ಮಂಗಳೂರು: ಸುಪ್ರೀಂ ಕೋರ್ಟ್ ಅನ್ನು ನೆಪವಾಗಿಟ್ಟು, ಬಿಜೆಪಿಯು ಧಾರ್ಮಿಕ ಕೇಂದ್ರಗಳ ಕಟ್ಟಡಗಳನ್ನು ಕೆಡವುತ್ತಿದೆ. ಇದರಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಸರ್ಕಾರ ತಕ್ಷಣ ಈ ಕ್ರಮವನ್ನು ನಿಲ್ಲಿಸಿ, ಸುಪ್ರೀಂ ಕೋರ್ಟ್‌ಗೆ ವಿಷಯ ಮನವರಿಕೆ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರಾತನ ದೇವಾಲಯಗಳನ್ನು ಒಡೆದು ವಿಗ್ರಹಗಳನ್ನು ಕಸದ ರಾಶಿಯಲ್ಲಿ ಎಸೆದಿರುವುದು ಜನರಿಗೆ ನೋವುಂಟು ಮಾಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೂ, ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಬಿಜೆಪಿ ಹಾಗೂ ಅವರ ಪರಿವಾರದ ಸಂಘಟನೆಗಳು ಪ್ರತಿಭಟನೆಯ ನಾಟಕವಾಡುತ್ತಿವೆ’ ಎಂದು ಟೀಕಿಸಿದರು.
‘ಧಾರ್ಮಿಕ ಕೇಂದ್ರ ಕೆಡವಲು ಅವಸರ ಮಾಡಬೇಡಿ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಈಗಾಗಲೇ ಸಾಕಷ್ಟು ಪುರಾತನ ದೇಗುಲಗಳನ್ನು ಒಡೆದು ಹಾಕಲಾಗಿದೆ. ನ್ಯಾಯಾಲಯದ ಆದೇಶ ಪಾಲನೆಯ ಸಂದರ್ಭದಲ್ಲಿ ಸ್ಥಳೀಯವಾಗಿ ಪರ್ಯಾಯ ಕಟ್ಟಡ ನಿರ್ಮಾಣದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ, ವಿಗ್ರಹಗಳನ್ನು ಬೀದಿಯಲ್ಲಿ ಎಸೆಯಲಾಗಿದೆ. ಬಿಜೆಪಿ ಸಾರ್ವಜನಿಕರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
ಸದಾಶಿವ ಉಳ್ಳಾಲ್, ಪ್ರಕಾಶ್ ಸಾಲ್ಯಾನ್, ನೀರಜ್ ಪಾಲ್,ವಿಶ್ವಾಸ್ ಕುಮಾರ್ ದಾಸ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.