ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಆನಡ್ಕ ಸರ್ಕಾರಿ ಶಾಲೆಗೆ ಬಣ್ಣದ ಚಿತ್ತಾರ

‘ಸ್ಕೂಲ್ ಬೆಲ್’ ಕಾರ್ಯಕ್ರಮದಡಿ 50 ಕಲಾ ವಿದ್ಯಾರ್ಥಿಗಳ ಕೈಚಳಕ
Last Updated 17 ಮಾರ್ಚ್ 2021, 4:39 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬೆಂಗಳೂರಿನ ‘ಕ್ಯಾಂಪಸ್ ಟು ಕಮ್ಯೂ ನಿಟಿ’ ಸಂಸ್ಥೆ ಹೊಸ ಮೆರುಗನ್ನು ನೀಡಿದೆ. ‘ಸ್ಕೂಲ್ ಬೆಲ್’ ಕಾರ್ಯಕ್ರಮದಡಿ ಶಾಲಾ ಕಟ್ಟಡಕ್ಕೆ ಬಣ್ಣದ ಚಿತ್ತಾರ ಮೂಡಿಸಲಾಗಿದೆ.

‌ಬೆಂಗಳೂರು, ಮೈಸೂರು, ಮಂಗಳೂರು, ಬಂಟ್ಟಾಳ ಹಾಗೂ ಪುತ್ತೂರಿನ 50 ಕಲಾ ವಿದ್ಯಾರ್ಥಿಗಳು, ವೃತ್ತಿ ನಿರತ ಕಲಾವಿದರು ಶಾಲೆಯನ್ನು ಚಿತ್ರದಿಂದ ಅಲಂಕರಿಸಿ ಸೌಂದರ್ಯದ ಮೆರಗು ನೀಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಕಾರದೊಂದಿಗೆ ಶುಕ್ರವಾರದಿಂದ ಭಾನುವಾರ ತನಕ ಈ ಕಾರ್ಯ ಸದ್ದಿಲ್ಲದೆ ನಡೆಯಿತು.

ಊರಿನ ಜನರ ಸಹಕಾರದೊಂದಿಗೆ ನಡೆದ ಶಾಲಾ ಸೌಂದರ್ಯೀಕರಣ ಕಾರ್ಯ ಎಲ್ಲರ ಮನಸೂರೆಗೊಂಡಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಭೇಟಿ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸಿದರು. ವಿವೇಕಾನಂದ ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಂಚಾಲಕ ಶ್ರೀನಾಥ್ ಸಹಕಾರ ನೀಡಿದರು.

ಭಾನುವಾರ ಚಿತ್ರಗಳ ಅನಾವರಣ ಹಾಗೂ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಅವರು ಕಲಾವಿದರನ್ನು ಅಭಿನಂದಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಮುದಾರ್ ಅವರು ಬೆಂಗಳೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸಮುದಾಯ ಸೇವೆಯ ಬಗ್ಗೆ ಪರಿಚಯಿಸಿ ಶಾಲಾ ಸಹಕಾರವನ್ನು ಶ್ಲಾಘಿಸಿದರು.

ಬೆಂಗಳೂರಿನ ‘ಕ್ಯಾಂಪಸ್ ಟು ಕಮ್ಯೂನಿಟಿ’ ಸಂಸ್ಥೆಯ ಪ್ರಾಂತ ಸಂಚಾಲಕ ರಘು ಪೂಜಾರ್ ‘ಸ್ಕೂಲ್ ಬೆಲ್’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ನರಿಮೊಗರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕುಲಾಲ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಮಜಲು ಅವರು ಮಾತನಾಡಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್, ಬೆಂಗಳೂರಿನ ಯುವಕ ಸಂಘದ ಸಂಚಾಲಕ ಮಹೇಶ್ ಬೆಂಗಳೂರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಧರ್ಣಪ್ಪ, ಉಪಾಧ್ಯಕ್ಷೆ ರೂಪಲತಾ, ಬಾಲಕೃಷ್ಣ ಮಜಲು, ನರಿಮೊಗರು ಸಿಆರ್‌ಪಿ ಅನಂತ.ಕೆ, ಯೋಜನೆಯ ಸಂಘಟಕ ಭರತ್ ಇದ್ದರು.

ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಫೆಲ್ಸಿಟಾ ಡಿಕುನ್ಹ ವಂದಿಸಿದರು. ಸಹಶಿಕ್ಷಕಿ ಮಾಲತಿ ನಿರೂಪಿಸಿದರು. ಚಿತ್ರ ಕಲಾವಿದ ಚರಣ್ ಕುಮಾರ್ ಮುಕ್ವೆ, ಜಿ.ಪಿ.ಟಿ. ಶಿಕ್ಷಕಿ ಅಕ್ಷತಾ, ಗೌರವ ಶಿಕ್ಷಕಿ ಸೌಮ್ಯಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT