ಭಾನುವಾರ, ಅಕ್ಟೋಬರ್ 17, 2021
22 °C
ಗಿಡ–ಗಂಟಿ ಬೆಳೆದು ನಿರುಪ‍ಯುಕ್ತವಾಗಿರುವ ಆಶ್ರಯ ಮನೆಗಳು

ಭರವಸೆ ಇಲ್ಲದ ಯೋಜನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಉಳ್ಳಾಲದಲ್ಲಿ ಅನುಷ್ಠಾನಗೊಂಡಿರುವ ಬಹಳಷ್ಟು ಯೋಜನೆಗಳು ವಿಫಲವಾಗಿವೆ. ಹೊಸ ಯೋಜನೆಗಳ ಬಗ್ಗೆ ಜನರು ಭರವಸೆ ಕಳೆದುಕೊಳ್ಳುವಂತಾಗಿದೆ. ಎಡಿಬಿ ಕೈಗೆತ್ತಿಕೊಂಡಿದ್ದ ಕುಡಿಯುವ ನೀರು ಪೂರೈಸುವ ಯೋಜನೆಯು ಕೋಟ್ಯಂತರ ರೂಪಾಯಿಯನ್ನು ಮಣ್ಣಿಗೊಳಗೆ ಸೇರಿಸಿದೆ. ...’ ಹೀಗೆ ಸಮಸ್ಯೆಗಳ ಸುರಳಿ ಬಿಚ್ಚುತ್ತ ಮಾತಿಗಿಳಿದರು ಸಾಮಾಜಿಕ ಮುಖಂಡ ಅಶ್ರಫ್.

‘ರಾಜೀವ ಗಾಂಧಿ ವಸತಿ ನಿಗಮವು ಆಶ್ರಯ ಮನೆ ಯೋಜನೆಯಡಿ 2002ರಲ್ಲಿ ಒಂಬತ್ತುಕೆರೆಯಲ್ಲಿ ಒಂಬತ್ತು ಎಕರೆ ಜಾಗದಲ್ಲಿ ಬಡವರಿಗೆ ನೀಡಲು 390 ಮನೆಗಳನ್ನು ನಿರ್ಮಿಸಿತ್ತು. ಯೋಜನೆಗೆ ₹ 1.2 ಕೋಟಿಗೂ ಅಧಿಕ ಹಣ ವ್ಯಯಿಸಲಾಗಿದೆ. ಆದರೆ, ಒಂದು ದಿನವೂ ಈ ಮನೆಗಳಲ್ಲಿ ಯಾರೂ ವಸತಿ ಮಾಡಿಲ್ಲ. ಈಗ ಅವು ಶಿಥಿಲಾವಸ್ಥೆಗೆ ತಲುಪಿ, ಅಲ್ಲಿ ಗಿಡ–ಗಂಟಿಗಳು ಬೆಳೆದಿವೆ’ ಎಂದು ವಿವರಿಸುತ್ತ ಹೋದರು.

‘ಮನೆ ನಿರ್ಮಾಣದ ವೇಳೆ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ನೀಡಿದ್ದರು. ಆದರೆ, ಒಬ್ಬರಿಗೂ ಮನೆ ದೊರೆತಿಲ್ಲ. ನಗರಸಭೆ ನಿಧಿ ಉಪಯೋಗಕ್ಕಿಲ್ಲದೆ, ನಷ್ಟವಾಗಿದೆ. ಹೀಗಾಗಿ, ಉಳ್ಳಾಲದಲ್ಲಿ ಈಗ ಅನುಷ್ಠಾನಗೊಳ್ಳುತ್ತಿರುವ ಒಳ ಚರಂಡಿ ಯೋಜನೆ ಕೂಡ ಭವಿಷ್ಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಸಮರ್ಪಕವಾಗಿ ಕಾರ್ಯನಿರ್ವಹಿಸಬಹುದೇ ಎಂಬ ಬಗ್ಗೆ ಅನುಮಾನವಾಗುತ್ತಿದೆ. ಅದಕ್ಕಾಗಿ ಈ ಯೋಜನೆಯನ್ನು ಜನವಸತಿ ಪ್ರದೇಶದಿಂದ ಹೊರಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ’ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು. 

ಈ ಆಶ್ರಯ ಕಾಲೊನಿಗೆ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಒಂಬತ್ತು ಕೆರೆಗಳ ನೀರು ಹಾಳಾಗುತ್ತದೆ ಎಂಬ ಕಾರಣಕ್ಕೆ, ಫಲಾನುಭವಿಗಳಿಗೆ ಹಂಚಿಕೆಯಾಗುವ ಮುನ್ನವೇ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. 

‘ಬೆಂಕಿಪೊಟ್ಟಣದಂತಹ ಮನೆಗಳು ಮನುಷ್ಯರ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಮನುಷ್ಯರು ಉಳಿಯಲು ಯೋಗ್ಯವಲ್ಲದಂಥ ಮನೆಗಳನ್ನು ಬಡವರಿಗಾಗಿ ನಿರ್ಮಿಸಲಾಗಿತ್ತು. ನಾನು ಲೋಕಾಯುಕ್ತಕ್ಕೂ ದೂರು ನೀಡಿದ್ದೆ. ನಗರಸಭೆ ಅದೇ ಜಾಗದಲ್ಲಿ ಹೊಸದಾಗಿ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಚನೆಯಲ್ಲಿದೆ. ವಾಸಿಸಲು ಅಯೋಗ್ಯವಾದ ಮನೆ ನಿರ್ಮಾಣ ಯೋಜನೆ ರೂಪಿಸಿದರೆ, ಮತ್ತೆ ಕೋರ್ಟ್ ಮೊರೆ ಹೋಗುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಪ್ರತಿಕ್ರಿಯಿಸಿದರು.

‘ಅಪಾರ್ಟ್‌ಮೆಂಟ್ ಮಾದರಿ ಮನೆ’

ಆಶ್ರಯ ಮನೆ ಕಾಲೊನಿಗಳ ಜಾಗ ನಗರಸಭೆಯ ಸುಪರ್ದಿಯಲ್ಲಿದೆ. 20 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಮನೆಗಳು ಬಳಕೆಗೆ ಬಾರದ ಸ್ಥಿತಿಯಲ್ಲಿವೆ. ಇವುಗಳನ್ನು ತೆರವುಗೊಳಿಸಿ, ಅಪಾರ್ಟ್‌ಮೆಂಟ್ ಮಾದರಿಯಲ್ಲಿ ಮನೆ ನಿರ್ಮಿಸಿ, ಎದುರಿನಲ್ಲಿ ಮಕ್ಕಳಿಗೆ ಆಟದ ಮೈದಾನವನ್ನೂ ನಿರ್ಮಿಸಲಾಗುವುದು. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪೌರಾಯುಕ್ತ ರಾಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.