ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಸಿತನ ಛಿದ್ರಗೊಳಿಸಲು ದೊಡ್ಡಮಟ್ಟದ ಸಂಚು: ABVP ಕಾರ್ಯದರ್ಶಿ ಬಾಲಕೃಷ್ಣ ಆರೋಪ

ಎಬಿವಿಪಿಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಆರೋಪ
Published : 21 ಸೆಪ್ಟೆಂಬರ್ 2024, 13:25 IST
Last Updated : 21 ಸೆಪ್ಟೆಂಬರ್ 2024, 13:25 IST
ಫಾಲೋ ಮಾಡಿ
Comments

ಮಂಗಳೂರು: ‘ವೈಯಕ್ತಿಕ ಸ್ವಾತಂತ್ರ್ಯ, ಭಾಷೆ, ದಲಿತ, ಬುಡಕಟ್ಟು ಸಮುದಾಯಗಳ ಹೆಸರಿನಲ್ಲಿ ಸಣ್ಣ ಪುಟ್ಟ ಚರ್ಚೆಗಳನ್ನು ಏರ್ಪಡಿಸಿ, ದೇಶ, ಸಂಸ್ಕೃತಿ, ಜೀವನ‌ ಪದ್ದತಿಗಳ ಕುರಿತು ದೊಡ್ಡ ಮಟ್ಟದ ನಕಾರಾತ್ಮಕ ಪ್ರಚಾರ ನಡೆಸಿ ದೇಸಿತನ ಛಿದ್ರಗೊಳಿಸಲು ಸಂಚು ರೂಪಿಸಲಾಗಿದೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಆರೋಪಿಸಿದರು.

ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಭೆಯನ್ನು ಇಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕಮ್ಯುನಿಸ್ಟ್‌ ಸಿದ್ಧಂತ ಪ್ರತಿಪಾದಿಸುವವರು ನಡೆಸುತ್ತಿರುವ ಇಂತಹ ಪ್ರಯತ್ನಗಳನ್ನು ಮಟ್ಟಹಾಕಲು ದೇಸಿ ಸತ್ಸಂಪ್ರದಾಯಗಳ ಕುರಿತು ಸಕಾರಾತ್ಮಕ ದಿಸೆಯಲ್ಲಿ ಪ್ರಚಾರ ತಂತ್ರ ರೂಪಿಸಬೇಕು’ ಎಂದರು.

‘ಪುರಾಣಗಳಲ್ಲಿನ ರಾಕ್ಷಸರನ್ನೇ ದೇವರಂತೆ ಬಿಂಬಿಸುವ ಚರ್ಚೆಗಳು ಈಚೆಗೆ ಹುಟ್ಟಿಕೊಂಡಿವೆ. ಇದರಿಂದಾಗಿ ಛತ್ತೀಸಗಡದಲ್ಲಿ ಆದಿವಾಸಿಗಳು ಮಹಿಷಾಸುರನನ್ನೇ ಪೂಜಿಸಲು ಶುರುಮಾಡಿದರು. ಹನುಮಂತನನ್ನು ಬುಡಕಟ್ಟು ನಾಯಕನಂತೆ ಚಿತ್ರಿಸಲಾಗುತ್ತಿದೆ. ಕ್ಷತ್ರಿಯ ಕುಲದ ರಾಮನನ್ನು ಹನುಮಂತ ಹೆಗಲಿನಲ್ಲಿ ಹೊತ್ತೊಯ್ದಂತೆ ತೋರಿಸುವುದು ಬುಡಕಟ್ಟು ಜನರನ್ನು ಕೀಳಾಗಿ ಬಿಂಬಿಸಿದಂತೆ ಎಂಬ ವಾದವನ್ನು ಹುಟ್ಟುಹಾಕಲಾಗಿದೆ. ಹಾರ್ವರ್ಡ್‌ನಂತಹ ವಿಶ್ವವಿದ್ಯಾಲಯಗಳಲ್ಲಿ ರೂಪುಗೊಳ್ಳುವ ಇಂತಹ ಪ್ರಚಾರ ತಂತ್ರಗಳು ತಾತ್ಕಾಲಿಕ ಖುಷಿ ನೀಡಬಹುದು. ಆದರೆ, ಅವುಗಳ ಹಿಂದಿನ ಸಂಚಿನ ಬಗ್ಗೆ ತಿಳಿಯಬೇಕು’ ಎಂದರು.

‘‌ಮದುವೆಯಾದ ಬಳಿಕ ಗಂಡ ಪಾರ್ಶ್ವವಾಯುವಿಗೆ ಒಳಗಾದರೂ ಪತ್ನಿಯೇ ಆತನ ಸೇವೆ ಮಾಡುವುದು ನಮ್ಮ ಸಂಸ್ಕೃತಿ. ಈಗ ಗಂಡ ಪದದ ಬದಲು ‘ಪಾರ್ಟ್‌ನರ್‌’ ಎಂಬ ಪದ ಬಳಸಲಾಗುತ್ತಿದೆ. ‘ನಾನು ಮಾತ್ರ ಬದುಕುತ್ತಿದ್ದೇನೆ’ ಎಂದು ಬಿಂಬಿಸುವ ಐಒಎಸ್‌ ಸಂಸ್ಕೃತಿ ಚಿಗುರುತ್ತಿದೆ. ತೃತೀಯಲಿಂಗ, ಯುನಿಸೆಕ್ಸ್‌ ಹೆಸರಿನಲ್ಲಿ 70ಕ್ಕೂ ಹೆಚ್ಚು ಲಿಂಗಗಳನ್ನು ಗುರುತಿಸಬೇಕೆಂಬ ಒತ್ತಾಯಿಸಲಾಗುತ್ತಿದೆ. ಹಾಸ್ಟೆಲ್‌, ಶೌಚಾಲಯಗಳಿಗೂ ಯುನಿಸೆಕ್ಸ್‌ ಪರಿಕಲ್ಪನೆ ಹರಿಯಬಿಡಲಾಗಿದೆ.  ‘18 ವರ್ಷ ತುಂಬಿರುವ ನಾವು ನಮಗಿಷ್ಟವಾದ ಬಟ್ಟೆ ಧರಿಸುತ್ತೇವೆ, ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುತ್ತೇವೆ, ನಮ್ಮಿಷ್ಟದ ಆಹಾರ ತಿನ್ನುತ್ತೇವೆ. ಅದನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ’ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಕಮ್ಯುನಿಸ್ಟ್‌ ಪ್ರೇರಿತವಾದ ಈ ಚಿಂತನೆ ದೇಸಿ ಸಂಸ್ಕೃತಿಯನ್ನು ಮುರಿಯುವ ಪ್ರಯತ್ನ’ ಎಂದರು.

‘ಜಗತ್ತಿನ ಪ್ರಬಲ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿರುವ ಭಾರತದ ಅಭಿವೃದ್ಧಿಯನ್ನು ವಿಚಲಿತಗೊಳಿಸುವ ಪ್ರಯತ್ನವನ್ನು ವಿಭಜನಾತ್ಮಕ ಶಕ್ತಿಗಳು ಮಾಡುತ್ತಿವೆ’ ಎಂದು ಆರೋಪಿಸಿದರು. 

‘ಹಿಂದೆ ಮೊಗಲದ ಕಾಲದಲ್ಲಿ ಖಡ್ಗದಿಂದ ಹೆದರಿಸಿ ದಬ್ಬಾಳಿಕೆ ಮಾಡಲಾಗುತ್ತಿತ್ತು. ಬ್ರಿಟೀಷರ ಕಾಲದಲ್ಲಿ ತುಪಾಕಿ, ಕೋವಿ ಬಳಸಿ ಆಕ್ರಮಣ ನಡೆಸಲಾಯಿತು. ಆದರೆ ಈಗ, ಕೃತಕ ಬುದ್ಧಿಮತ್ತೆ ಬಳಸಿ ಮನಸುಗಳ ಮೇಲೆಯೇ ಹಿಡಿತ ಸಾಧಿಸಲಾಗುತ್ತಿದೆ. ಬ್ಲೂಟೂತ್‌ನಂತಹ ಸಾಧನ ಬಳಸಿ, ನಮಗರಿವಿಲ್ಲದೆಯೇ ನಮ್ಮ ಬ್ರೈನ್ ಮ್ಯಾಪಿಂಗ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಮ್ಮನ್ನು ಧಾರ್ಮಿಕ ವಿಚಾರಗಳಿಂದ ವಿಮುಖಗೊಳಿಸುವ ಇಸ್ಲಾಮಿಕ್‌ ಹಾಗೂ ಕ್ರೈಸ್ತ ಧರ್ಮ‍ಪ್ರಚಾರಕರ ಆಟಗಳಿಗೆ ನಾವು ದಾಳಗಳಾಗಬಾರದು’ ಎಂದರು.

ಎಬಿವಿಪಿ ರಾಜ್ಯ ಘಟಕದ ಉಪಾಧ್ಯಕ್ಷ ಅಜಯ್‌ ಕುಮಾರ್‌, ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವೇಶ ಕೋರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT