ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭರವಸೆಯ ಹೆಜ್ಜೆ’ ಸಂವಾದ: ಸ್ವಚ್ಛ ಸುಂದರ ಮಂಗಳೂರಿಗೆ ಬೇಕು ಕಾರ್ಯಪಡೆ

‘ಜನರಿಂದಲೇ ಸಮಸ್ಯೆ ಸೃಷ್ಟಿ– ಪರಿಹಾರವೂ ಅವರಿಂದಲೇ ಅಗಲಿ’– ಸಂಘಟನೆಗಳ ಸಲಹೆ
Published : 2 ಸೆಪ್ಟೆಂಬರ್ 2024, 3:39 IST
Last Updated : 2 ಸೆಪ್ಟೆಂಬರ್ 2024, 3:39 IST
ಫಾಲೋ ಮಾಡಿ
Comments

ಮಂಗಳೂರು: ನಗರದ ‘ಸ್ವಚ್ಛತೆ ಮತ್ತು ಸಂಚಾರ ನಿರ್ವಹಣೆ’ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ? ಸ್ವಚ್ಛತೆ ವಿಚಾರದಲ್ಲಿ ‘ಮಂಗಳೂರು ಮಾದರಿ’ಯನ್ನು ರೂಪಿಸುವಲ್ಲಿ ಸಂಘ –ಸಂಸ್ಥೆಗಳು ಹೇಗೆ ನೆರವಾಗಬಹುದು. ಪಾಲಿಕೆ, ಪೊಲೀಸ್‌ ಇಲಾಖೆ– ನಾಗರಿಕ ಸಂಘಟನೆಗಳ ನಡುವೆ ಸಮನ್ವಯ ಸಾಧಿಸುವ ಬಗೆ ಹೇಗೆ?

ಇಂತಹದ್ದೊಂದು ಅರ್ಥಪೂರ್ಣ ಸಂವಾದಕ್ಕೆ ವೇದಿಕೆ ಕಲ್ಪಿಸಿದ್ದು ಜಪ್ಪು ಅರೆಕರೆಬಲು ಅಂಬಾನಗರದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್  ಇಲ್ಲಿ ಭಾನುವಾರ ಏರ್ಪಡಿಸಿದ್ದ ‘ಭರವಸೆಯ ಹೆಜ್ಜೆ’ ಸಂವಾದ. ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ ಈ ಸಂವಾದ ಸ್ವಚ್ಛತೆ, ಸಂಚಾರ ನಿರ್ವಹಣೆಗೆ ಸುಸ್ಥಿರ ವ್ಯವಸ್ಥೆ ರೂಪಿಸುವುದಕ್ಕೆ ಪ್ರೇರಣೆ ನೀಡಿತು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮಾನಾಥ್‌ ಕೋಟೆಕಾರ್‌, ‘ನಗರದಲ್ಲಿ ಅಂದಾಜು 1.20 ಲಕ್ಷ ಮನೆ, 7.5 ಲಕ್ಷ ಜನಸಂಖ್ಯೆ ಇದ್ದು, ನಿತ್ಯ 3.5 ಲಕ್ಷ ಟನ್ ಕಸ ಉತ್ಪತ್ತಿಯಾಗುತ್ತಿದೆ. ಒಳ್ಳೆಯ ಮಳೆ, ಉತ್ತಮ ಬಿಸಿಲು ಇರುವ ನಗರದಲ್ಲಿ ಸ್ವಚ್ಛತೆ ಕಾಪಾಡಲು ಪ್ರಕೃತಿದತ್ತ ವಾತಾವರಣವಿದೆ. ಆದರೂ  ‘ಮಂಗಳೂರು ಮಾದರಿ’ ರೂಪಿಸಲೇಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ನಗರದಲ್ಲಿ ತಿಂಗಳಿಗೆ 1500 ವಾಹನಗಳು ಹೊಸತಾಗಿ ನೋಂದಣಿಯಾಗುತ್ತಿವೆ. ಸಂಚಾರ ನಿಯಂತ್ರಣಕ್ಕೆ ಕಮಿಷನರೇಟ್ ವ್ಯಾಪ್ತಿಯಲ್ಲಿರುವುದು 200 ಪೊಲೀಸ್‌ ಸಿಬ್ಬಂದಿ. ಜನ ಶಿಸ್ತು ಪಾಲಿಸದಿದ್ದರೆ ಸಂಚಾರ ದಟ್ಟಣೆ ತಡೆಯುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಕಸ ಹಾಗೂ ಸಂಚಾರದ ಸಮಸ್ಯೆಗಳು ಸೃಷ್ಟಿಯಾಗಿದ್ದು ಜನರಿಂದಲೇ. ಪರಿಹಾರವೂ ಜನರಿಂದಲೇ ಆಗಬೇಕು. ಒಣ ಕಸ ವಾರ್ಡ್‌ ಹಂತದಲ್ಲೇ ವಿಲೇಯಾಗಬೇಕು. ಇದಕ್ಕಾಗಿ 25 ವರ್ಷ ದೂರದೃಷ್ಟಿಯ ಯೋಜನೆ ಮತ್ತು ಅನುಷ್ಠಾನಕ್ಕೆ ವ್ಯವಸ್ಥೆ ರೂಪಿಸಬೇಕು. ನಿಗಾ ವಹಿಸಲು ಕಾರ್ಯಪಡೆ ರಚಿಸಬೇಕು. 'ಗಾಂಧಿ ಜಯಂತಿಗೆ ಮುನ್ನ ನಗರದ ಅಷ್ಟೂ ಮನೆಗಳನ್ನು ಭೇಟಿ ಮಾಡಿ, ಹಸಿ ಮತ್ತು ಒಣ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.

ಈ ಯೋಜನೆಯ ಅನುಷ್ಠಾನಕ್ಕ ಅಗತ್ಯ ನೆರವು ನೀಡುತ್ತೇವೆ ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಭರವಸೆ ನೀಡಿದರು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಾಕಾಮಾನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್‌ನ ಕೌಶಲ ಭವನದ ನೀಲನಕ್ಷೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಬಿಡುಗಡೆ ಮಾಡಿದರು. ಶಾಸಕ ವೇದವ್ಯಾಸ ಕಾಮತ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಬೆಂಗಳೂರಿನ ಕೆ.ಎಸ್. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ದಿಲೀಪ್ ಕುಮಾರ್ ಭಾಗವಹಿಸಿದರು. ಟ್ರಸ್ಟ್ನ ಅಧ್ಯಕ್ಷ ಸೀತಾರಾಮ ಎ. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಕೆ.ಸ್ವಾಗತಿಸಿ, ನಯನಾ ಪಕ್ಕಳ ವಂದಿಸಿದರು. ಅಭಿಷೇಕ್ ಶೆಟ್ಟಿ ಸಮನ್ವಯಕಾರರಾಗಿದ್ದರು.  

ಶಿಕ್ಷಣ ಅಭಿವೃದ್ಧಿ ಆರ್ಥಿಕತೆಗಳಿಗೆ ಪರಕೀಯ ಮಾದರಿ ಬದಲು ದೇಸಿ ಮಾದರಿ ರೂಪಿಸಬೇಕಿದೆ. ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ನ ಕಾರ್ಯ ಈ ನಿಟ್ಟಿನಲ್ಲಿ ಅನುಕರಣೀಯ
ಕ್ಯಾ.ಬ್ರಿಜೇಶ್‌ ಚೌಟ ಸಂಸದ ದಕ್ಷಿಣ ಕನ್ನಡ
ಎಲ್ಲವೂ ಸರ್ಕಾರದ ಜವಾಬ್ದಾರಿ ಎಂಬ ಭಾವನೆ ಬದಲಾಗಬೇಕು. ಜನತಂತ್ರ ವ್ಯವಸ್ಥೆಯಲ್ಲಿ ನಾವೇ ಸರ್ಕಾರ. ನಮ್ಮ ಕರ್ತವ್ಯ ಪಾಲಿಸಿದರೆ ಸಮಸ್ಯೆಗಳೇ ಇರುವುದಿಲ್ಲ
ಸ್ವಾಮಿ ಜಿತಕಾಮಾನಂದಜಿ ರಾಮಕೃಷ್ಣ ಮಠ ಮಂಗಳಾದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT