ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದನೊಬ್ಬನ ಅಲೆಮಾರಿ ಬದುಕು!

ಜಾನಪದ ಕಲಾವಿದನ ಬಗ್ಗೆ ಸರ್ಕಾರದ ನಿರ್ಲಕ್ಷ್ಯ, ಕೈಸೇರದ ಮಾಸಾಶನ
Last Updated 27 ಜುಲೈ 2013, 5:19 IST
ಅಕ್ಷರ ಗಾತ್ರ

ಹೊಳಲ್ಕೆರೆ: `ಸುಮಧುರ ಕಂಠ. ಕಂಜರ ಹಿಡಿದು ಹಾಡಲು ಆರಂಭಿಸಿದರೆ ಮೈಮರೆಯುವ ತಲ್ಲೆನತೆ. ಹಾಡಿಗೆ ತಕ್ಕಂತೆ ಹಾವಭಾವ. ಕಂಚಿನ ಕಂಠಕ್ಕೆ ಮಂತ್ರಮುಗ್ದರಾಗುವ ಪ್ರೇಕ್ಷಕರು. ಅಡೆತಡೆಯಿಲ್ಲದೆ ಲೀಲಾಜಾಲವಾಗಿ ಒಂದರ ಹಿಂದೆ ಒಂದರಂತೆ ಹೊರಹೊಮ್ಮುವ ಹಾಡುಗಳು. ಜತೆಗೆ ಒಂದಿಷ್ಟು ಹಾಸ್ಯ... ಇದು ಗಂಜಿಗಟ್ಟೆ ಕೃಷ್ಣಮೂರ್ತಿ ಎಂಬ ಜನಪದ ಕಲಾವಿದನ ವ್ಯಕ್ತಿ ಚಿತ್ರಣ.

ಚಿತ್ರದುರ್ಗ- ಹೊಳಲ್ಕೆರೆ ಮಾರ್ಗದ ಜಾನುಕೊಂಡ ಸಮೀಪದ ಗಂಜಿಗಟ್ಟೆ ಎಂಬ ಗ್ರಾಮದ ಕೃಷ್ಣಮೂರ್ತಿ ಜನಪದ ಗೀತೆ, ದೇಶಭಕ್ತಿ ಗೀತೆ, ಭಕ್ತಿಗೀತೆ, ಲಾವಣಿ, ವಚನಗಳು ಹೀಗೆ ನಾನಾ ಪ್ರಕಾರಗಳ ಹಾಡುಗಳನ್ನು ಹಾಡುತ್ತಾರೆ. ತಬಲಾ ನುಡಿಸುವುದು, ನಾಟಕದಲ್ಲಿ ಅಭಿನಯದಲ್ಲಿ ಇವರು ನಿಸ್ಸೀಮರು.

1967ರಲ್ಲಿ 8ನೇ ತರಗತಿ ಮುಗಿಸಿ ಹಾಡು ಹೇಳಲು ಆರಂಭಿಸಿದ ಇವರದ್ದು ಇಂದಿಗೂ ಕೊನೆಯಿಲ್ಲದ ಸುದೀರ್ಘ ಪಯಣ. ಇವರ ಪ್ರತಿಭೆಯನ್ನು ಗುರುತಿಸಿದ ರಂಭಾಪುರಿ ಮಠ `ಜಾನಪದ ಕಲಾರತ್ನ' ಬಿರುದು ನೀಡಿ ಗೌರವಿಸಿದೆ. ವಿವಿಧ ಸಂಘಟನೆಗಳು ವಿಶ್ವಕನ್ನಡ ಕಣ್ಮಣಿ, ದುರ್ಗದ ಸಿರಿ, ಜಾನಪದ ನಿಧಿ ಎಂದು ಬಿರುದು ನೀಡಿವೆ.

45 ವರ್ಷಗಳಿಂದ ಶಾಲೆ, ಕಾಲೇಜು, ಸಾರ್ವಜನಿಕ ಸಮಾರಂಭಗಳು, ಗಣಪತಿ ಉತ್ಸವಗಳು ಮತ್ತಿತರ ಕಡೆ ಹಾಡುತ್ತಾರೆ. ಇದುವರೆಗೆ ಗುಲ್ಬರ್ಗ, ರಾಯಚೂರು, ಮೈಸೂರು, ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಸುತ್ತಿರುವ ಇವರು, ಆಂಧ್ರ ಪ್ರದೇಶದಲ್ಲೂ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆಕಾಶವಾಣಿಯಲ್ಲೂ ಇವರು ಹಾಡಿದ್ದಾರೆ.

ಸಾವಿರಾರು ಶಾಲೆಗಳಲ್ಲಿ ಕಾರ್ಯಕ್ರಮ ನೀಡಿ ಮಕ್ಕಳನ್ನು ರಂಜಿಸಿದ್ದಾರೆ. ದಿನಕ್ಕೆ ಎರಡು ಮೂರು ಶಾಲೆಗಳಲ್ಲಿ ಹಾಡುವುದು, ಅವರು ಕೊಡುವ ನೂರಿನ್ನೂರು ರೂಪಾಯಿ ಪಡೆದು, ಹತ್ತಿರದ ಮಠವೊಂದರಲ್ಲಿ ಉಳಿದುಕೊಳ್ಳುವುದು, ಮತ್ತೆ ಮುಂದಿನ ಊರಿಗೆ ಹೋಗುವುದು ಇವರ ನಿತ್ಯದ ಕಾಯಕ.
ಕಲೆಗೆ ಸರ್ಕಾರದ ಪ್ರೋತ್ಸಾಹ ಇಲ್ಲ: ನನ್ನ ತಂದೆ ರಂಗಪ್ಪ ಅವರೊಂದಿಗೆ ಭಜನೆಗೆ ಹೋಗುತ್ತಿದ್ದೆ. ಆಗಲೇ ಹಾಡುವ ಕಲೆ ಕರಗತವಾಯಿತು. `ಕಲೆಗೆ ಎಂದೂ ಬೆಲೆ ಇದೆ. ಜನ ನನ್ನ ಕಲೆಯನ್ನು ಮೆಚ್ಚಿದ್ದಾರೆ. ಅಭಿಮಾನದಿಂದ ಕರೆಸಿ ಹಾಡಿಸುತ್ತಾರೆ.  ಆದರೆ ಸರ್ಕಾರ ಮಾತ್ರ ಕಲಾವಿದರನ್ನು ಪ್ರೋತ್ಸಾಹಿಸುತ್ತಿಲ್ಲ. ನಾನು ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ್ದು, ಅದು ಇನ್ನೂ ನನ್ನ ಕೈಸೇರಿಲ್ಲ ಎನ್ನುತ್ತಾರೆ ಕೃಷ್ಣಮೂರ್ತಿ.

`ಮಾಸಾಶನ ಪಡೆಯಲು ಇರುವ ನಿಯಮಗಳು ಸರಿಯಿಲ್ಲ. ಕಲಾವಿದರಿಗೆ ಮಾಸಾಶನ ನೀಡಲು 58 ವರ್ಷ ವಯಸ್ಸಾಗಿರಬೇಕು. ಜೀವನವೇ ಮಗಿದ ಮೇಲೆ ಹಣಕೊಟ್ಟು ಪ್ರಯೋಜನ ಇಲ್ಲ. ರಾಜ್ಯೋತ್ಸವ ಪ್ರಶಸ್ತಿಗೂ ಮೂರು ಬಾರಿ ಅರ್ಜಿ ಸಲ್ಲಿಸಿದ್ದು, ಇನ್ನೂ ಸಿಕ್ಕಿಲ್ಲ. ನನಗೆ ಪತ್ನಿ, ನಾಲ್ವರು ಮಕ್ಕಳಿದ್ದಾರೆ. ಜೀವನ ನಿರ್ವಹಣೆಗಾಗಿ ಊರೂರು ಅಲೆದು ಹಾಡುತ್ತೇನೆ ಎಂದು ಹತಾಶರಾಗಿ ನುಡಿಯುತ್ತಾರೆ' ಅವರು. ಕೃಷ್ಣಮೂರ್ತಿ ಅವರನ್ನು ಮೊಬೈಲ್ ಸಂಖ್ಯೆ 98806 07220 ರಲ್ಲಿ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT