ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 300 ಟನ್‌ ಕಸದಿಂದ 5 ಮೆ.ವಾಟ್ ವಿದ್ಯುತ್‌

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ: ಕ್ರಿಯಾ ಯೋಜನೆ ಸಿದ್ಧ
Last Updated 28 ಆಗಸ್ಟ್ 2020, 7:08 IST
ಅಕ್ಷರ ಗಾತ್ರ

ಮಂಗಳೂರು: ಕಳೆದ ವರ್ಷ ಪಚ್ಚನಾಡಿಯಲ್ಲಿ ಸಂಭವಿಸಿದ ತ್ಯಾಜ್ಯ ದುರಂತ, ಇದೀಗ ಹೊಸ ಅವಕಾಶವೊಂದನ್ನು ತೆರೆದಿಟ್ಟಿದೆ. ವಿಲೇವಾರಿಯೇ ಸವಾಲಾಗಿರುವ ಒಣಕಸದಿಂದ ವಿದ್ಯುತ್ ಉತ್ಪಾದನೆಯ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಿತ್ಯ ಉತ್ಪಾದನೆಯಾಗುವ ಒಣಕಸವನ್ನು ಬಳಸಿ ಸುಮಾರು 5 ಮೆಗಾ ವಾಟ್‌ಗಳಷ್ಟು ವಿದ್ಯುತ್ ತಯಾರಿಸಲು ಪೂರಕವಾದ ಯೋಜನೆ ತಯಾರಿಸಲಾಗಿದೆ.

ಪಚ್ಚನಾಡಿ ತ್ಯಾಜ್ಯ ದುರಂತದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಯೋಜನೆಗೆ ಸಂಬಂಧಿಸಿದಂತೆ ಅವಲೋಕನ ನಡೆಸಿದ್ದರು. ಕೆಪಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಅವರಿಗೂ ಪತ್ರ ಬರೆದಿದ್ದರು.

ಕೆಪಿಸಿಎಲ್ ಅಧಿಕಾರಿಗಳು ಈ ಸಂಬಂಧ ನಗರಕ್ಕೆ ಬಂದು ಪರಿಶೀಲನೆ ನಡೆಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಮಂಗಳೂರು ಮತ್ತು ಉಡುಪಿ ಎರಡೂ ನಗರಗಳ ಒಣ ಕಸ ಬಳಸಿದಲ್ಲಿ ಈ ಯೋಜನೆ ಸಾಧ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ವಿಸ್ತಾರವಾಗಿ ಈ ಯೋಜನೆ ರೂಪುಗೊಳ್ಳುವ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ವಿದ್ಯುತ್ ನಿಗಮ (ಕೆಪಿಸಿಎಲ್) ಉಭಯ ಜಿಲ್ಲೆಗಳಲ್ಲಿ ನಿತ್ಯ ಉತ್ಪತ್ತಿಯಾಗುವ 300 ಟನ್‌ಗಳಷ್ಟು ಒಣ ಕಸವನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲು ಸಿದ್ಧತೆ ನಡೆಸಿದೆ. ಕಸದಲ್ಲಿ ಬೇರ್ಪಡಿಸಲು ಸಾಧ್ಯವಿರುವ ಪ್ಲಾಸ್ಟಿಕ್‌ಗೆ ಸಂಬಂಧಿಸಿದಂತಹ ಎಲ್ಲ ರೀತಿಯ ವಸ್ತುಗಳು, ಮರದ ಕಸ, ಬಟ್ಟೆ, ಟಯರ್ ಮೊದಲಾದವುಗಳ‌ನ್ನು ಬಳಕೆ ಮಾಡಿ ವಿದ್ಯುತ್ ತಯಾರಿಸಬಹುದಾಗಿದೆ.

ಜಿಲ್ಲೆಗಳಲ್ಲಿ ನಿತ್ಯ ಸುಮಾರು 500 ಟನ್‌ಗಳಷ್ಟು ಒಣ ಕಸ ಲಭ್ಯವಾಗುತ್ತಿದೆ. ಈ ಕಸದಿಂದ
ಸುಮಾರು 11 ಮೆಗಾ ವಾಟ್‌ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿಯನ್ನು ಈ ಯೋಜನೆಯ ಮೂಲಕ ಹೊಂದಲಾಗಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.

5 ವಾಟ್ ವಿದ್ಯುತ್ ಉತ್ಪಾದನೆ‌ಗೆ 300 ಟನ್‌ಗಳಷ್ಟು ಒಣ ಕಸದ ಅವಶ್ಯಕತೆ ಇದೆ. ಮಂಗಳೂರು ಮತ್ತು ಉಡುಪಿ ಎರಡೂ ಪಾಲಿಕೆಗಳಿಂದ ಕ್ರಮವಾಗಿ ಕಸ ಸಂಗ್ರಹಿಸಿ ವಿದ್ಯುತ್ ಉತ್ಪಾದನೆ‌ಗೆ ಬಳಸಲಾಗುತ್ತದೆ.

ಈ ಹಿಂದೆ ಮಂಗಳೂರಿನ ತ್ಯಾಜ್ಯ ಬಳಸಿ ಇಂಧನ ಉತ್ಪಾದಿಸುವ ಘಟಕ ಆರಂಭ ಮಾಡಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ₹100 ಕೋಟಿ ವೆಚ್ಚದಲ್ಲಿ ಪಚ್ಚನಾಡಿಯಲ್ಲಿ ಯೋಜನೆ ರೂಪಿಸುವ ಸಂಬಂಧ ರೂಪುರೇಷೆಯೂ ಸಿದ್ಧಗೊಂಡಿತ್ತು. ಆದರೆ ಈ ಯೋಜನೆ ಕಡತದಲ್ಲೇ ಉಳಿದಿತ್ತು. ಇದೀಗ ಇದೇ ಯೋಜನೆ ಕಾರ್ಯರೂಪಕ್ಕೆ ಬರಲು ಸಿದ್ಧವಾಗಿದೆ ಎಂದು ಕೆಪಿಸಿಎಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ವೇಸ್ಟ್‌ ಟು ಎನರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದಿಂದ ಪ್ರಸ್ತಾವನೆ ಬಂದಿದ್ದು, ಉಡುಪಿ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT