ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಿಂದ ಬಂದ 6 ಮಂದಿಗೆ ಸೋಂಕು

ಮಸ್ಕತ್‌ನಿಂದ ಬಂದ 40 ಮಂದಿಗೆ ಜಿಲ್ಲೆಯಲ್ಲಿ ಕ್ವಾರಂಟೈನ್‌ ವ್ಯವಸ್ಥೆ
Last Updated 21 ಮೇ 2020, 16:25 IST
ಅಕ್ಷರ ಗಾತ್ರ

ಮಂಗಳೂರು: ದುಬೈನಿಂದ ಇದೇ 18 ರಂದು ನಗರಕ್ಕೆ ಬಂದಿದ್ದ ಆರು ಮಂದಿಗೆ ಕೋವಿಡ್‌–19 ಸೋಂಕು ತಗಲಿರುವುದು ದೃಢವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 61ಕ್ಕೆ ಏರಿದೆ. ಈ ಮಧ್ಯೆ ಮತ್ತೊಬ್ಬ ವ್ಯಕ್ತಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 21 ಮಂದಿ ಗುಣಮುಖರಾದಂತಾಗಿದೆ.

ಸದ್ಯಕ್ಕೆ ಕ್ವಾರಂಟೈನ್‌ನಲ್ಲಿರುವ 60 ವರ್ಷದ ವೃದ್ಧ, 44 ವರ್ಷದ ಇಬ್ಬರು ಪುರುಷರು, 42 ವರ್ಷದ ಪುರುಷ, 29 ಹಾಗೂ 35 ವರ್ಷದ ಪುರುಷರಲ್ಲಿ ಸೋಂಕು ಖಚಿತವಾಗಿದೆ. ಈ ಪೈಕಿ 29 ವರ್ಷದ ಯುವಕ ಕಲಬುರ್ಗಿ ಜಿಲ್ಲೆಯವರಾಗಿದ್ದರೆ, ಇನ್ನುಳಿದ ಐದು ಜನರು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಇವರನ್ನು ಕ್ವಾರಂಟೈನ್‌ ಸೆಂಟರ್‌ನಿಂದ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ದುಬೈನಿಂದ ಇದೇ 18 ರಂದು ನಗರಕ್ಕೆ ಬಂದ 110 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದು, ಎಲ್ಲ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ 6 ಜನರಿಗೆ ಸೋಂಕು ತಗಲಿರುವುದು ಸ್ಪಷ್ಟವಾಗಿದೆ.

ಮಸ್ಕತ್‌ ವಿಮಾನದ 40 ಮಂದಿಗೆ ಕ್ವಾರಂಟೈನ್‌:ಇದೇ 20 ರಂದು ಮಸ್ಕತ್‌ನಿಂದ ಬೆಂಗಳೂರು ಮೂಲಕ ನಗರಕ್ಕೆ ಬಂದ 64 ಪ್ರಯಾಣಿಕರ ಪೈಕಿ, 40 ಮಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. 21 ಮಂದಿ ಉಡುಪಿ ಹಾಗೂ ಮೂವರು ಉತ್ತರ ಕನ್ನಡ ಜಿಲ್ಲೆಗೆ ತೆರಳಿದ್ದಾರೆ.

ಜಿಲ್ಲೆಯಲ್ಲಿರುವ 40 ಜನರ ಪೈಕಿ, 15 ಮಂದಿ ಉಚಿತ ಕ್ವಾರಂಟೈನ್‌ಗೆ ಮನವಿ ಮಾಡಿದ್ದು, ಜಿಲ್ಲಾಡಳಿತ ನಿಗದಿಪಡಿಸಿರುವ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಉಳಿದ 25 ಜನರು ತಮ್ಮ ಇಚ್ಛೆಗೆ ಅನುಗುಣವಾಗಿ ಜಿಲ್ಲಾಡಳಿತ ಗುರುತಿಸಿರುವ ಹೋಟೆಲ್‌ಗಳಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧೀಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮತ್ತೊಬ್ಬ ವ್ಯಕ್ತಿ ಗುಣಮುಖಕೋವಿಡ್–19 ಸೋಂಕು ತಗಲಿದ್ದ ಇಲ್ಲಿನ ಶಕ್ತಿನಗರ ಕಕ್ಕೆಬೆಟ್ಟು ನಿವಾಸಿ 45 ವರ್ಷದ ವ್ಯಕ್ತಿ ಗುಣಮುಖವಾಗಿದ್ದು, ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿದ್ದ 80 ವರ್ಷದ ತಾಯಿ ಹಾಗೂ ಆಕೆಯ ಮಗನಿಗೆ ಏಪ್ರಿಲ್‌ 23 ರಂದು ಸೋಂಕು ದೃಢಪಟ್ಟಿತ್ತು. 80 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರ ಮಗ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ಮೂವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT