ಶನಿವಾರ, ಏಪ್ರಿಲ್ 17, 2021
31 °C
ಕ್ಷೇತ್ರ ಪುನರ್‌ ವಿಂಗಡಣೆ ಅಧಿಸೂಚನೆ ಪ್ರಕಟ, ತಾ.ಪಂ. ಕ್ಷೇತ್ರ ಇಳಿಕೆ

ಜಿ.ಪಂ: ನಾಲ್ಕು ಕ್ಷೇತ್ರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಿರುವ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಜಿಲ್ಲಾ ಪಂಚಾಯಿತಿಗೆ ನಾಲ್ಕು ಸ್ಥಾನಗಳು ಹೆಚ್ಚಾಗಿದ್ದು, ತಾಲ್ಲೂಕು ಪಂಚಾಯಿತಿಗೆ 27 ಕ್ಷೇತ್ರಗಳು ಕಡಿಮೆಯಾಗಿವೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಮಟದಕುರುಬರಹಟ್ಟಿ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಗುಂಡೇರಿ, ಚಳ್ಳಕೆರೆ ತಾಲ್ಲೂಕಿನಲ್ಲಿ ಟಿ.ಎನ್‌.ಕೋಟೆ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಹರ್ತಿಕೋಟೆ ಕ್ಷೇತ್ರಗಳು ಹೊಸದಾಗಿ ಸೃಷ್ಟಿಯಾಗಿವೆ. ಪುನರ್‌ ವಿಂಗಡಣೆ ಪ್ರಕ್ರಿಯೆಯಲ್ಲಿ ಹಲವು ಹಳ್ಳಿಗಳು ಕ್ಷೇತ್ರ ಬದಲಿಸಿವೆ. ಬಹುತೇಕ ಕ್ಷೇತ್ರಗಳ ಹೆಸರು ಕೂಡ ಬದಲಾವಣೆ ಮಾಡಲಾಗಿದೆ.

‍ಪುನರ್‌ ವಿಂಗಡಣೆಯಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 37ರಿಂದ 41ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಮಾತ್ರ ಈ ಪುನರ್‌ ವಿಂಗಡಣೆ ನಡೆದಿದೆ. ಹೊಸದುರ್ಗ ಮತ್ತು ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 136ರಿಂದ 109ಕ್ಕೆ ಇಳಿಕೆಯಾಗಿದೆ.

ಜನಸಂಖ್ಯೆ ಆಧಾರದ ಮೇರೆಗೆ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿರುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 35 ಸಾವಿರದಿಂದ 42 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಹಾಗೂ 12 ಸಾವಿರದಿಂದ 15 ಸಾವಿರ ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚನೆ ಮಾಡಲಾಗಿದೆ. ಕ್ಷೇತ್ರಗಳ ಹೆಸರು ಬದಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಹೆಚ್ಚು ಜನಸಂಖ್ಯೆ ಹೊಂದಿದ ಹಳ್ಳಿಯ ಹೆಸರನ್ನು ಕ್ಷೇತ್ರಕ್ಕೆ ಇಡಲಾಗಿದೆ.

ಆಡಳಿತ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಚುನಾವಣಾ ಆಯೋಗ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದೆ. ಪುನರ್‌ ವಿಂಗಡಣೆ ಮಾಡಿದ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಸಮಗ್ರ ಮಾಹಿತಿಯನ್ನು ಪ್ರಕಟಿಸಿದೆ. ಚುನಾವಣೆ ಸಮೀಪಿಸಿರುವ ಪರಿಣಾಮ ಕ್ಷೇತ್ರ ಪುನರ್‌ ವಿಂಗಡಣೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.