ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಗಡಿ ಭಾಗದಲ್ಲಿ ಅಭಿಯಾನಕ್ಕೆ ಒತ್ತು: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ದಕ್ಷಿಣ ಕನ್ನಡ: ಮೆಗಾ ಲಸಿಕಾ ಮೇಳ; ಜಿಲ್ಲೆಯಲ್ಲಿ 1.50 ಲಕ್ಷ ಲಸಿಕೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇದೇ 17ರಂದು ರಾಜ್ಯದಲ್ಲಿ ನಡೆಯಲಿರುವ ಮೆಗಾ ಲಸಿಕಾ ಮೇಳದ ಭಾಗವಾಗಿ ಜಿಲ್ಲೆಯಲ್ಲಿ ಅದೇ ದಿನ 1.50 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವಾರ ಲಕ್ಷ ಲಸಿಕಾ ಅಭಿಯಾನದಲ್ಲಿ 54 ಸಾವಿರ ಜನರಿಗೆ ಕೋವಿಡ್ ತಡೆ ಲಸಿಕೆ ನೀಡಲಾಗಿದೆ. ಈ ಬಾರಿ ಗುರಿ ತಲುಪುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಪಿಡಿಒ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 2ಕ್ಕಿಂತ ಕೆಳಗೆ ಇಳಿಕೆಯಾಗಿದ್ದರೂ, ನೆರೆಯ ಕೇರಳ ರಾಜ್ಯದಲ್ಲಿ ಪ್ರಕರಣ ಜಾಸ್ತಿ ಇರುವ ಕಾರಣ, ಗಡಿ ಭಾಗದಲ್ಲಿ ಲಸಿಕೆ ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಗುವುದು’ ಎಂದರು.

ಬೇಡಿಕೆ ಸಲ್ಲಿಸಿದರೆ ಅವಕಾಶ: ಖಾಸಗಿ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಿದಲ್ಲಿ ಅವರಿಗೂ ಉಚಿತ ಲಸಿಕೆ ಅಭಿಯಾನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಲಸಿಕೆ ಹಾಗೂ ಸಿರಿಂಜ್ ಅನ್ನು ಸರ್ಕಾರದಿಂದಲೇ ಪೂರೈಸಲಾಗುತ್ತದೆ. ಎರಡನೇ ಡೋಸ್ ಪಡೆಯಲು ಬಾಕಿ ಇರುವವರ ಸಂಖ್ಯೆ ಸುಮಾರು 56 ಸಾವಿರದಷ್ಟಿದೆ. ಆನ್‍ಲೈನ್ ಮೂಲಕ ಮುಂಗಡ ಕಾಯ್ದಿರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ನಿಯಮ ಸಡಿಲಿಕೆ ಇಲ್ಲ: ಕೋವಿಡ್ ಜತೆಗೆ ನಿಫಾ ವೈರಸ್ ಕಾರಣಕ್ಕೆ ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ ನಿಯಮದಲ್ಲಿ ಯಾವುದೇ ರಿಯಾಯಿತಿ ನೀಡಲಾಗುತ್ತಿಲ್ಲ. ಕರ್ನಾಟಕ ಪ್ರವೇಶಿಸುವವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಬೇಕು. ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಇದ್ದರೆ, ಕೋವಿಡ್ ನೆಗೆಟಿವ್ ವರದಿ ಜತೆಗೆ, ಏಳು ದಿನ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಸದಾಶಿವ ಶ್ಯಾನುಭಾಗ್ ಇದ್ದರು.

‘ರೆಡ್‌ಕ್ರಾಸ್‌ನಿಂದ ವಾಹನ ವ್ಯವಸ್ಥೆ’
ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಗಡಿ ಭಾಗಗಳಲ್ಲಿ ರೆಡ್‍ಕ್ರಾಸ್‍ನಿಂದ ಲಸಿಕಾ ವಾಹನ ವಸ್ಥೆಗೊಳಿಸಲಾಗಿದೆ. ಜಿಲ್ಲಾಡಳಿತದಿಂದಲೂ ಮನೆ –ಮನೆಗೆ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಮಂಗಳೂರು ನಗರಕ್ಕೆ 40 ಸಾವಿರ ಡೋಸ್, ಮೂಲ್ಕಿಗೆ 10 ಸಾವಿರ, ಮೂಡುಬಿದಿರೆಗೆ 15 ಸಾವಿರ, ಉಳ್ಳಾಲಗೆ 20 ಸಾವಿರ, ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರಿಗೆ ತಲಾ 20 ಸಾವಿರ, ಸುಳ್ಯಕ್ಕೆ 10 ಸಾವಿರ ಡೋಸ್ ಲಸಿಕೆ ನಿಗದಿಪಡಿಸಲಾಗಿದೆ. ಸೆ.17ರ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಲಸಿಕಾ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

‘ನಿಫಾ ಲಕ್ಷಣಗಳು ಇಲ್ಲ’
‘ನಿಫಾ ವೈರಸ್ ಬಗ್ಗೆ ಯಾವುದೇ ರೀತಿಯ ಭಯ, ಆತಂಕ ಬೇಡ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.

ಗೋವಾದಲ್ಲಿ ಆರ್‌ಟಿಪಿಸಿಆರ್ ಕಿಟ್ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರವಾರದ ವ್ಯಕ್ತಿಯೊಬ್ಬರಿಗೆ ಜ್ವರ, ಹೃದಯ ಬಡಿತದಲ್ಲಿ ಏರಿಳಿತ, ತಲೆನೋವು ಕಾಣಿಸಿಕೊಂಡ ಕಾರಣ ನಿಫಾ ಇರಬಹುದೆಂಬ ಶಂಕೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮಣಿಪಾಲದಿಂದ ಮಂಗಳೂರು ಆಸ್ಪತ್ರೆಗೆ ಬಂದಿದ್ದು, ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ವ್ಯಕ್ತಿಯಲ್ಲಿ ನಿಫಾ ಲಕ್ಷಣಗಳು ಇಲ್ಲ. ಆದರೂ, ರಕ್ತ, ಗಂಟಲು ದ್ರವ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ, ‍ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು. 

ಗೋವಾದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ, ಹಬ್ಬಕ್ಕಾಗಿ ಕಾರವಾರದಲ್ಲಿರುವ ಮನೆಗೆ ಬಂದಿದ್ದರು. ಬೈಕ್‌ನಲ್ಲಿ ಬಂದ ಅವರು ಮಳೆಯಲ್ಲಿ ನೆನೆದ ಕಾರಣ ಜ್ವರ ಬಂದಿತ್ತು. ಅವರೇ ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ದಾಖಲಾಗಿ, ತಪಾಸಣೆ ಮಾಡಿಸಿಕೊಡಿದ್ದಾರೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು