ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಿಲು ಭೂಮಿಯಲ್ಲಿ ಕೃಷಿ ಮಾಡಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಅಧಿಕಾರಿಗಳೊಂದಿಗೆ ಚರ್ಚೆ
Last Updated 1 ಮೇ 2021, 4:40 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಕೃಷಿ ಯೋಗ್ಯ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಆಹಾರ ಉತ್ಪಾದನೆ ಹೆಚ್ಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲೆಯಲ್ಲಿ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆಶುಕ್ರವಾರ ಇಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 2.09 ಲಕ್ಷ ಕುಟುಂಬಗಳಿವೆ. 2.08 ಲಕ್ಷ ಭೂ ಹಿಡುವಳಿದಾರರು, 1.78 ಲಕ್ಷ ಹೆಕ್ಟೇರ್ ಭೂಮಿಯ ಹಿಡುವಳಿ ಹೊಂದಿದ್ದು, ಕಳೆದ ಸಾಲಿನಲ್ಲಿ 37,817 ಎಕರೆ ಪ್ರದೇಶದಲ್ಲಿ 7,56,350 ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು ಭತ್ತದ ಹಡಿಲು ಭೂಮಿ 2,392 ಹೆಕ್ಟೇರ್ ಪ್ರದೇಶವಿದ್ದು, ಕ್ರಮವಾಗಿ ಮಂಗಳೂರು 2125 ಹೆಕ್ಟೇರ್, ಬಂಟ್ವಾಳ 150 ಹೆಕ್ಟೇರ್, ಬೆಳ್ತಂಗಡಿ 85 ಹೆಕ್ಟೇರ್, ಪುತ್ತೂರು 20 ಹೆಕ್ಟೇರ್, ಸುಳ್ಯ 112 ಹೆಕ್ಟೇರ್ ಇದೆ. ಹಡಿಲು ಭೂಮಿಯನ್ನು ಗ್ರಾಮವಾರು ಗುರುತಿಸುವುದರೊಂದಿಗೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೂ ಮಾಲೀಕರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸಬೇಕು ಎಂದು ಹೇಳಿದರು.

ಹಡಿಲು ಬಿಟ್ಟಿರುವ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವುದರಿಂದ ನೀರು ಇಂಗುವ ಜತೆಗೆ ಅಂತರ್ಜಲ ವೃದ್ಧಿಯಾಗುತ್ತದೆ. ಎರಡು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಭೂಮಿಯನ್ನು ಹಡಿಲು ಬಿಟ್ಟರೆ ಅಂತಹ ಭೂಮಿಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಆಸ್ಪದ ನೀಡದೆ ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎಂದು ತಿಳಿಸಿದರು.

ತುಂಡು ಭೂಮಿಯಲ್ಲಿ ತರಕಾರಿ, ಹೂವು ಸೇರಿದಂತೆ ಮತ್ತಿತರ ಬೆಳೆಗಳನ್ನು ಬೆಳೆಯಲು ಸುಭಿಕ್ಷಾ ಯೋಜನೆಯನ್ನು ತೋಟಗಾರಿಕೆ ಇಲಾಖೆ ಮೂಲಕ ಜಾರಿಗೆ ತರಲಾಗಿದೆ. ಕೃಷಿಯಲ್ಲಿ ರಾಸಾಯನಿಕ ಬಳಸುವ ಬದಲು ಸಾವಯವ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಕಡಿಮೆ ವೆಚ್ಚದಲ್ಲಿ ಬೆಳೆ ಬೆಳೆಯಲು ಸಾಧ್ಯ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಶಾಸಕ ರಾಜೇಶ್ ನಾಯ್ಕ್ ಇದ್ದರು.

ಕೃಷಿ ಚಟುವಟಿಕೆಗಳಿಗೆ ಯೋಗ್ಯವಾದ ಭೂಮಿಯನ್ನು ಹಡಿಲು ಬಿಟ್ಟಿರುವ ಬಗ್ಗೆ ಸರ್ವೆ ನಡೆಸಿ ಒಂದು ವಾರದ ಒಳಗೆ ವರದಿ ನೀಡಬೇಕು.
ಕೋಟ ಶ್ರೀನಿವಾಸ ಪೂಜಾರಿಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT