ಗುರುವಾರ , ಆಗಸ್ಟ್ 18, 2022
25 °C

ರಾಮರಾಜ್ಯಕ್ಕಾಗಿ ಗ್ರಾಮಗಳ ದತ್ತು: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮುಗಿದ ನಂತರ ರಾಮರಾಜ್ಯ ನಿರ್ಮಾಣದ ಕನಸು ಸಾಕಾರಗೊಳಿಸುವ ಪ್ರಯತ್ನ ನಡೆಯಲಿದೆ. ಇದರ ಭಾಗವಾಗಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಚಿಂತನೆ ಇದೆ ಎಂದು ಮಂದಿರ ನಿರ್ಮಾಣ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ಹೈದರಾಬಾದ್–ಸಿಕಂದರಾಬಾದ್‌ ಅವಳಿ ನಗರದಲ್ಲಿ ಇದೇ 13ರಿಂದ ಕೈಗೊಳ್ಳಲಿರುವ ಚಾತುರ್ಮಾಸ್ಯದ ಅಂಗವಾಗಿ ನಗರದ ಕಲ್ಕೂರ ಪ್ರತಿಷ್ಠಾನದಲ್ಲಿ ಸೋಮವಾರ ಏರ್ಪಡಿಸಿದ್ದ ಪಾದಪೂಜೆ, ತುಲಾಭಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ  ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಂದಿರ ನಿರ್ಮಾಣ ಕಾರ್ಯದ ಪ್ರತಿ ಹಂತವೂ ಪೂರ್ವನಿಗದಿಯಂತೆ ಸಾಗುತ್ತಿದ್ದು ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮರಳು ತುಂಬಿರುವುದರಿಂದಾಗಿ ಅಡಿಪಾಯಕ್ಕಾಗಿ 40 ಮೀಟರ್‌ ಆಳದಿಂದ ಕಲ್ಲುಗಳನ್ನು ತುಂಬಲಾಗಿದೆ. 2024ರ ಸಂಕ್ರಾಂತಿಯಂದು ಶ್ರೀರಾಮ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದ್ದು ಅದರೊಂದಿಗೆ ಮೊದಲ ಹಂತದ ಕೆಲಸ ಮುಕ್ತಾಯಗೊಳ್ಳಲಿದೆ. ನಂತರ ಸುತ್ತಲೂ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಅವರು ವಿವರಿಸಿದರು.

ಎಲ್ಲರಲ್ಲೂ ರಾಮನ ಸದ್ಗುಣಗಳನ್ನು ತುಂಬುವುದು, ಮಾತೃಭೂಮಿಯ ಮೇಲೆ ಪ್ರೀತಿ ಮೂಡಿಸುವುದು ರಾಮರಾಜ್ಯದ ಪ್ರಮುಖ ಅಂಶಗಳು. ರಾಮರಾಜ್ಯ ನಿರ್ಮಾಣಕ್ಕೆ ಪಕ್ಷದ ಹಂಗು ಇಲ್ಲ. ಅದು ಪಕ್ಷಾತೀತವಾಗಿ ನಡೆಯುವ ಕಾರ್ಯ. ಉತ್ತಮ ಕಾರ್ಯಗಳನ್ನು ಮಾಡುವವರೆಲ್ಲರೂ ರಾಮರಾಜ್ಯದ ಭಾಗವಾಗಲಿದ್ದಾರೆ’ ಎಂದು ಹೇಳಿದ ಅವರು ‘ನಾಗರಿಕ ಸಮಾಜದಲ್ಲಿ ಕೆಲವೇ ಕೆಲವರು ಅನಾರಿಕರಂತೆ ವರ್ತಿಸಿ ಸಮಾಜದ ಸ್ವಾಸ್ಥ್ಯ ಕೆಡವುತ್ತಾರೆ. ಅಂಥವರನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರಗಳು ಮುಲಾಜಿಲ್ಲದೆ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು