ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಯ ಪ್ರಥಮ ‘ಸೇವಾ ಕೇಂದ್ರ’ ಆರಂಭ

ಆಧಾರ್‌ಗೆ ಸಂಬಂಧಿಸಿದ ಎಲ್ಲ ಸೇವೆಗಳು ಒಂದೇ ಸೂರಿನಡಿ ಲಭ್ಯ
Last Updated 10 ಮೇ 2022, 15:05 IST
ಅಕ್ಷರ ಗಾತ್ರ

ಮಂಗಳೂರು: ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನೋಂದಣಿ, ತಿದ್ದುಪಡಿ ಸೇರಿದಂತೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಜಿಲ್ಲೆಯ ಪ್ರಥಮ ‘ಆಧಾರ್‌ ಸೇವಾ ಕೇಂದ್ರ’ವನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ.

ನಗರದ ಹಂಪನಕಟ್ಟೆಯ ಬಲ್ಮಠ ರಸ್ತೆಯ ಕ್ರಿಸ್ಟಲ್‌ ಕಟ್ಟಡದ ಒಂದನೇ ಮಹಡಿಯಲ್ಲಿ ಮಂಗಳವಾರ ಆರಂಭಗೊಂಡ ಸೇವಾ ಕೇಂದ್ರವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಉದ್ಘಾಟಿಸಿ, ಶುಭ ಹಾರೈಸಿದರು.

ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್‌ ಕೇಂದ್ರಕ್ಕೆ ಭೇಟಿ ನೀಡಿ, ‘ರಾಜ್ಯದಲ್ಲೇ 5ನೇ ಸೇವಾ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಿರುವುದು ಸ್ವಾಗತಾರ್ಹ. ಆಧಾರ್‌ಗೆ ಸಂಬಂಧಿಸಿದ ಎಲ್ಲ ಬಗೆಯ ಸೇವೆಗಳನ್ನು ಈ ಕೇಂದ್ರದಲ್ಲಿ ಸಾರ್ವಜನಿಕರು ಪಡೆಯಲು ಅವಕಾಶವಿದೆ. ಇಂತಹ ಜನೋಪಯೋಗಿ ಕೇಂದ್ರಗಳು ನೆಲಮಹಡಿಯಲ್ಲಿ ಇರುತ್ತಿದ್ದರೆ ವೃದ್ಧರಿಗೆ, ಅಂಗವಿಕಲರಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಈಗಾಗಲೇ ಆಧಾರ್‌ ಕಾರ್ಡ್‌ನ ಸೇವೆಗಳು ಲಭ್ಯ ಇದೆ. ಆದರೆ, ಕರಾವಳಿ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಧಾರ್‌ ಸೇವೆಗಾಗಿಯೇ ಈ ಕೇಂದ್ರ ತೆರೆಯಲಾಗಿದೆ’ ಎಂದು ಹೇಳಿದರು.

ಆಧಾರ್‌ ಸೇವಾ ಕೇಂದ್ರದ ಪ್ರಾದೇಶಿಕ ಮ್ಯಾನೇಜರ್‌ ಜಿ. ಗಜೇಂದ್ರ ಮಾತನಾಡಿ, ‘ದೇಶದಲ್ಲಿ ಈಗಾಗಲೇ 83 ಆಧಾರ್‌ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ ವಿಭಾಗವಾರು ಐದು ಕೇಂದ್ರಗಳನ್ನು ಆರಂಭಿಸಲಾಗಿದೆ. ಬೆಂಗಳೂರು, ಮೈಸೂರು, ಧಾರವಾಡ, ದಾವಣಗೆರೆ ಕೇಂದ್ರಗಳಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

‘ಮಂಗಳೂರಿನ ಸೇವಾ ಕೇಂದ್ರದಲ್ಲಿ ಮ್ಯಾನೇಜರ್‌ ಸೇರಿದಂತೆ ಒಟ್ಟು 20 ಮಂದಿ ಉದ್ಯೋಗಿಗಳು ಇದ್ದಾರೆ. ವಾರದ ಏಳೂ ದಿನಗಳು ಬೆಳಿಗ್ಗೆ 9.30ರಿಂದ ಸಂಜೆ 5.30ರ ವರೆಗೆ ಸೇವಾ ಕೇಂದ್ರ ತೆರೆದಿರುತ್ತದೆ. ದಿನಕ್ಕೆ ಗರಿಷ್ಠ 500 ಮಂದಿಗೆ ಸೇವೆಯನ್ನು ಒದಗಿಸುವ ವ್ಯವಸ್ಥೆ ಇದೆ. ನೂಕುನುಗ್ಗಲು ಉಂಟಾಗದಂತೆ ನಿರ್ವಹಿಸಲು ಟೋಕನ್‌ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ask1.uidai.gov.in ಭೇಟಿಯನ್ನು ಕಾಯ್ದಿರಿಸಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

‘ಆಧಾರ್‌ ಹೊಸ ನೋಂದಣಿ ಹಾಗೂ 5 ರಿಂದ 15 ವರ್ಷದೊಳಗಿನ ಮಕ್ಕಳ ಬೆರಳಚ್ಚು ನೋಂದಣಿ ಉಚಿತವಾಗಿ ಮಾಡಲಾಗುತ್ತದೆ. ಆಧಾರ್‌ ಡೆಮೋಗ್ರಾಫಿಕ್‌ಗೆ ₹ 50, ಆಧಾರ್‌ ಬಯೋಮೆಟ್ರಿಕ್‌ಗೆ ₹ 100 ದರ ನಿಗದಿ ಮಾಡಲಾಗಿದೆ. ಇನ್ನಿತರ ವಿವಿಧ ಸೇವೆಗಳಿಗೆ ‘ಭಾರತಿಯ ವಿಶಿಷ್ಟ ಗುರುತು ಪ್ರಾಧಿಕಾರ’ ನಿಗದಿಪಡಿಸಿದ ಕನಿಷ್ಠ ದರ ಪಡೆಯಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತದೆ’ ಎಂದು ಕೇಂದ್ರದ ಮ್ಯಾನೇಜರ್‌ ಬಾಲಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT