ಗುರುವಾರ , ಮೇ 28, 2020
27 °C
16 ರೈಲುಗಳ ವ್ಯವಸ್ಥೆ: ರೈಲ್ವೆ ಇಲಾಖೆ ನಿಗದಿಪಡಿಸಿದ ಪ್ರಯಾಣದರ

ಮಂಗಳೂರು: 21,888 ವಲಸೆ ಕಾರ್ಮಿಕರು ತವರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಸ್ವಂತ ರಾಜ್ಯಗಳಿಗೆ ತೆರಳಲು ಬಯಸಿದ ಹೊರರಾಜ್ಯದ ವಲಸೆ ಕಾರ್ಮಿಕರಿಗೆ ರೈಲ್ವೆ ಪ್ರಯಾಣದ ವ್ಯವಸ್ಥೆ ಮಾಡಲಾಗಿದ್ದು, ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ 16 ರೈಲುಗಳ ಮೂಲಕ 21,888 ಮಂದಿ ತಮ್ಮ ಊರುಗಳಿಗೆ ತೆರಳಿದ್ದಾರೆ.

ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತೆರಳಿದ್ದಾರೆ. ಈ ಪೈಕಿ ಬಿಹಾರಕ್ಕೆ 5, ಜಾರ್ಖಂಡ್‌ಗೆ 5, ಉತ್ತರ ಪ್ರದೇಶಕ್ಕೆ 5 ಹಾಗೂ ರಾಜಸ್ಥಾನಕ್ಕೆ 1 ರೈಲು ಜಿಲ್ಲೆಯಿಂದ ತೆರಳಿವೆ. ಪ್ರತಿ ರೈಲಿನಲ್ಲಿ ಸರಾಸರಿ 1,400 ಪ್ರಯಾಣಿಕರು ಸಂಚರಿಸಿದ್ದಾರೆ. ಮಂಗಳೂರು ಜಂಕ್ಷನ್ ಹಾಗೂ ಪುತ್ತೂರು ರೈಲ್ವೆ ನಿಲ್ದಾಣಗಳಿಂದ ರೈಲುಗಳು ಹೊರಟಿದ್ದು, ರೈಲ್ವೆ ಇಲಾಖೆ ನಿಗದಿಪಡಿಸಿದ ದರವನ್ನು ಪ್ರಯಾಣಿಕರಿಂದ ಪಡೆಯಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.

ಮೇ 9ರಿಂದ ರೈಲು ಸಂಚಾರ ಆರಂಭವಾಗಿದೆ. ವಲಸೆ ಕಾರ್ಮಿಕರನ್ನು ನಿಗದಿತ ಸ್ಥಳಗಳಿಂದ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಜಿಲ್ಲಾಡಳಿತ ವತಿಯಿಂದ ಕೆಎಸ್‍ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬಸ್‌ಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ, ಕಂದಾಯ ಇಲಾಖೆಯ ಒಬ್ಬ ಸಿಬ್ಬಂದಿ ಹಾಗೂ ಇಬ್ಬರು ಪೊಲೀಸರನ್ನು ಸಹಾಯಕರನ್ನಾಗಿ ನಿಯೋಜಿಸಲಾಗಿತ್ತು.

ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಸುರತ್ಕಲ್, ಬೈಕಂಪಾಡಿ, ಪಣಂಬೂರು, ಜೋಕಟ್ಟೆ, ಪಂಜಿಮೊಗರು, ಉಳ್ಳಾಲ, ಕಂಕನಾಡಿ, ಬಂದರ್ ಮತ್ತಿತರ ಸ್ಥಳಗಳಿಗೆ ತೆರಳಿ, ಬಸ್‌ನಲ್ಲಿ ಕರೆದುಕೊಂಡು, ನೇರವಾಗಿ ರೈಲು ನಿಲ್ದಾಣಕ್ಕೆ ಬರಲು ವ್ಯವಸ್ಥೆ ಮಾಡಲಾಗಿತ್ತು.

ಬಸ್‌ ಹತ್ತುವ ಮೊದಲೇ ಪ್ರಯಾಣಿಕರ ವಿಳಾಸ, ತಲುಪುವ ಸ್ಥಳ, ಆಧಾರ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರಗಳನ್ನು ಆಯಾ ಅಧಿಕಾರಿಗಳು, ಪರಿಶೀಲಿಸಿ ದಾಖಲಿಸಿಕೊಂಡಿದ್ದಾರೆ. ಆಯಾ ಅಧಿಕಾರಿಗಳು ಈ ಚಾರ್ಟ್‌ ಅನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ ನಂತರ ಅದನ್ನು ಕ್ರೋಡೀಕರಿಸಿ, ಆಯಾ ರೈಲಿನಲ್ಲಿ ಹೋಗುವ ಸಂಪೂರ್ಣ ಪ್ರಯಾಣಿಕರ ವಿವರಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಕಳುಹಿಸಲಾಗುತ್ತದೆ. ಈ ಚಾರ್ಟ್‌ ಬಂದ ನಂತರವೇ ಅಲ್ಲಿನ ರಾಜ್ಯ ಸರ್ಕಾರಗಳು ಇಲ್ಲಿಂದ ಹೋದ ಪ್ರಯಾಣಿಕರನ್ನು ಸ್ವೀಕರಿಸಲು ವ್ಯವಸ್ಥೆ ಮಾಡುತ್ತವೆ.

ಪ್ರಯಾಣಿಕರು ರೈಲಿನಲ್ಲಿ ತಮ್ಮ ನಿಗದಿತ ಸ್ಥಳ ತಲುಪಲು 2-3 ದಿನ ತಗಲುವುದರಿಂದ ಪ್ರಯಾಣ ಹಾದಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ನಾಗರಾಜ್, ವಿಲ್ಮಾ, ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮುಡಾ ಆಯುಕ್ತ ದಿನೇಶ್ ಕುಮಾರ್ ಈ ಎಲ್ಲ ಪ್ರಕ್ರಿಯೆಗಳ ನೋಡಲ್ ಅಧಿಕಾರಿಯಾಗಿದ್ದರು.

ವಲಸೆ ಕಾರ್ಮಿಕರ ಪ್ರತಿಭಟನೆ
ತಮ್ಮ ಊರುಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಲಸೆ ಕಾರ್ಮಿಕರು ಮಂಗಳವಾರ ನಗರದ ಮಿಲಾಗ್ರಿಸ್ ಕಾಲೇಜಿನ ಬಳಿ ಧರಣಿ ನಡೆಸಿದರು.

ಸುಮಾರು 400 ವಲಸೆ ಕಾರ್ಮಿಕರು ಧರಣಿ ನಡೆಸಿ, ತಮ್ಮ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಸ್ಥಳಕ್ಕೆ ಬಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ‘ಕಾರ್ಮಿಕರನ್ನು ಊರಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಸಂಯಮದಿಂದ ಇರುವಂತೆ’ ಮನವಿ ಮಾಡಿದರು. 

ಇನ್ನೊಂದೆಡೆ ಇಲ್ಲಿನ ರೊಸಾರಿಯೋ ಹಾಲ್‌ನಲ್ಲಿ ಉಳಿದಿರುವ ಕಾರ್ಮಿಕರಿಗೆ ಸರಿಯಾದ ಆಹಾರ ಒದಗಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಅನ್ನ ಸರಿಯಾಗಿ ಬೆಂದಿರುವುದಿಲ್ಲ. ಉಪ್ಪು, ಖಾರದ ಪುಡಿ ನೀಡಲಾಗುತ್ತದೆ. ಇದರಿಂದ ಹೇಗೆ ಊಟ ಮಾಡುವುದು ಎಂದು ಕಾರ್ಮಿಕರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು