ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಜ್ಞಾನ ಕೃತಕ ಬುದ್ಧಿಮತ್ತೆಯಲ್ಲಿ ದಕ್ಕದು: ಪ್ರೊ.ಬಿ.ಎ.ವಿವೇಕ ರೈ

‘ಅಭಿಯಾಭಿನಂದನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ.ವಿವೇಕ ರೈ
Published 5 ಫೆಬ್ರುವರಿ 2024, 6:49 IST
Last Updated 5 ಫೆಬ್ರುವರಿ 2024, 6:49 IST
ಅಕ್ಷರ ಗಾತ್ರ

ಮಂಗಳೂರು: ‘ಜ್ಞಾನ ಮತ್ತು ತಂತ್ರಜ್ಞಾನಗಳೆರಡೂ ಬೇರೆ ಬೇರೆ. ಈಗ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ ಮಾಯಾ ಲೋಕ ಎಲ್ಲರನ್ನು ಸೆಳೆಯುತ್ತದೆ. ಆದರೆ ಅದರ ಮೇಲೆ ಹೆಚ್ಚು ಅವಲಂಬಿತ ಆಗುವುದು ಒಳ್ಳೆಯದಲ್ಲ. ನಮ್ಮ ಇಲ್ಲಿನ ದಲಿತರ ದೇಸಿ ಜ್ಞಾನವನ್ನು, ತುಳು ಆರಾಧನಾ ಕ್ರಮಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ದಕ್ಕಿಸಿಕೊಳ್ಳಲಾಗದು. ದಲಿತರ ಜೊತೆ ಸಂವಾದ ಮಾಡಿ, ಅವರ ಜೊತೆ ಬದುಕಿಯೇ ಅವುಗಳನ್ನು ಪಡೆಯಬೇಕು’ ಎಂದು ಪ್ರೊ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಬಹು ಓದು ಬಳಗ, ಆಕೃತಿ ಆಶಯ ಪಬ್ಲಿಕೇಷನ್ಸ್ ವತಿಯಿಂದ ಇಲ್ಲಿ ಏರ್ಪಡಿಸಿದ್ದ ಅಭಯ್ ಕುಮಾರ್ ಕೌಕ್ರಾಡಿ ಅವರ ಅಭಿನಂದನಾ ಗ್ರಂಥ 'ಅಭಯಾಭಿನಂದನೆ' ಲೋಕಾರ್ಪಣೆಗೊಳಿಸಿ ಅವರು ಭಾನುವಾರ ಮಾತನಾಡಿದರು.

'ನಾವು ತಂತ್ರಜ್ಞಾನ ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ತಂತ್ರಜ್ಞಾನ ಬಳಸಿದ ಮಾತ್ರಕ್ಕೆ ಯಾರೂ ಜ್ಞಾನಿಗಳಾಗುವುದಿಲ್ಲ. ತಂತ್ರಜ್ಞಾನವು ಪ್ರಸರಣಾ ಮಾಧ್ಯಮ ಮಾತ್ರ. ಜ್ಞಾನವನ್ನು ನಮ್ಮದನ್ನಾಗಿಸಿಕೊಂಡಷ್ಟೂ ನಾವು ಶಕ್ತಿಯುತರಾಗುತ್ತೇವೆ. ಜ್ಞಾನವೇ ಇಂದಿನ ಜಗತ್ತನ್ನು ಆಳುತ್ತಿದೆ’ ಎಂದರು.

‘ಬಹುವಿಧದ ಜ್ಞಾನವನ್ನು ಯಾರೂ ಬೇಕಾದರೂ ದಕ್ಕಿಸಿಕೊಳ್ಳಬಹುದು ಎಂಬುದಕ್ಕೆ‌ ಅಭಯ ಅವರು ಮಾದರಿ. ಅಕ್ಷರ ಜ್ಞಾನವೇ ಇಲ್ಲದ‌ ದಂಪತಿಯ ಮಗನಾಗಿದ್ದ ಅವರು, ಹೊಲದಲ್ಲಿ ಉಳುಮೆ ಮಾಡುತ್ತಾ, ನೇಜಿ ನೆಡುತ್ತಾ, ಮರದ ದಿಮ್ಮಿಗಳಿಗೆ ಹೆಗಲು ಕೊಡುತ್ತಾ ದೈಹಿಕ ಶ್ರಮದೊಂದಿಗೆ ಬೆಳೆದವರು. ಕನ್ನಡ ಸಾಹಿತ್ಯದಲ್ಲಿ ಪಾಂಡಿತ್ಯ ಸಾಧಿಸಿದವರು. ದುಡಿ ಮತ್ತು ದುಡಿಮೆ ಅವರ ಶಕ್ತಿ. ‌ಹಿಂಜರಿಕೆ ಇಲ್ಲದೇ‌ ಬದುಕಿದ್ದಾರೆ. ಅನೇಕ ವಿದ್ಯಾರ್ಥಿಗಳನ್ನು ಸಾಕಿ ಬೆಳೆಸಿದ್ದಾರೆ. ದೇಹಶ್ರಮ‌–ಬೌದ್ಧಿಕ ಜ್ಞಾನ, ಹಟ ಸ್ವಭಾವ, ಆತ್ಮವಿಶ್ವಾಸ, ಧೈರ್ಯ ಎಲ್ಲವೂ ಅವರನ್ನು ಈ ಎತ್ತರಕ್ಕೆ ಬೆಳೆಸಿದೆ. ಅವರನ್ನು ನೋಡಿದಾಗ ಬಿ.ಆರ್‌.ಅಂಬೇಡ್ಕರ್‌ ನೆನಪಾಗುತ್ತಾರೆ’ ಎಂದರು.  

ಅಭಯ ಕುಮಾರ್, 'ಗದ್ದೆ ಉಳುವಾಗ ತಲೆಯ ಮೇಲೆ ಹಾರುತ್ತಿದ್ದ ವಿಮಾನ ನೋಡುತ್ತಿದ್ದೆ. ಅಂತಹ ವಿಮಾನದಲ್ಲಿ ಲಂಡನ್‌ಗೆ ಓದಲು ಹೋಗುವ ಕನಸು ನಾನು ಕಂಡವನಲ್ಲ. ನನ್ನ ಶಿಷ್ಯವರ್ಗದಲ್ಲಿ ತಳ ಸಮುದಾಯ, ಹಿಂದುಳಿದ ವರ್ಗದಿಂದ ಬಂದವರೇ ಜಾಸ್ತಿ. ಅಭಿನಂದನಾ ಕೃತಿಯನ್ನು ಪ್ರಕಟಿಸಿದ ಅವರಿಗೆ ಋಣಿಯಾಗಿದ್ದೇನೆ’ ಎಂದರು.

ಕೃತಿಯ ಬಗ್ಗೆ ಮಾತನಾಡಿದ ಉಪನ್ಯಾಸಕಿ ಸುಧಾರಾಣಿ, ‘ಹಳ್ಳಿಯ ತಳ ಸಮುದಾಯದ ಯುವಕ ಬದುಕಿನ ಎಲ್ಲ‌ ಬವಣೆಗಳನ್ನು ಮೀರಿ ಸಮಾಜಮುಖಿಯಾಗಿ  ಎತ್ತರಕ್ಕೆ ಬೆಳೆದ‌ ಪರಿ ಅಚ್ಚರಿ ಮೂಡಿಸುತ್ತದೆ. ಲಂಡನ್‌ಗೆ ಪೋಸ್ಟ್‌ ಡಾಕ್ಟೋರಲ್‌ ಅಧ್ಯಯನಕ್ಕೆ ತೆರಳಿದಾಗಲೂ ತಮ್ಮ ಸಮುದಾಯವನ್ನು ಪ್ರತಿನಿಧಿಸುವ ದುಡಿಯನ್ನು ಜೊತೆಯಲ್ಲೇ ಒಯ್ದಿದ್ದರು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಶಾಲತಾ ಚೇವಾರ್, ‘ಕೌಕ್ರಾಡಿಯಂತಹ ಕುಗ್ರಾಮದಲ್ಲಿ ದನಿಯ ಚಾಕರಿ ಮಾಡುತ್ತಿದ್ದ ಕುಟುಂಬದಲ್ಲಿ ಹುಟ್ಟಿದ ಹುಡುಗ ಊರು ಕೇರಿಯ ಚೌಕಟ್ಟಿನಾಚೆಗೆ ಅಕ್ಷರ ಲೋಕದ‌ರಾಯಭಾರಿಯಾಗಿ ಬೆಳೆದ‌ ಪರಿ ಮಾದರಿ‘ ಎಂದರು.

ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಅಭಯ ಅವರ ಪತ್ನಿ ಲತಾ ಭಾಗವಹಿಸಿದ್ದರು. ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಸಭಿಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿದರು.

ಆಕೃತಿ–ಆಶಯ ಪ್ರಕಾಶನದ ಕಲ್ಲೂರು ನಾಗೇಶ್‌ ಸ್ವಾಗತಿಸಿದರು. ಬೆಸೆಂಟ್‌ ಕಾಲೇಜಿನ ಪ್ರಾಧ್ಯಾಪಕ ಗಿರಿಯಪ್ಪ ವಂದಿಸಿದರು. ಉಪನ್ಯಾಸಕ ಸೋಮಶೇಖರ ಎಚ್‌ ಕಾರ್ಯಕ್ರಮ ನಿರೂಪಿಸಿದರು.

ಕೃತಿ: ಅಭಿಯಾಭಿನಂದನೆ

ಸಂಪಾದನೆ: ಆಶಾಲತಾ ಚೇವಾರ್‌ ಗಿರಿಯಪ್ಪ

ಪ್ರಕಟಣೆ: ಆಕೃತಿ– ಆಶಯ ಪ್ರಕಾಶನ

ಪುಟಗಳು: 269

ದರ: ‌₹450

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT