ಮಂಗಳೂರು: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ನಗರದ ಶಕ್ತಿನಗರದ ವ್ಯಕ್ತಿಯೊಬ್ಬರಿಗೆ 2021ರ ಮಾರ್ಚ್‌ನಿಂದ ಈಚೆಗೆ ಒಟ್ಟು ₹ 1.15 ಕೋಟಿ ವಂಚನೆ ಮಾಡಿದ ಆರೋಪಿಯನ್ನು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಚಲವೂರಿನ ಜಿಜೊ ಜಾನ್ ಪಿ.ಕೆ. (29) ಬಂಧಿತ ಆರೋಪಿ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದೂರುದಾರಿಗೆ ಸಹದ್ಯೋಗಿ ಮೂಲಕ ಜಿಜೊ ಜಾನ್ 2021ರ ಮಾರ್ಚ್ ತಿಂಗಳಲ್ಲಿ ಪರಿಚಯವಾಗಿದ್ದ. ತನ್ನನ್ನು ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ಜಿಜೊ ಜಾನ್ ದೂರುದಾರರನ್ನು ನಂಬಿಸಿದ್ದ. ಕೋವಿಡ್ ಇರುವುದರಿಂದ ಮುಖಾಮುಖಿ ಭೇಟಿ ಆಗಲು ಸಾಧ್ಯವಿಲ್ಲ ಎಂದು ಹೇಳಿ ದೂರುದಾರರ ಮೊಬೈಲ್‌ಗೆ 2021 ರ ಮಾರ್ಚ್‌ನಲ್ಲಿ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಕ್ರಿಪ್ಟೊ ಆ್ಯಂಡ್ ಕರೆನ್ಸಿ ಬಗ್ಗೆ ಮಾಹಿತಿ ನೀಡಿದ್ದ. ಅದರಲ್ಲಿ ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಶೇ 10ರಷ್ಟು ಹಣವನ್ನು ಹಿಂತಿರುಗಿಸುವುದಾಗಿ ನಂಬಿಸಿದ್ದ. ಅದರಂತೆ ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ 2021ರ ಮಾರ್ಚ್ 23ರಿಂದ ಅದೇ ವರ್ಷದ ಜೂನ್ 1ರವರೆಗೆ ₹ 41 ಲಕ್ಷವನ್ನು ಐಎಂಪಿಎಸ್ ಹಾಗೂ ಎನ್ಇಎಫ್‌ಟಿ ಮೂಲಕ ಆರೋಪಿಗೆ ಪಾವತಿಸಿದ್ದರು. ಆ ಬಳಿಕ ಸಾಲ ಪಡೆದು 2021ರ ಅ.22ರಿಂದ 26ರವರೆಗೆ ಮತ್ತೆ ₹ 60 ಲಕ್ಷವನ್ನು ಐಎಂಪಿಎಸ್ ಹಾಗೂ ಎನ್ಇಎಫ್‌ಟಿ ಮೂಲಕ ನೀಡಿದ್ದರು. ಎಲ್ಲ ಸೇರಿ ಆರೋಪಿಯು, ದೂರುದಾರರಿಂದ ಒಟ್ಟು ₹1.24 ಕೋಟಿ ಹಣವನ್ನು ಪಡೆದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿಯು ತನ್ನ ಉಳಿತಾಯ ಖಾತೆಯಿಂದ ₹ 9 ಲಕ್ಷವನ್ನು ದೂರುದಾರರಿಗೆ 2022ರ ಸೆಪ್ಟಂಬರ್‌ನಲ್ಲಿ ಮರು ಪಾವತಿಸಿದ್ದ. ಹಾಗಾಗಿ ಹೂಡಿಕೆ ಮಾಡಿದ ಹಣ ಮರಳಿ ಸಿಗಬಹುದು ಎಂಬ ನಿರೀಕ್ಷೆಯಿಂದ ದೂರುದಾರರು ಕಾದಿದ್ದರು. ಆದರೆ, ಇತ್ತೀಚೆಗೆ ಆರೋಪಿಯು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಹಾಗಾಗಿ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗ್ಡೆ, ಸೆನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ, ಪಿಎಸ್‌ಐ ಲೀಲಾವತಿ ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.