ಗುರುವಾರ , ಮಾರ್ಚ್ 23, 2023
22 °C
ಮಹಿಳೆ ಮೇಲೆ ಅತ್ಯಾಚಾರ ಯತ್ನ ಆರೋಪ; ವಾಹನ ಅಡ್ಡಗಟ್ಟಿ ಯುವಕರಿಬ್ಬರಿಗೆ ಥಳಿಸಿದ್ದ ಸ್ಥಳೀಯರು

ಅತ್ಯಾಚಾರ ಯತ್ನ ಆರೋಪ: ಯುವಕರಿಬ್ಬರ ಮೇಲೆ ಗುಂಪು ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮನೆಯಲ್ಲಿದ್ದ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಯುವಕರಿಬ್ಬರ ಮೇಲೆ ಜನರ ಗುಂಪು ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ಗುರುವಾರ ಮಧ್ಯಾಹ್ನ ಹಲ್ಲೆ ನಡೆಸಿದ್ದು, ಏಟು ತಿಂದ ಯುವಕರ ಸ್ಥಿತಿ ಗಂಭೀರವಾಗಿದೆ.

ಹಲ್ಲೆಗೊಳಗಾದ ಮಂಗಳೂರು ತಾಲ್ಲೂಕಿನ ಅಡ್ಡೂರು ಗ್ರಾಮದ ರಮೀಜು‌ದ್ದೀನ್ ಹಾಗೂ ಆತನ ಸಂಬಂಧಿ ಮಹಮ್ಮದ್‌ ರಫೀಕ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರು ನೀಡಿದ ದೂರಿನ ಆಧಾರದಲ್ಲಿ ಬೆಳ್ಳಾರೆ ಪೊಲೀಸರು 17 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

‘ಹಲ್ಲೆ ನಡೆಸಿದ ಆರೋಪಿಗಳ ಕುರಿತ ಮಾಹಿತಿ ಹಾಗೂ ಸಾಕ್ಷ್ಯ ಕಲೆ ಹಾಕುತ್ತಿದ್ದೇವೆ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪ: ‘ಬೆಡ್‌ಶೀಟ್‌ ಮಾರಾಟದ ನೆಪದಲ್ಲಿ ಮನೆಗೆ ಬಂದಿದ್ದ ಇಬ್ಬರು ಯುವಕರು ಮನೆಯಲ್ಲಿ ಒಬ್ಬಳೇ ಇದ್ದ ನನ್ನ ಅತ್ಯಾಚಾರಕ್ಕೆ ಯತ್ನಿಸಿದರು’ ಎಂದು ಆರೋಪಿಸಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ಕಡಬ ಠಾಣೆಗೆ ದೂರು ನೀಡಿದ್ದಾರೆ. ರಮೀಜು‌ದ್ದೀನ್ ಹಾಗೂ  ಮಹಮ್ಮದ್‌ ರಫೀಕ್‌ ವಿರುದ್ಧ ಮನೆಗೆ ಅಕ್ರಮ ಪ್ರವೇಶ, ಅತ್ಯಾಚಾರ ಯತ್ನ, ದುರುದ್ದೇಶಪೂರಿತ ಹಲ್ಲೆ ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. 

ಆಗ್ರಹ: ‘ಜವಳಿ ವ್ಯಾಪಾರಕ್ಕೆ ತೆರಳಿದ್ದ ರಮೀಜುದ್ದೀನ್ ಮತ್ತು ಮೊಹಮ್ಮದ್ ರಫೀಕ್ ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ 50ಕ್ಕೂ ಹೆಚ್ಚು ಮಂದಿ ಹಲ್ಲೆ ಮಾಡಿ ಇಬ್ಬರ ಮೇಲೆ ಬೈಕ್ ಹತ್ತಿಸಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಕಟದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು