ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಮೂವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ

Published 19 ಮಾರ್ಚ್ 2024, 19:39 IST
Last Updated 19 ಮಾರ್ಚ್ 2024, 19:39 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಕಮಿಷನರೇಟ್‌ ವ್ಯಾಪ್ತಿಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ‌ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.

ಉಳ್ಳಾಲ ಕೋಟೆಪುರದ ಮಹಮ್ಮದ್ ಕಬೀರ್ ಅಲಿಯಾಸ್ ಚಬ್ಬಿ(31), ಗುರುಪುರ ಮೂಳೂರಿನ ನವಾಜ್ (30) ಮತ್ತು ಶಕ್ತಿನಗರ ನಿವಾಸಿ ಜಯಪ್ರಶಾಂತ್ (30) ಗೂಂಡಾ ಕಾಯ್ದೆಯಡಿ ವಶಕ್ಕೆ ಪಡೆದವರು ಎಂದು ಅವರು ಮಾಹಿತಿ ನೀಡಿದ್ದಾರೆ.

ಕೊಲೆ ಪ್ರಕರಣ, ಕೊಲೆಯತ್ನದ ಮೂರು ಪ್ರಕರಣಗಳು, ಗಲಭೆಗೆ ಸಂಬಂಧಿಸಿದ ಆರು ಪ್ರಕರಣಗಳು, ಹಲ್ಲೆಗೆ ಸಂಬಂಧಿಸಿ ಮೂರು ಪ್ರಕರಣಗಳು, ಮಾನಭಂಗ ಯತ್ನ ಪ್ರಕರಣವೂ ಸೇರಿ ಒಟ್ಟು 14 ಅಪರಾಧ ಪ್ರಕರಣಗಳಲ್ಲಿ ಮಹಮ್ಮದ್ ಕಬೀರ್ ಆರೋಪಿ. ಬಜಪೆ, ಕಾವೂರು, ಮಂಗಳೂರು ಗ್ರಾಮಾಂತರ, ನಗರ ಪೂರ್ವ, ಬರ್ಕೆ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಎಂಟು ಪ್ರಕರಣಗಳಲ್ಲಿ ನವಾಜ್ ಆರೋಪಿ. ಆತನ ವಿರುದ್ಧ ಕೊಲೆ, ಕೊಲೆಯತ್ನ ಹಾಗೂ ಜೀವ ಬೆದರಿಕೆಯ ಮೂರು ಪ್ರತ್ಯೇಕ ಪ್ರಕರಣಗಳು, ಗಾಂಜಾ ಸೇವನೆಗೆ ಸಂಬಂಧಿಸಿದ ಎರಡು ಪ್ರಕರಣಗಳು, ಗಾಂಜಾ ಕಳ್ಳಸಾಗಣೆ ಮತ್ತು ಮಾರಾಟ ಯತ್ನಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಜಯಪ್ರಶಾಂತ್ ಎಂಟು ಪ್ರಕರಣಗಳಲ್ಲಿ ಆರೋಪಿ. ಆತನ ವಿರುದ್ಧ ಕೋಮು ಗಲಭೆ ಸಂಬಂಧ ಮೂರು, ಕೊಲೆಯತ್ನ ಸಂಬಂಧ ಒಂದು, ಮತೀಯ ಗೂಂಡಾಗಿರಿಗೆ ಸಂಬಂಧಿಸಿದ ನಾಲ್ಕು ಪ್ರಕರಣ ಮತ್ತು ಅಕ್ರಮ ಕೂಟ ರಚಿಸಿ ದಾಂಧಲೆ ನಡೆಸಿದ ಒಂದು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಈ ಮೂವರು ಹಲವು ಬಾರಿ ಬಂಧನಕ್ಕೊಳಗಾಗಿದ್ದರು. ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡ ಬಳಿಕವೂ ಅಪರಾಧ ಕೃತ್ಯಗಳಲ್ಲಿ ಪದೇ ಪದೇ ತೊಡಗಿಸಿಕೊಂಡಿದ್ದರು. ಸಮಾಜದ ಶಾಂತಿ ಕದಡುವ ಪ್ರವೃತ್ತಿಯನ್ನು ಹೊಂದಿರುವ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT