ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಗೆ 13 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ

ಸೋಮವಾರದಿಂದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ: ಜಿಲ್ಲಾಧಿಕಾರಿ
Last Updated 5 ಜೂನ್ 2021, 6:16 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಗೆ 13 ಸಾವಿರ ಡೋಸ್‌ ಕೋವ್ಯಾಕ್ಸಿನ್ ಲಸಿಕೆ ಬಂದಿವೆ. ಸೋಮವಾರದಿಂದ ಪ್ರತಿದಿನ ಎಲ್ಲ ತಾಲ್ಲೂಕು ಆಸ್ಪತ್ರೆಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಎರಡನೇ ಡೋಸ್ ತೆಗೆದುಕೊಳ್ಳಲು ಬಾಕಿ ಇದ್ದವರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆನ್‌ಲೈನ್‌ ಮೂಲಕ ಶೇ 75 ಹಾಗೂ ಶೇ 25ರಷ್ಟು ನೇರವಾಗಿ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದರು.

‘ಅನೇಕ ಕಡೆಗಳಲ್ಲಿ ಜನರು ನಸುಕಿನಲ್ಲಿ ಬಂದು ಸಾಲಿನಲ್ಲಿ ನಿಲುತ್ತಾರೆ, ಟೋಕನ್‌ಗಳು ಮಾರಾಟವಾಗುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ದೂರುಗಳ ನಿವಾರಣೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಶೇ 25ರ ಕೋಟಾದಡಿ 70 ವರ್ಷ ಮೇಲಿನ ಹಿರಿಯ ನಾಗರಿಕರಿಗೆ ಆದ್ಯತೆ ನೀಡಲಾಗಿದೆ. ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಅವರು ಲಸಿಕಾ ಕೇಂದ್ರಕ್ಕೆ ಹೋದರೆ, ಅಲ್ಲಿ ಅವರಿಗೆ ಲಸಿಕೆ ನೀಡಲಾಗುತ್ತದೆ. ಒಂದೊಮ್ಮೆ ಆಯಾ ದಿನದ ಕೋಟಾ ಮುಗಿದಲ್ಲಿ, ಆರೋಗ್ಯ ಕೇಂದ್ರದ ರಜಿಸ್ಟರ್‌ನಲ್ಲಿ ನೋಂದಣಿ ಮಾಡಿಕೊಂಡು, ಅವರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 35 ಸಾವಿರ ಜನರು ಮೊದಲನೇ ಡೋಸ್ ಕೋವ್ಯಾಕ್ಸಿನ್ ಪಡೆದಿದ್ದಾರೆ. ಸದ್ಯದ ದಾಖಲೆಯಂತೆ 20 ಸಾವಿರ ಜನರಿಗೆ ಎರಡನೇ ಡೋಸ್ ಮುಗಿದಿದೆ. ಇನ್ನು 15 ಸಾವಿರ ಜನರ ಮಾಹಿತಿ ಸಿಗಬೇಕಾಗಿದೆ. ಕೆಲವರು ಖಾಸಗಿ ಆಸ್ಪತ್ರೆಯಲ್ಲಿ, ಮುಂಚೂಣಿ ಕಾರ್ಯಕರ್ತರು ಬೇರೆ ಬೇರೆ ಕಡೆಗಳಲ್ಲಿ ತೆಗೆದುಕೊಂಡಿರುವ ಸಾಧ್ಯತೆ ಇದೆ. ಆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ತಿಳಿಸಿದರು.

‘ಸರ್ಕಾರ ನಿಗದಿಪಡಿಸಿರುವ ಮುಂಚೂಣಿ ಕಾರ್ಯಕರ್ತರಲ್ಲಿ 18ರಿಂದ 44 ವರ್ಷದ ಒಳಗಿನವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಅನುಬಂಧ 3ರ ಮೂಲಕ ಇಲಾಖೆಯ ಮುಖ್ಯಸ್ಥರ ದೃಢೀಕರಣ ಪತ್ರ ತಂದರೆ ಅವರಿಗೆ ಲಸಿಕೆ ನೀಡಲಾಗುತ್ತದೆ. ಬ್ಯಾಂಕ್ ಮತ್ತಿತರ ಆದ್ಯತಾ ಕ್ಷೇತ್ರದಲ್ಲಿ ಗುರುತಿಸಿರುವವರಿಗೆ ಅವರ ಕಚೇರಿಯಲ್ಲೇ ತೆರಳಿ ಲಸಿಕೆ ನೀಡಲಾಗುತ್ತಿದೆ. ಅಸಂಘಟಿತ ವಲಯದವರು ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಸೌಲಭ್ಯ ಪಡೆಯಬಹುದು’ ಎಂದು ಹೇಳಿದರು.

ವೆಬ್‌ಸೈಟ್‌ನಲ್ಲಿ ನೋಂದಣಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗುವುದು. ಯಾವ ಜಿಲ್ಲೆಯವರು, ಯಾವ ಭಾಗದವರು ಹೆಚ್ಚು ನೋಂದಣಿ ಮಾಡಿಕೊಳ್ಳುತ್ತಾರೆ ಎಂದು ಪರಿಶೀಲಿಸಲು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. ಕೋವಿನ್ ಅಪ್ಲಿಕೇಷನ್‌ನಲ್ಲಿ ಮೊಬೈಲ್ ಮೂಲಕ ನೋಂದಣಿ ಮಾಡಿಕೊಳ್ಳಲು ಹಲವರಿಗೆ ಗೊಂದಲ ಇದೆ. ನೋಂದಣಿ ಜತೆಗೆ ಸ್ಲಾಟ್ ಬುಕ್ ಮಾಡಿದಾಗ ಮಾತ್ರ ಲಸಿಕೆ ದೊರೆಯುವ ಮಾಹಿತಿ ಲಭ್ಯವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಇದ್ದರು.

‘ಸ್ಥಳದಲ್ಲೇ ಲಸಿಕೆಗೆ ಯೋಚನೆ’
ಮನೆಯಿಂದ ಹೊರಬರಲು ಸಾಧ್ಯವಾಗದೇ ಇದ್ದವರು, ಹಾಸಿಗೆ ಹಿಡಿದ ವ್ಯಕ್ತಿಗಳು ಇದ್ದರೆ, ಅಂತಹವರ ಕುಟುಂಬ ಸದಸ್ಯರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಬಹುದು. ಇಂಥವರ ಸಂಖ್ಯೆ ಆಧರಿಸಿ ಅವರಿದ್ದಲ್ಲಿಯೇ ಹೋಗಿ ಲಸಿಕೆ ನೀಡಲು ಯೋಚಿಸಲಾಗಿದೆ ಎಂದು ಡಾ. ರಾಜೇಂದ್ರ ಕೆ.ವಿ ಹೇಳಿದರು.

‘ವಿದೇಶಕ್ಕೆ ಹೋಗುವವರಿಗೆ ನಾಳೆ ಲಸಿಕೆ’
‘ವಿದ್ಯಾಭ್ಯಾಸ, ಉದ್ಯೋಗದ ಕಾರಣಕ್ಕೆ ತುರ್ತಾಗಿ ವಿದೇಶಕ್ಕೆ ಹೋಗುವವರಿಗೆ ಆದ್ಯತೆ ಮೇಲೆ ಲಸಿಕೆ ದೊರೆಯುವಂತಾಗಲು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಕಾರ್ಯದರ್ಶಿಯನ್ನು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ. ಈಗಾಗಲೇ 600 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲ ದಾಖಲೆಗಳು ಸಮರ್ಪಕವಾಗಿರುವ 500 ಜನರಿಗೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ಕೆನರಾ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಲಸಿಕೆ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT