ಶನಿವಾರ, ಆಗಸ್ಟ್ 20, 2022
22 °C

ಬ್ಯಾರಿ ಲಿಪಿ ಬಲವಂತದ ಹೇರಿಕೆಯಿಲ್ಲ: ರಹೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಂಶೋಧಕರು, ಭಾಷಾ ತಜ್ಞರು, ತಂತ್ರಜ್ಞಾನದ ಬಗ್ಗೆ ಅರಿವು ಹೊಂದಿರುವ ತಂಡದಿಂದ ಸಂಶೋಧನೆ ಮಾಡಿ, ಬ್ಯಾರಿ ಲಿಪಿಯನ್ನು ಬಿಡುಗಡೆ ಮಾಡಲಾಗಿದೆ. ಬ್ಯಾರಿ ಲಿಪಿಯನ್ನು ಹಂತ ಹಂತವಾಗಿ ಕಲಿಕೆಯಲ್ಲಿ ಅಳವಡಿಸಲು ತೀರ್ಮಾನಿಸಲಾಗಿದ್ದು, ಯಾವುದೇ ಕಾರಣಕ್ಕೂ ಲಿಪಿಯ ಬಲವಂತವಾಗಿ ಹೇರುವುದಿಲ್ಲ ಎಂದು ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಸ್ಪಷ್ಟಪಡಿಸಿದ್ದಾರೆ.

ಕಲಿಕೆ ಮತ್ತು ಬೋಧನಾ ವಿಧಾನವನ್ನು 2ನೇ ಹಂತದಲ್ಲಿ ಸಾರ್ವಜನಿಕರಿಗೆ ಪ್ರಚಾರ ಮಾಡಲಾಗುವುದು. ಬ್ಯಾರಿ ಲಿಪಿ ಲೋಕಾರ್ಪಣೆಗೊಂಡ 24 ಗಂಟೆಯಲ್ಲಿ ಸಾವಿರಾರು ಮಂದಿ ಈ ಲಿಪಿಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರುಗಳನ್ನು ಬರೆದು ಹರ್ಷ ವ್ಯಕ್ತಪಡಿಸಿದ್ದಾರೆ. ಹತ್ತಾರು ಮಂದಿ ಈ ಲಿಪಿಯಲ್ಲಿ ಕವನ ಬರೆದು ಹಂಚಿಕೊಂಡಿದ್ದಾರೆ. ಒಂದು ವರ್ಷದಲ್ಲಿ ಆಗಬೇಕೆಂದು ನಿರೀಕ್ಷಿಸಲಾದ ಬೆಳವಣಿಗೆ ಕೆಲವೇ ದಿನಗಳಲ್ಲಿ ಆಗಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

ಈ ವರೆಗೆ ಬ್ಯಾರಿ ಸಾಹಿತ್ಯವನ್ನು ಕನ್ನಡ ಲಿಪಿಯನ್ನು ಬಳಸಿಕೊಂಡು ರಚಿಸಲಾಗುತ್ತಿತ್ತು. ಮುಂದೆಯೂ ಕನ್ನಡ ಭಾಷೆಯಲ್ಲೇ ನಡೆಯುವ ಸಾಹಿತ್ಯ ಚಟುವಟಿಕೆಗಳಿಗೆ ಅಕಾಡೆಮಿಯು ಪ್ರೋತ್ಸಾಹ ನೀಡಲಿದ್ದು, ನೂತನ ಬ್ಯಾರಿ ಲಿಪಿಯನ್ನು ಬಲವಂತವಾಗಿ ಯಾರ ಮೇಲೂ ಹೇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಭಾಷೆಯ ಬೆಳವಣಿಗೆಗೆ ಲಿಪಿ ಅನಿವಾರ್ಯವಲ್ಲ. ಆದರೆ ಲಿಪಿ ಹೊಂದಿರುವ ಭಾಷೆಯು ಶ್ರೀಮಂತ ಭಾಷೆಯ ಸಾಲಿಗೆ ಸೇರುತ್ತದೆ ಎಂಬ ಅಭಿಪ್ರಾಯದಂತೆ ಬ್ಯಾರಿ ಭಾಷೆಯಲ್ಲೇ ಸ್ವಇಚ್ಛೆಯಿಂದ ಅಂಕೆ, ಸಂಖ್ಯೆಗಳನ್ನು ಬರೆಯುವವರಿಗೆ ಅನುಕೂಲವಾಗಲೆಂದೇ ಬ್ಯಾರಿ ಲಿಪಿಯನ್ನು ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಹೊಂದುವ ರೀತಿಯಲ್ಲಿ ಅರ್ಹ ಮತ್ತು ಯೋಗ್ಯ ಸಂಪನ್ಮೂಲ ವ್ಯಕ್ತಿಗಳಿಂದ ರಚಿಸಲಾಗಿದೆ ಎಂದು ಹೇಳಿದ್ದಾರೆ.

6ನೇ ತರಗತಿಯಿಂದ ಮುಂದಿನ ವರ್ಷ ತೃತೀಯ ಭಾಷೆಯಲ್ಲಿ ಬ್ಯಾರಿ ಭಾಷೆಯನ್ನು ಕಲಿಸುವ ಪ್ರಯತ್ನ ಭರದಲ್ಲಿ ಸಾಗುತ್ತಿದ್ದು, ಇಲ್ಲಿ ಕನ್ನಡವನ್ನು ಬಳಸಿಯೇ ಪಠ್ಯಕ್ರಮಗಳನ್ನು ಬೋಧಿಸಲಾಗುವುದು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಜನಾಂದೋಲನ ಸಭೆ

ಬ್ಯಾರಿ ಭಾಷೆಗೆ ಕನ್ನಡ ಲಿಪಿಯನ್ನೇ ಬಳಸುವುದಕ್ಕಾಗಿ ಬುಧವಾರ (ಇದೇ 16) ಸಂಜೆ 4 ಗಂಟೆಗೆ ನಗರದ ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜನಾಂದೋಲನ ಸಭೆ ಕರೆಯಲಾಗಿದೆ. ಅಲ್ಲದೆ ಮುಖ್ಯಮಂತ್ರಿಗೂ ಮನವಿ ಮಾಡಲಾಗುವುದು ಎಂದು ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

‘ಹೊಸ ಲಿಪಿಯಿಂದ ಬ್ಯಾರಿ ಸಾಹಿತ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮುಂದಿನ ಪೀಳಿಗೆಯ ಬ್ಯಾರಿ ಬರಹಗಾರರು ಕೂಡ ಹೊಸ ಲಿಪಿ ಕಲಿತು ಅದರಲ್ಲಿ ಸಾಹಿತ್ಯ ರಚಿಸುವುದು ಸುಲಭವಲ್ಲ. ಈಗಾಗಲೆ ಕನ್ನಡ ಲಿಪಿ ಬಳಸಿಕೊಂಡು ರಚಿಸಲಾದ ಸಾಹಿತ್ಯ ಕೃತಿಗಳು ಕೂಡ ಮೂಲೆಗುಂಪಾಗಬಹುದು. ಬ್ಯಾರಿ ಭಾಷೆ, ಬ್ಯಾರಿ ಸಾಹಿತ್ಯವೂ ಹಿಂದುಳಿಯುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.