ಭಾನುವಾರ, ಮೇ 22, 2022
21 °C

ಲೇಡಿಗೋಷನ್ ಆಸ್ಪತ್ರೆಯಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಜನನ ಪ್ರಮಾಣ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅಂಚೆ ಇಲಾಖೆ ಮಂಗಳೂರು ವಿಭಾಗವು ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಸ್ಪೀಡ್ ಪೋಸ್ಟ್ ಮೂಲಕ ಜನನ ಪ್ರಮಾಣಪತ್ರಗಳನ್ನು ಮನೆಬಾಗಿಲಿಗೆ ತಲುಪಿಸುವ ವಿಶಿಷ್ಟಸೇವೆಯನ್ನು ಆರಂಭಿಸಿದೆ.

ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದ್ದು, ಇದೀಗ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಆರಂಭಿಸುವ ಮೂಲಕ ಜಿಲ್ಲೆಯಲ್ಲಿನ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ತಲುಪಿಸುವ ಸೇವೆಯ ವಿಸ್ತರಣೆಗೆ ಮೊದಲ ಹೆಜ್ಜೆ ಇಡಲಾಯಿತು.

ಸದ್ಯ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 400 ರಿಂದ 600 ಮಕ್ಕಳ ಜನನ ಆಗುತ್ತಿದ್ದು, ಕರ್ನಾಟಕದ ಸುಮಾರು 9 ಜಿಲ್ಲೆ ಹಾಗೂ ಕೇರಳದ 3 ಜಿಲ್ಲೆಯ ನಾಗರಿಕರು ಈ ಆಸ್ಪತ್ರೆಯ ಸೇವೆಯನ್ನು ಪಡೆಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆಯುವ ಜನನಗಳಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿಯೇ ನೀಡಲಾಗುತ್ತಿದೆ. ಇದಕ್ಕಾಗಿ ಜನರು ದೂರದ ಊರುಗಳಿಂದ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಬರಬೇಕಾಗಿದೆ.

ಈ ತೊಂದರೆಯನ್ನು ನಿವಾರಿಸಲು ಅಂಚೆ ಇಲಾಖೆ ಹಾಗೂ ಲೇಡಿಗೋಷನ್ ಆಸ್ಪತ್ರೆಯು ಒಡಂಬಂಡಿಕೆ ಮಾಡಿಕೊಂಡಿದ್ದು, ಈ ಸೇವೆಯ ಅಡಿಯಲ್ಲಿ ಜನನ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರಿಗೆ 2 ಆಯ್ಕೆಗಳನ್ನು ನೀಡಲಾಗುತ್ತದೆ. ಅರ್ಜಿದಾರರು ಖುದ್ದಾಗಿ ಆಸ್ಪತ್ರೆಗೆ ಮತ್ತೊಮ್ಮೆ ಭೇಟಿ ನೀಡಿ ಈ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ಇಲ್ಲವೇ ಸ್ಪೀಡ್‌ ಪೋಸ್ಟ್ ಮೂಲಕ ಪ್ರಮಾಣ ಪತ್ರವನ್ನು ಮನೆಬಾಗಿಲಲ್ಲಿ ಪಡೆದುಕೊಳ್ಳಬಹುದು.

ಅರ್ಜಿಯು ಸರಳವಾಗಿದ್ದು, ಕೇವಲ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ಪ್ರಮಾಣಪತ್ರವನ್ನು ತರುವ ಪೋಸ್ಟ್‌ ಮ್ಯಾನ್‌ಗೆ ₹100 ನೀಡಲು ಸಮ್ಮತಿ ಇದೆ ಎಂದು ಸಹಿ ಮಾಡಬೇಕು. ಪ್ರಮಾಣಪತ್ರವು ಮುದ್ರಣಗೊಂಡ ಬಳಿಕ ಅಂಚೆ ಇಲಾಖೆಯು ಈ ಜನನ ಪ್ರಮಾಣಪತ್ರವನ್ನು ಅರ್ಜಿದಾರರ ಮನೆಗೆ ತಲುಪಿಸಲಿದೆ.

ಲೇಡಿಗೋಷನ್ ಆಸ್ಪತ್ರೆಗೆ ಅರ್ಜಿ ಸಲ್ಲಿಸಿದ 3 ರಿಂದ 30 ದಿನಗಳ ಒಳಗಾಗಿ ಪ್ರಮಾಣಪತ್ರ ಮುದ್ರಣ ಆಗಲಿದ್ದು, ಅದನ್ನು 2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಯಾವ ಹಂತದಲ್ಲಿದೆ ಎಂಬುದನ್ನು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ತಿಳಿದು ಕೊಳ್ಳಬಹುದು ಎಂದು ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು