ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಕೀಲರ ಸಂಘ ನನ್ನ ಮನೆ ಇದ್ದಂತೆ’

ವಕೀಲರ ಜೊತೆಗಿನ ಸಂವಾದದಲ್ಲಿ ಪದ್ಮರಾಜ್
Published 3 ಏಪ್ರಿಲ್ 2024, 3:05 IST
Last Updated 3 ಏಪ್ರಿಲ್ 2024, 3:05 IST
ಅಕ್ಷರ ಗಾತ್ರ

ಮಂಗಳೂರು: ‘ವಕೀಲರ ಸಂಘ ನನ್ನ ಮನೆ ಇದ್ದಂತೆ. ನನ್ನ ಮನೆಯವರ ನಿರೀಕ್ಷೆ, ವಿಶ್ವಾಸಗಳ ಬಗ್ಗೆ ನನಗೆ ಅರಿವಿದೆ’ ಎಂದು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.

ಮಂಗಳೂರು ವಕೀಲರ ಸಂಘಕ್ಕೆ ಮಂಗಳವಾರ ಭೇಟಿ ನೀಡಿದ ಅವರು ವಕೀಲರ ಜೊತೆ ಸಂವಾದ ನಡೆಸಿದರು. ‘ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ವಕೀಲರಿದ್ದಾರೆ. ವಕೀಲರ ಸಂಘ ಅನೇಕ ಬೇಡಿಕೆಗಳಿಗೆ ಆದ್ಯತೆ ಮೇರೆಗೆ ಸ್ಪಂದಿಸುತ್ತೇನೆ. ಜಿಲ್ಲೆಯ ಬೇಡಿಕೆಗಳು, ಇಲ್ಲಿನ ಹೇರಳ ಅವಕಾಶಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ತಿಳಿದಿದ್ದೇನೆ. ಆಗಿರುವ ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟತೆ ಇದೆ. ಅಭಿವೃದ್ಧಿ ವಿಚಾರವನ್ನೇ ಮುಂದಿಟ್ಟು ಚುನಾವಣೆ ಎದುರಿಸುತ್ತೇನೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಮನೋರಾಜ್, ಪಾಲಿಕೆ ಸದಸ್ಯರಾದ ಶಶಿಧರ್ ಹೆಗ್ಡೆ ಹಾಗೂ ನವೀನ್ ಡಿಸೋಜ ಭಾಗವಹಿಸಿದ್ದರು. 

ಬಿಷಪ್ ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ

ಪದ್ಮರಾಜ್  ಅವರು ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ದಾನ ಅವರನ್ನು ಮಂಗಳವಾರ ಭೇಟಿಯಾಗಿ ಆಶೀರ್ವಾದ ಪಡೆದರು. ಕೆಪಿಸಿಸಿ ಉಪಾಧ್ಯಕ್ಷರಾದ ರಮಾನಾಥ ರೈ ಐವನ್ ಡಿಸೋಜ  ಪಾಲಿಕೆ ಸದಸ್ಯ  ಶಶಿಧರ್ ಹೆಗ್ಡೆ ಪಕ್ಷದ ಮುಖಂಡರಾದ ಜೆ.ಆರ್.ಲೋಬೊ ಟಿ.ಕೆ. ಸುಧೀರ್ ಭರತೇಶ್ ಗಿರೀಶ್ ಆಳ್ವ ಧರ್ಮರಾಜ್ ಅಮ್ಮುಂಜ  ಜೊತೆಯಲ್ಲಿದ್ದರು.

ದೇವಸ್ಥಾನ ದರ್ಗಾ ಚರ್ಚ್‌ ಭೇಟಿ ಪದ್ಮರಾಜ್‌ ಅವರು ಸೋಮೇಶ್ವರದ ಸೋಮನಾಥೇಶ್ವರ ದೇವಸ್ಥಾನ ತೊಕ್ಕೊಟ್ಟು ಕೊರಗಜ್ಜನ ಕಟ್ಟೆ ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ಭಟ್ನಗರ ವೀರಮಾರುತಿ ವ್ಯಾಯಾಮ ಶಾಲೆ ಉಳ್ಳಾಲ ಕಾಪಿಕಾಡು ಬಬ್ಬುಸ್ವಾಮಿ ದೈವಸ್ಥಾನ ಕಾಪಿಕಾಡು ಸತ್ಯನಾರಾಯಣ ಮಂದಿರಗಳಿಗೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಉಳ್ಳಾಲ ಜುಮ್ಮಾ ಮಸೀದಿ ಮತ್ತು ಷರೀಫುಲ್ ಮದನಿ ದರ್ಗಾ ಅಳೇಕಲ ಅಚ್ಚೇ ಸಾಹೇಬ್ ದರ್ಗಾ ಹಾಗೂ ತೊಕ್ಕೊಟ್ಟು ಪೆರ್ಮನ್ನೂರ್ ಸಂತ ಸೆಬಾಸ್ಟಿಯನ್ ಚರ್ಚ್‌ಗೂ ಭೇಟಿ ನೀಡಿ  ಪ್ರಾರ್ಥನೆ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT