ಮಂಗಳವಾರ, ಮಾರ್ಚ್ 9, 2021
31 °C
ಲಾಕ್‌ಡೌನ್‌ ಸಡಿಲಿಕೆ: ಕ್ಯಾಂಪ್ಕೊದಿಂದ ಬಿಳಿ ಅಡಿಕೆ ಖರೀದಿ ಆರಂಭ

ಮಂಗಳೂರು | ಟೋಕನ್‌, ಮಿತಿ ಇಲ್ಲದೆ ಕ್ಯಾಂಪ್ಕೊದಿಂದ ಅಡಿಕೆ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್ ನಿರ್ಬಂಧಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದ್ದರಿಂದ, ಕ್ಯಾಂಪ್ಕೊ ತನ್ನ ಕೇಂದ್ರಗಳಲ್ಲಿ ಸಹಜ ಖರೀದಿಯನ್ನು ಆರಂಭಿಸಿದೆ.

ಬುಧವಾರ (ಇದೇ 6)ದಿಂದ ಯಾವುದೇ ಮಿತಿ ಇಲ್ಲದೇ ರೈತರ ಉತ್ಪನ್ನಗಳನ್ನು ಖರೀದಿಸುತ್ತಿದೆ. ಇದರ ಜತೆಗೆ ರೈತರಿಗೆ ನೀಡಲಾಗುತ್ತಿದ್ದ ಟೋಕನ್‌ಗಳಿಂದಲೂ ಮುಕ್ತಿ ನೀಡಲಾಗಿದ್ದು, ಎಲ್ಲ ದಿನಗಳಲ್ಲಿ ಕ್ಯಾಂಪ್ಕೊದ ಎಲ್ಲ ಶಾಖೆಗಳಲ್ಲಿ ನಿಯಮಿತವಾಗಿ ಬಿಳಿ ಅಡಿಕೆ ಖರೀದಿ ನಡೆಸಲಾಗುತ್ತಿದೆ.

ಕೆಂಪಡಿಕೆ ಖರೀದಿಯನ್ನು ಎಲ್ಲ ಪ್ರದೇಶಗಳಲ್ಲಿ ಇದೇ 11 ರಿಂದ ಪ್ರಾರಂಭಿಸಲಾಗುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದಲ್ಲಿ ಕಾಳುಮೆಣಸು ಖರೀದಿ ಪ್ರಕ್ರಿಯೆಯನ್ನೂ ಇದೇ 11 ರಿಂದ ಆರಂಭಿಸುತ್ತಿದೆ.

ಲಾಕ್‌ಡೌನ್‌ನಲ್ಲೂ ಖರೀದಿ: ಲಾಕ್‌ಡೌನ್‌ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ 9 ಕಡೆಗಳಲ್ಲಿ ಅಡಿಕೆ ಖರೀದಿ ಕೇಂದ್ರ ವ್ಯವಸ್ಥೆ ಮಾಡಿದ್ದ ಕ್ಯಾಂಪ್ಕೊ, ಬುಧವಾರದಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳವೂ ಸೇರಿದಂತೆ ಒಟ್ಟು 40 ಕೇಂದ್ರಗಳಲ್ಲಿ ಅಡಿಕೆ ಖರೀದಿ ಕೇಂದ್ರ ಆರಂಭಿಸಿದೆ.

ರೈತರ ಸಂಕಷ್ಟ ಪರಿಹಾರಕ್ಕಾಗಿ ತಿಂಗಳಿಗೆ ಒಂದು ಕ್ವಿಂಟಲ್ ಅಡಿಕೆ ಅಥವಾ ₹25 ಸಾವಿರ ಮೌಲ್ಯದ ಅಡಿಕೆ ಖರೀದಿಗೆ ಅಡ್ಯನಡ್ಕ, ಪುತ್ತೂರು, ಆಲಂಕಾರು, ವಿಟ್ಲ, ಸುಳ್ಯ, ನಿಂತಿಕಲ್ಲು, ಕಡಬ, ಉಪ್ಪಿನಂಗಡಿ ಮತ್ತು ಬೆಳ್ತಂಗಡಿಯಲ್ಲಿ ಖರೀದಿ ಕೇಂದ್ರಗಳನ್ನು ಈ ಹಿಂದೆ ಆರಂಭಿಸಲಾಗಿತ್ತು. ನಂತರ ಎರಡು ಕ್ವಿಂಟಲ್ ಅಡಿಕೆ ಅಥವಾ ₹50 ಸಾವಿರ ಮೌಲ್ಯದ ಅಡಿಕೆ ಖರೀದಿ ನಡೆಸಲು ಕ್ಯಾಂಪ್ಕೊ ತೀರ್ಮಾನಿಸಿತ್ತು. ಅಲ್ಲದೇ ಅಡಿಕೆ ಧಾರಣೆಯನ್ನು ₹250 ರಿಂದ ₹255 ಕ್ಕೆ ಹೆಚ್ಚಿಸಲಾಗಿತ್ತು.

ಇದೀಗ ಯಾವುದೇ ಮಿತಿ ಇಲ್ಲದೇ ಅಡಿಕೆ ಖರೀದಿಗೆ ಮುಂದಾಗಿದ್ದು, ಸಂಕಷ್ಟದಲ್ಲಿ ಇರುವ ರೈತರಿಗೆ ಚೈತನ್ಯ ತುಂಬಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಸಾಗಣೆ ಮಾಡಲಾಗದೇ ಬಸವಳಿದಿದ್ದ ಅಡಿಕೆ ಬೆಳೆಗಾರರು, ಇದೀಗ ಕ್ಯಾಂಪ್ಕೊ ಖರೀದಿ ಕೇಂದ್ರಗಳಲ್ಲಿ ಅಡಿಕೆ ಮಾರಾಟ ಮಾಡಲು ಅವಕಾಶ ಸಿಕ್ಕಂತಾಗಿದೆ.

ಖಾಸಗಿ ವರ್ತಕರಿಗೂ ಅವಕಾಶ: ಪುತ್ತೂರು ಎಪಿಎಂಸಿಯಲ್ಲಿ ಖಾಸಗಿ ವರ್ತಕರಿಗೂ ಅಡಿಕೆ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. 30 ಖಾಸಗಿ ವರ್ತಕರು ಅಡಿಕೆ ಖರೀದಿ ಮಾಡುತ್ತಿದ್ದು, ಕ್ಯಾಂಪ್ಕೊ ಧಾರಣೆಗಿಂತಲೂ ಖಾಸಗಿ ವರ್ತಕರು ಕೆ.ಜಿ.ಗೆ ₹10 ರಷ್ಟು ಅಧಿಕ ಬೆಲೆ ನೀಡುತ್ತಿದ್ದಾರೆ.

ಏಪ್ರಿಲ್ 20ರಿಂದ ಖಾಸಗಿ ವರ್ತಕರು ಅಡಿಕೆ ಖರೀದಿ ಆರಂಭಿಸಿದ್ದು, ಪ್ರಾರಂಭದಲ್ಲಿ ಒಬ್ಬ ರೈತನಿಂದ ಒಂದು ಕ್ವಿಂಟಲ್ ಮಾತ್ರ ಖರೀದಿ ಮಾಡಲಾಗುತ್ತಿತ್ತು. ಇದೀಗ 5 ಕ್ವಿಂಟಲ್‌ವರೆಗೆ ಅಡಿಕೆ ಖರೀದಿಗೆ ವರ್ತಕರು ಮುಂದಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು