ಶುಕ್ರವಾರ, ಆಗಸ್ಟ್ 12, 2022
27 °C
ಕ್ಯಾಂಪ್ಕೊದಿಂದ ಖರೀದಿ: ಅಡಿಕೆ ಬೆಳೆಗಾರರಲ್ಲಿ ಉತ್ಸಾಹ

ಚಾಲಿ ಅಡಿಕೆಗೆ ಗರಿಷ್ಠ ₹400 ಬೆಲೆ

ಚಿದಂಬರ‍ಪ್ರಸಾದ Updated:

ಅಕ್ಷರ ಗಾತ್ರ : | |

ಮಂಗಳೂರು: ಚಾಲಿ ಅಡಿಕೆಗೆ ಇದೇ ಮೊದಲ ಬಾರಿಗೆ ಕೆ.ಜಿ.ಗೆ ಗರಿಷ್ಠ ₹400 ಬೆಲೆ ದಾಖಲಾಗಿದೆ. ಕ್ಯಾಂಪ್ಕೊ ಇತಿಹಾಸದಲ್ಲಿಯೇ ಇದು ಗರಿಷ್ಠ ಬೆಲೆ ಎಂದು ಹೇಳಲಾಗುತ್ತಿದೆ.

ಸೋಮವಾರ ಜಿಲ್ಲೆಯಾದ್ಯಂತ ಕ್ಯಾಂಪ್ಕೊ ಶಾಖೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹಳೆಯ ಅಡಿಕೆಗೆ ₹400 ಧಾರಣೆ ನಿಗದಿಯಾಗಿತ್ತು. ಇದೇ ವೇಳೆ ಹೊಸ ಅಡಿಕೆಗೆ ₹360 ನೀಡಲಾಗುತ್ತಿದೆ. ತಿಂಗಳ ಹಿಂದೆ ಕ್ಯಾಂಪ್ಕೊಗಿಂತ ₹5–₹10 ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದ ಖಾಸಗಿ ವರ್ತಕರು ಇದೀಗ ಪೈಪೋಟಿಯಿಂದ ಹಿಂದೆ ಸರಿದಿದ್ದು, ಹಳೆಯ ಅಡಿಕೆಗೆ ಗರಿಷ್ಠ ₹390 ಹಾಗೂ ಹೊಸ ಅಡಿಕೆಗೆ ₹350 ನೀಡುತ್ತಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ಕ್ಯಾಂಪ್ಕೊ ಹಂತ ಹಂತವಾಗಿ ಅಡಿಕೆ ಬೆಲೆ ಏರಿಕೆ ಮಾಡುತ್ತ ಬಂದಿತ್ತು. ಆರಂಭದ ದಿನಗಳಲ್ಲಿ ಕ್ಯಾಂಪ್ಕೊದಿಂದ ಅಡಿಕೆ ಖರೀದಿ ಸ್ಥಗಿತಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಕೆಲ ವರ್ತಕರು ಕಡಿಮೆ ಬೆಲೆಗೆ ಅಡಿಕೆ ಖರೀದಿ ಮಾಡಿದ ಘಟನೆಗಳೂ ನಡೆದಿದ್ದವು.

ಆದರೆ, ಕ್ಯಾಂಪ್ಕೊ ಖರೀದಿ ಆರಂಭಿಸಿದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ ಪ್ರಮಾಣದ ಚೇತರಿಕೆ ದಾಖಲಾಯಿತು. ಆರಂಭದಲ್ಲಿ ₹280 ಇದ್ದ ಅಡಿಕೆ ಧಾರಣೆ, ಏರುಮುಖದತ್ತಲೇ ಸಾಗಿತು. ಒಂದು ಹಂತದಲ್ಲಿ ಕ್ಯಾಂಪ್ಕೊದೊಂದಿಗೆ ಪೈಪೋಟಿಗೆ ಬಿದ್ದ ಖಾಸಗಿ ವರ್ತಕರು, ಬೆಲೆ ಏರಿಸುತ್ತಲೇ ಸಾಗಿದರು. ಕೆಲ ವರ್ತಕರು ಸೀಮಿತ ಲಾಟ್‌ಗಳ ಹಳೆಯ ಅಡಿಕೆಗೆ ₹400–₹410 ರವರೆಗೆ ಬೆಲೆ ನೀಡಿದ್ದರು. ಆದರೆ, ಕ್ಯಾಂಪ್ಕೊದಲ್ಲಿ ಮಾತ್ರ ₹390 ಬೆಲೆ ಇತ್ತು. ನಾಲ್ಕು ವಾರಗಳಿಂದ ₹390ಕ್ಕೆ ಸ್ಥಿರವಾಗಿದ್ದ ಬೆಲೆ, ಕಳೆದ ವಾರ ₹395ಕ್ಕೆ ಏರಿಕೆಯಾಗಿತ್ತು. ಇದೀಗ ಕ್ಯಾಂಪ್ಕೊ ಚಾಲಿ ಅಡಿಕೆಯ ಧಾರಣೆಯನ್ನು ₹ 400ಕ್ಕೆ ಏರಿಸಿದೆ.

ಮಾರುಕಟ್ಟೆಯಲ್ಲಿ ಅಡಿಕೆಯ ಬೇಡಿಕೆ ಕುಸಿದಿಲ್ಲ. ಹೊಸ ಅಡಿಕೆಯ ಬೆಲೆ ₹400 ದಾಟಲಿದೆ. ಅಡಿಕೆ ಬೆಳೆಗಾರರು ಆತಂಕ ಪಡಬೇಕಿಲ್ಲ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ ಹಿಂದೆಯೇ ರೈತರಿಗೆ ಧೈರ್ಯ ತುಂಬಿದ್ದರು. ಇದೀಗ ಖಾಸಗಿ ವರ್ತಕರು ಧಾರಣೆ ಇಳಿಕೆ ಮಾಡಿದ್ದರೂ, ಕ್ಯಾಂಪ್ಕೊ ಗರಿಷ್ಠ ಬೆಲೆ ನೀಡುವ ಮೂಲಕ ರೈತರಿಗೆ ನೀಡಿದ ಮಾತನ್ನು ಉಳಿಸಿಕೊಂಡಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

‘ಎರಡು ವರ್ಷಗಳಿಂದ ವಿಪರೀತ ಕೊಳೆರೋಗ ಬಂದಿದ್ದರಿಂದ ರೈತರಿಗೆ ದೊರೆತ ಅಡಿಕೆ ಫಸಲು ಕಡಿಮೆಯಾಗಿತ್ತು. ಇದೀಗ ಅಡಿಕೆಗೆ ಧಾರಣೆ ಬಂದಿದ್ದರೂ, ಬಹುತೇಕ ರೈತರ ಬಳಿ ಅಡಿಕೆ ಖಾಲಿಯಾಗಿದೆ. ಹಾಗಾಗಿ ಬಹುತೇಕ ಸಣ್ಣ ಮತ್ತು ಮಧ್ಯಮ ರೈತರು ಬೆಲೆಯ ಖುಷಿಯನ್ನು ಅನುಭವಿಸುವ ಸ್ಥಿತಿಯಲ್ಲಿ ಇಲ್ಲ. ಹೊಸ ಅಡಿಕೆ ಧಾರಣೆ ಏರಿದರೆ ಮಾತ್ರ ಸಣ್ಣ ರೈತರಿಗೂ ಗರಿಷ್ಠ ಬೆಲೆಯ ಲಾಭ ಸಿಗಬಹುದು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯದರ್ಶಿ ರವಿಕಿರಣ ಪುಣಚ ತಿಳಿಸಿದ್ದಾರೆ.

ಗಡಿ ಬಂದ್‌: ಧಾರಣೆ ಏರಿಕೆ

ಕೋವಿಡ್ ಲಾಕ್‌ಡೌನ್‌ನಿಂದಾಗಿ ಬೇರೆ ದೇಶಗಳ ಗಡಿ ಬಂದ್‌ ಆಗಿದ್ದು, ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದ ಅಡಿಕೆ ಸಾಗಣೆ ಸ್ಥಗಿತಗೊಂಡಿದೆ. ಹೀಗಾಗಿ ದೇಶದ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಹೆಚ್ಚಾಗಿದೆ.

ಬೇರೆ ದೇಶಗಳಿಂದ ಅಡಿಕೆ ಆಮದು ಇದೀಗ ಸಂಪೂರ್ಣ ಸ್ಥಗಿತವಾಗಿದೆ. ಅಲ್ಲದೇ ಇಂಡೋನೇಷ್ಯಾ, ಮ್ಯಾನ್ಮಾರ್‌, ನೇಪಾಳ, ಬಾಂಗ್ಲಾದೇಶಗಳಿಂದ ಈಶಾನ್ಯ ರಾಜ್ಯಗಳ ಮೂಲಕ ಭಾರತಕ್ಕೆ ಅಡಿಕೆಯನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಇದನ್ನು ತಡೆಗಟ್ಟುವಂತೆ ಕ್ಯಾಂಪ್ಕೊ ನೇತೃತ್ವದ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು