ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ಆಂತರಿಕ ಕದನ: ಮಂಗಳೂರಿಗೂ ತಟ್ಟಿದೆ ರೋದನದ ಬಿಸಿ

ದಕ್ಷ ಸರ್ಕಾರ: ಬಾಂಗ್ಲಾ ವಿದ್ಯಾರ್ಥಿಗಳ ನಿರೀಕ್ಷೆ
ತೇಜಸ್ವಿನಿ ಎನ್‌.ವಿ.
Published : 7 ಆಗಸ್ಟ್ 2024, 23:43 IST
Last Updated : 7 ಆಗಸ್ಟ್ 2024, 23:43 IST
ಫಾಲೋ ಮಾಡಿ
Comments

ಮಂಗಳೂರು: ‘ಬಾಂಗ್ಲಾ ದೇಶದಲ್ಲೂ ದಕ್ಷ ಸರ್ಕಾರ ರಚನೆಯಾಗಬೇಕು. ಅಲ್ಪಸಂಖ್ಯಾತರು ಮತ್ತು ಮಹಿಳೆಯರು ನಿರ್ಭೀತಿಯಿಂದ ಬದುಕುವಂತಹ ಸುರಕ್ಷಿತ ದೇಶ ನಮ್ಮದಾಗಬೇಕು.’

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಬಾಂಗ್ಲಾ ದೇಶದ ವಿದ್ಯಾರ್ಥಿನಿಯೊಬ್ಬರ ಮನದಾಳವಿದು.

ಬಾಂಗ್ಲಾ ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬಿರುವ ಹಿಂಸಾಚಾರ, ಪ್ರತಿಭಟನೆ, ವಿದ್ಯಾರ್ಥಿಗಳ ದಂಗೆಗಳಿಂದ ಬೇಸತ್ತ  ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಜೀವ ರಕ್ಷಣೆಗಾಗಿ ದೇಶ ತೊರೆದಿದ್ದಾರೆ. ಶಿಕ್ಷಣಕ್ಕಾಗಿ ಸ್ವದೇಶ ಬಿಟ್ಟು ಭಾರತಕ್ಕೆ ಬಂದಿರುವ ಹಲವು ವಿದ್ಯಾರ್ಥಿಗಳಿಗೂ ಈ ಹಿಂಸಾಚಾರದ ಬಿಸಿ ತಟ್ಟಿದೆ. ತಮ್ಮ ದೇಶದ ದಂಗೆ ಹತೋಟಿಗೆ ಬರುತ್ತದೋ ಇಲ್ಲವೋ ಎಂದು ಅವರು ಕಳವಳಕ್ಕೊಳಗಾಗಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಟ್ಟು 9 ಬಾಂಗ್ಲಾ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ತಮ್ಮ ದೇಶದ ಪರಿಸ್ಥಿತಿಯ ಬಗ್ಗೆ ಕೆಲ ವಿದ್ಯಾರ್ಥಿಗಳು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

‌‘ನಾನು ಭಾರತದಲ್ಲಿ ಇದ್ದುಕೊಂಡೇ ಸಾಮಾಜಿಕ ಮಾಧ್ಯಮಗಳ ಮೂಲಕ ಬಾಂಗ್ಲಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದೆ. ಆರಂಭದಲ್ಲಿ ಮೀಸಲಾತಿ ವಿಷಯವಾಗಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ದಿನಕಳೆದಂತೆ ಹಲವು ತಿರುವುಗಳನ್ನು ಪಡೆಯಿತು. ಇದೀಗ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರ ತಂದಿದೆ’ ಎಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ರುಬೈಯಾ ಪರ್ವಿನ್ ಮಿಥಿಲಾ ಹೇಳಿದರು.

‘ಇಂಟರ್ನೆಟ್ ಸೌಲಭ್ಯ ಸ್ಥಗಿತಗೊಂಡ ಸಮಯದಲ್ಲಿ ಸರ್ಕಾರ ಅಮಾಯಕರನ್ನು ಎಲ್ಲೆಂದರಲ್ಲಿ ವಿನಾಕಾರಣ ಕೊಲ್ಲುತಿತ್ತು. ವಾರೆಂಟ್ ಇಲ್ಲದೆ ಬಂಧಿಸುತ್ತಿತ್ತು. ಈ ಸಮಯದಲ್ಲಿ ನನ್ನ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತ ನಾನಿಲ್ಲಿ ಅಸಹಾಯಕಳಾಗಿದ್ದೆ’ ಎಂದು ಅವರು ಮೌನಕ್ಕೆ ಜಾರಿದರು.

‘ನನ್ನ ಮನೆಯವರೆಲ್ಲರೂ ಕ್ಷೇಮವಾಗಿದ್ದರೂ, ದಂಗೆಯಿಂದ ಭಯಭೀತರಾಗಿದ್ದಾರೆ. ಬಾಂಗ್ಲಾದೇಶದ ಮಹಿಳಾ ಪ್ರಜೆಯಾಗಿ ನಾನು ಬಯಸುವುದು ಇಷ್ಟೇ– ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ಮಹಿಳೆಯರಿಗೆ ನಿರ್ಭೀತ ವಾತಾವರಣ ನಿರ್ಮಾಣವಾಗಲಿ’ ಎಂದು ವಿದ್ಯಾರ್ಥಿನಿ ತಪ್ತಿ ಬಿಸ್ವಾಸ್ ಹೇಳಿದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಆಕಾಶ್ ಬಿಸ್ವಾಸ್, ‘ಪರೀಕ್ಷೆ ನಡೆಯುತ್ತಿರುವ ಕಾರಣ ಸದ್ಯ ನಾವು ಬಾಂಗ್ಲಾದೇಶಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಇಲ್ಲದೆ ಹಿಂದೂಗಳ ಮೇಲಿನ ಹಿಂಸಾಚಾರ ಎಲ್ಲೆ ಮೀರಿದೆ. ಬಾಂಗ್ಲಾ ಸ್ವಾತಂತ್ರ್ಯದ ನಂತರ 1971ರಲ್ಲಿ ಶೇ 23.1 ಇದ್ದ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಈಗ ಶೇ 9.6ಕ್ಕೆ ಕುಸಿದಿದೆ. ಬಾಂಗ್ಲಾದೇಶದಲ್ಲಿ ಯಾವುದೇ ರಾಜಕೀಯ ಚಳವಳಿಗಳು ನಡೆದಾಗ, ಹಿಂಸಾಚಾರಕ್ಕೆ ಮೊದಲು ಹಿಂದೂಗಳು ಬಲಿಯಾಗುತ್ತಾರೆ. ಹೀಗಿರುವಾಗ ಭವಿಷ್ಯದಲ್ಲಿ ಬಾಂಗ್ಲಾದ ಅಲ್ಪಸಂಖ್ಯಾತರು ಭಾರತ ಸರ್ಕಾರದ ಸಹಾಯವನ್ನು ಕೋರಿದರೆ,  ಹಿಂದಿನಂತೆ ಅವರಿಗೆ ಸಹಾಯ ಸಿಗುತ್ತದೋ ಇಲ್ಲವೋ ತಿಳಿಯದು’ ಎಂದರು.

‘ರಾಜಾಶ್ರಯದ ನಿರೀಕ್ಷೆಯಲ್ಲಿರುವ ಶೇಖ್‌ ಹಸೀನಾ ವಿಷಯವಾಗಿ ಭಾರತ ಸರ್ಕಾರ ಏನು ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇನೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT