ಭಾನುವಾರ, ಸೆಪ್ಟೆಂಬರ್ 26, 2021
21 °C

ವಾಹನ ತಪಾಸಣೆ ವೇಳೆ ಅಪಘಾತ: ದ್ವಿಚಕ್ರ ಸವಾರ ಸಾವು, ಶೆಡ್ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡಬ (ಉಪ್ಪಿನಂಗಡಿ): ರಾಮಕುಂಜ ಕ್ರಾಸ್ ಬಳಿಯ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಪೊಲೀಸರಿಗೆ ದಾಖಲೆ ತೋರಿಸಿ, ರಸ್ತೆ ದಾಟಿ ತನ್ನ ದ್ವಿಚಕ್ರ ವಾಹನದತ್ತ ತೆರಳುತ್ತಿದ್ದ ವ್ಯಕ್ತಿಗೆ ಟಾಟಾ ಏಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಕೊಯಿಲ ಗ್ರಾಮದ ಆತೂರುಬೈಲು ನಿವಾಸಿ ಪುತ್ತುಮೋನು ಅವರ ಪುತ್ರ ಎ.ಪಿ. ಹ್ಯಾರಿಸ್ (35) ಮೃತರು. ಹ್ಯಾರಿಸ್ ತನ್ನ ಪತ್ನಿ ನಾಸಿರಾರೊಂದಿಗೆ ದ್ವಿಚಕ್ರ ವಾಹನದಲ್ಲಿ ರಾಮಕುಂಜದಿಂದ ಆತೂರು ಕಡೆಗೆ ಸಾಗುತ್ತಿದ್ದರು. ಈ ವೇಳೆ ವಾಹನಗಳ ದಾಖಲೆ ಪರಿಶೀಲನೆಯಲ್ಲಿ ನಿರತರಾಗಿದ್ದ ಕಡಬ ಎಸ್.ಐ. ರುಕ್ಮ ನಾಯ್ಕ್ ಇವರ ವಾಹನ ತಡೆದಿದ್ದಾರೆ.

ಹ್ಯಾರಿಸ್ ದಾಖಲೆಯನ್ನು ಪೊಲೀಸರಿಗೆ ತೋರಿಸಿ ಮತ್ತೆ ದ್ವಿಚಕ್ರ ವಾಹನದ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಂತೆ ಟಾಟಾಏಸ್ ವಾಹನವೊಂದು ಅವರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಹ್ಯಾರಿಸ್‌ ಅವರನ್ನು ಎಸ್.ಐ. ತನ್ನ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

ಮೃತರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದರು ಎನ್ನಲಾಗಿದೆ. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಬ್ಯಾರಿಕೇಡ್, ಶೆಡ್ ಧ್ವಂಸ: ಘಟನೆ ನಡೆದ ಸ್ಥಳದಲ್ಲಿ 100ಕ್ಕೂ ಅಧಿಕ ಮಂದಿ ಜಮಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಚೆಕ್ ಪಾಯಿಂಟ್‌ನಲ್ಲಿ ಪೊಲೀಸರಿಗೆ ತಂಗಲು ದಾನಿಗಳಿಂದ ನಿರ್ಮಿಸಲಾಗಿದ್ದ ಶೆಡ್ ಧ್ವಂಸಗೊಳಿಸಿದ್ದಾರೆ. ರಸ್ತೆಗೆ ಅಡ್ಡವಾಗಿ ಹಾಕಲಾಗಿದ್ದ ಎರಡು ಬ್ಯಾರಿಕೇಡ್ ಪೈಕಿ ಒಂದನ್ನು ರಸ್ತೆ ಬದಿಗೆ ಎಸೆದಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.

ಉಪ್ಪಿನಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ಬಿಗಿಭದ್ರತೆ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು