರಾಟ ಜೋರಾಗಿಯೇ ನಡೆಯಿತು. ಬಹುತೇಕ ಕಡೆಗಳಲ್ಲಿ ಚೌಕಾಸಿ ಮಾಡದೆ ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಹಬ್ಬದ ಪ್ರಯುಕ್ತ ಚಿಕ್ಕಪೇಟೆ, ಆನೆಬಾಗಿಲು, ಗಾಂಧಿ ವೃತ್ತ, ಸಂತೆಹೊಂಡ, ಖಾಸಗಿ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂದಿತು. ಎಸ್‌ಬಿಐ ವೃತ್ತದಿಂದ ಗಾಂಧಿ ವೃತ್ತದವರೆಗೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ರಸ್ತೆಯ ಮಾರ್ಗದುದ್ದಕ್ಕೂ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಯಿತು.

ದ್ವಿಚಕ್ರ ವಾಹನ ಸವಾರರು ಹರಸಾಹಸ ಪಟ್ಟುಕೊಂಡು ರಸ್ತೆ ದಾಟಿದರು. ಮಧ್ಯಾಹ್ನದ ವೇಳೆಗೆ ರಸ್ತೆಗಳಲ್ಲಿ ಆಟೊಗಳು ನಿಧಾನಗತಿಯಲ್ಲಿ ಸಾಗುವಷ್ಟು ಜನದಟ್ಟಣೆ ಉಂಟಾಗಿತ್ತು. ಸಂಜೆ ವೇಳೆಗೆ ಮಾರುಕಟ್ಟೆಗೆ ಕಾಲಿಡುವುದು ಸಹ ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.

ಗಗನಕ್ಕೇರಿದ ಹೂ ದರ

ಯುಗಾದಿ ಹಬ್ಬದ ಕಾರಣಕ್ಕೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಸಂತೆಹೊಂಡದ ಮುಂಭಾಗದಲ್ಲಿ ಹಬ್ಬಕ್ಕಾಗಿ ಹಣ್ಣು, ಪೂಜಾ ಸಾಮಗ್ರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಹೂವುಗಳ ಖರೀದಿಗೂ ಜನ ಮುಗಿ ಬಿದ್ದಿದ್ದರು.

ಹಳದಿ, ಕಲರ್‌ ಸೇವಂತಿಗೆ, ಕನಕಾಂಬರ, ಕಾಕಡ, ಬಟನ್ಸ್, ಮೊಲ್ಲೆ, ದುಂಡು ಮಲ್ಲಿಗೆ ಹೀಗೆ ಹೂವುಗಳ ಬೆಲೆ ಮಾರಿಗೆ ₹ 100 ಗಡಿ ದಾಟಿದ್ದು, ಶುಕ್ರವಾರ, ಶನಿವಾರ ಮತ್ತಷ್ಟು ದರ ಹೆಚ್ಚಾಗುವ ಲಕ್ಷಣಗಳು ಸ್ಪಷ್ಟವಾಗಿವೆ. ಇದಕ್ಕೆ ಹಣ್ಣಿನ ದರ ಸಹ ಹೊರತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT