ಶನಿವಾರ, ಫೆಬ್ರವರಿ 27, 2021
31 °C

ವಿಜಯಪುರ: ಆರು ಜನ ಆರೋಪಿಗಳ ಬಂಧನ, ನಾಡ ಪಿಸ್ತೂಲ್ ಸೇರಿ 13 ಗುಂಡು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಾಡ ಪಿಸ್ತೂಲ್ ಹೊಂದಿರುವ ಖಚಿತ ಮಾಹಿತಿ ಆಧರಿಸಿ ಗುರುವಾರ ಪ್ರತ್ಯೇಕವಾಗಿ ದಾಳಿ ನಡೆಸಿದ ಜಿಲ್ಲಾ ಪೊಲೀಸರು ಇಂಡಿ ಪಟ್ಟಣದಲ್ಲಿ ಮೂವರು ಹಾಗೂ ನಗರದ ಬಡಿಕಮಾನ್ ಬಳಿ ಮೂವರು ಸೇರಿದಂತೆ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಇಂಡಿ ಪಟ್ಟಣದ ಟಿಪ್ಪು ಸುಲ್ತಾನ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ತೊಗಲಶಾಗಲ್ಲಿಯ ಸದ್ದಾಮ್ ನೂರಅಹ್ಮದ್ ಅರಬ್, ಇಲ್ಲಿಯ ಶಕ್ತಿ ನಗರದ ಜೋಯಬ್ ಮಕಸೂದಸಾಬ್ ಜಂಬಗಿ, ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ತಂಬಾಕವಾಡಿಯ ಪಿರೇಶ ಅಂಬಾರಾಯ ಹಡಪದ, ಬಡಿ ಕಮಾನ್ ಬಳಿ ಸಂಚರಿಸುತ್ತಿದ್ದ ಇಂಡಿಯ ಅಂಜುಮನ್ ಓಣಿಯ ಮಾಸೂಮ್ ಸಲೀಮ್ ಅರಬ್, ನಗರದ ನಾಗರಬಾವಡಿ ಗಲ್ಲಿಯ ಫರಾನ್ ಅಬ್ದುಲ್ ಅಜೀಜ್ ಅಹ್ಮದಿ ಹಾಗೂ ಸಮೀರ್ ಅಲಿಯಾಸ್ ಬಾಬಾ ರಾಜೇಸಾಬ್ ಬಾಗಾಯತ್ ಬಂಧಿತರು.

ಇವರಿಂದ ₹1.25 ಲಕ್ಷ ಮೌಲ್ಯದ ಐದು ನಾಡ ಪಿಸ್ತೂಲ್, 13 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ‘ಬಂಧಿತರ ಪೈಕಿ ಸಮೀರ್ ಹೊರತುಪಡಿಸಿ ಉಳಿದ ಎಲ್ಲರ ಹೆಸರಲ್ಲೂ ರೌಡಿಶೀಟ್‌ ತೆರೆಯಲಾಗಿದೆ. ಸಮೀರ್ ಮೇಲೂ ರೌಡಿಶೀಟ್ ತೆರೆಯಲಾಗುವುದು. ಜೋಯಬ್ ಹಾಗೂ ಫರಾನ್ ಮೇಲೆ ಕೊಲೆ ಆರೋಪ ಪ್ರಕರಣಗಳು ದಾಖಲಾಗಿವೆ’ ಎಂದರು.

‘ಕೊಲ್ಹಾರ ಪಟ್ಟಣದ ಕೊರ್ತಿ ಕೊಲ್ಹಾರ ಸೇತುವೆ ಬಳಿ ಬುಧವಾರ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಕಾರಣ ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಆಟೊ ಚಾಲಕ ಬಸ್‌ಗೆ ಡಿಕ್ಕಿ ಹೊಡೆಸಿದ್ದಾನೆ ಎಂಬುದು ಸತ್ಯಕ್ಕೆ ದೂರವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ತೆ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಸುನಿಲ್ ಆರ್.ಕಾಂಬಳೆ, ಸಬ್ ಇನ್‌ಸ್ಪೆಕ್ಟರ್ ಎಸ್.ಪಿ.ಕಟ್ಟಿಮನಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು