ಬುಧವಾರ, ಆಗಸ್ಟ್ 10, 2022
25 °C
ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಿಗದ ರಕ್ಷಣೆ: ಸರ್ಕಾರದ ವಿರುದ್ಧ ಬಿಜೆಪಿ ವಕ್ತಾರ ಮಾಣಿಪ್ಪಾಡಿ ವಾಗ್ದಾಳಿ

ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌ ಆಗುತ್ತಿಲ್ಲ: ಬಿಜೆಪಿ ವಕ್ತಾರ ಮಾಣಿಪ್ಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ರಾಜ್ಯದಲ್ಲಿ ‘ಸಬ್‌ ಕಾ ಸಾಥ್‌– ಸಬ್‌ ಕಾ ವಿಕಾಸ್‌’ ಧ್ಯೇಯವಾಕ್ಯ ಪಾಲನೆಯಾಗುತ್ತಿಲ್ಲ. ಸಂವಿಧಾನಬದ್ಧವಾಗಿ ಮುಸ್ಲೀಮರಿಗೆ ಸಿಗಬೇಕಾದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ’ ಎಂದು ಬಿಜೆಪಿ ಜಂಟಿ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಆರೋಪಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ನನಗೆ ನೀಡಿರುವ ಗನ್‌ಮ್ಯಾನ್‌ ಭದ್ರತೆಯನ್ನು ಹಾಗೂ ಇತರ ಸವಲತ್ತುಗಳನ್ನು ಸರ್ಕಾರದ ನಡವಳಿಕೆಯನ್ನು ಪ್ರತಿಭಟಿಸುವ ಸಲುವಾಗಿ ತ್ಯಜಿಸುತ್ತಿದ್ದೇನೆ’ ಎಂದು ಪ್ರಕಟಿಸಿದರು.

‘ನನಗೆ ಜೀವ ಬೆದರಿಕೆ ಇರುವುದು ನಿಜ. ನನ್ನ ಸಮುದಾಯಕ್ಕೆ ರಕ್ಷಣೆ ಸಿಗದ ಮೇಲೆ ನನಗೇಕೆ ಭದ್ರತೆ. ನನ್ನನ್ನು ಯಾರು ಬೇಕಿದ್ದರೂ ಸಾಯಿಸಲಿ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಅಷ್ಟೊಂದು ನೋವಾಗಿದೆ. ನಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಎಲ್ಲರೂ ಗೌರವಿಸಬೇಕು. ಆ ಹಕ್ಕುಗಳನ್ನೇ ಕಿತ್ತುಕೊಂಡರೆ ಅದನ್ನು ಖಂಡಿಸುತ್ತೇವೆ’ ಎಂದರು.

‘ಜಾತ್ರೆ ಸಂದರ್ಭದಲ್ಲಿ ಮುಸ್ಲೀಮರು ವ್ಯಾಪಾರ ನಡೆಸಲು ನಿರ್ಬಂಧಿಸಲಾಗುತ್ತಿದೆ. ಹಲಾಲ್‌ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಈ ಹಿಂದೆ ಎಷ್ಟೇ ದೊಡ್ಡ ಪ್ರಮಾಣದ ಕೋಮುಗಲಭೆಗಳು ನಡೆದಾಗಲೂ, ಈಗಿನಂತೆ ಜಾತ್ರೆಗಳಲ್ಲೂ ಹಿಂದೂ–ಮುಸ್ಲಿಂ ಎಂದು ತಾರತಮ್ಯ ಮಾಡುವ ವಾತಾವರಣ ಎದುರಾಗಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಹಿಂದೆಯೂ ನಮ್ಮ ಪಕ್ಷದಲ್ಲಿರುವವರು ತಪ್ಪು ಮಾಡಿದಾಗ ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದೇನೆ. ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧವೂ ಧ್ವನಿ ಎತ್ತಿದ್ದೇನೆ. ಬಿಜೆಪಿಯಲ್ಲಿದ್ದೇನೆ ಎಂದ ಮಾತ್ರಕ್ಕೆ ಸತ್ಯವನ್ನು ಅದುಮಿಡಬೇಕೆಂದೇನಿಲ್ಲ. ನಾನು ಹೇಳಿದ್ದರಲ್ಲಿ ಸತ್ಯಾಂಶ ಇಲ್ಲದಿದ್ದರೆ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

‘₹ 2.3 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆಗೆ ಸಂಬಂಧಿಸಿ ನಾನು ನೀಡಿದ ವರದಿಯನ್ನು ಸರ್ಕಾರ ಇನ್ನೂ ವಿಧಾನಮಂಡಲದಲ್ಲಿ ಮಂಡಿಸಿಲ್ಲ. ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಗಳನ್ನೂ ವರದಿಯಲ್ಲಿ ಒದಗಿಸಿದ್ದೇನೆ. ಈ ವರದಿ ಅನ್ವಯ ಆಗಬೇಕು ಎಂದು ಸ್ವತಃ ಉಪಲೋಕಾಯುಕ್ತರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಕೂಡಾ ಈ ಬಗ್ಗೆ  ಆದೇಶ ಮಾಡಿವೆ. ಈ ವರದಿಯನ್ನು ಒಪ್ಪಿಕೊಂಡು ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ತಿನಲ್ಲಿ ಪಕ್ಷಬೇಧ ಮರೆತು ನಿರ್ಣಯಕೈಗೊಳ್ಳಲಾಗಿದೆ. ಇಷ್ಟೆಲ್ಲಾ ಆಗಿಯೂ ಇದನ್ನು ಮಂಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವಾದರೂ ನನ್ನ ವರದಿ ಅಂಗೀಕಾರವಾಗಿ, ವಕ್ಫ್‌ ಆಸ್ತಿ ಕಬಳಿಸಿದವರಿಗೆ ಶಿಕ್ಷೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅನೇಕ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ವಿಚಾರವಾಗಿ ಪತ್ರ ಬರೆದಿದ್ದೇನೆ. ಆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದರು.

‘ವಕ್ಫ್‌ ಮಂಡಳಿ ನಿರ್ದೇಶಕರು ಮಂಡಳಿಯ ಹಾಗೂ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಮಂಡಳಿಯು ನಡೆಸಿರುವ 50ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ದೂರು ನೀಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಮಂಡಳಿಯ ಈಗಿನ ಅಧ್ಯಕ್ಷ ಶಾಫಿ ಸಅದಿ ಅವರು ವಕ್ಫ್‌ ಆಸ್ತಿಗಳನ್ನು ಉಳಿಸಲು ಕ್ರಮ ಕೈಗೊಳ್ಳುವ ಬದಲು, ಭೂಕಬಳಿಕೆ ಮಾಡಿದವರ ರಕ್ಷಣೆಗೆ ಸರ್ಕಾರದ ನಡುವೆ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘5 ಸಾವಿರಕ್ಕೂ ಅಧಿಕ ಫಿಲ್ಟರ್‌ಗಳ ಪೂರೈಕೆ, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಿಗೆ ವಾಷಿಂಗ್‌ ಮೆಷೀನ್‌ ಪೂರೈಕೆ, ದಾವಣಗೆರೆಯಲ್ಲಿ ವಕ್ಫ್‌ ಆಸ್ತಿಯನ್ನು ಪಟ್ರೋಲ್‌ ಪಂಪ್‌ ನಡೆಸಲು ಬೋಗ್ಯಕ್ಕೆ ನೀಡಿದ್ದ ಬಗ್ಗೆಯೂ ಸರ್ಕಾರಕ್ಕೆ ಪತ್ರ ಬರೆದರೂ ಕ್ರಮ ಆಗಿಲ್ಲ. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ವಕ್ಫ್‌ ಸ್ವತ್ತು. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಂಡಳಿ ನಡೆಸುತ್ತಿಲ್ಲ. ಸುಳ್ಯದಲ್ಲಿ ಮುಸ್ಲೀಮರ ದಫನಭೂಮಿಯನ್ನು ಸರ್ಕಾರ ಹಿಂಪಡೆಯಲು ಮುಂದಾಗಿರುವುದು ನೋವಿನ ಸಂಗತಿ’ ಎಂದರು.

 

–0–

ಕೋಟ್..

ದೇಶದ ಸ್ವತಂತ್ರ್ಯಕ್ಕಾಗಿ ಮುಸ್ಲೀಮರೂ ಹೋರಾಡಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ಟೈಗರ್‌ ಹಿಲ್‌ ಮರುಸ್ವಾಧೀನಪಡಿಸಿಕೊಂಡಿದ್ದು ಮುಸ್ಲಿಂ ರೆಜಿಮೆಂಟ್‌. ನಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆ ಉಂಟಾದರೆ ಧ್ವನಿ ಎತ್ತುವುದು ಅನಿವಾರ್ಯ

ಅನ್ವರ್‌ ಮಾಣಿಪ್ಪಾಡಿ, ಬಿಜೆಪಿ, ಜಂಟಿ ವಕ್ತಾರ

–0–

 

ಬಾಕ್ಸ್‌

‘ಹೋರಾಟ ಕೈಬಿಡಲು ಹಣದ ಆಮಿಷ’

‘ವಕ್ಫ್‌ ಆಸ್ತಿಗಳ ರಕ್ಷಣೆ ನಾನು ನಡೆಸುತ್ತಿರುವ ಹೋರಾಟವನ್ನು ಕೈಬಿಡುವಂತೆ ಒತ್ತಾಯಿಸಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ನನಗೆ ‌ಕೋಟಿಗಟ್ಟಲೆ ಹಣ ನೀಡಲು ಮುಂದಾಗಿದ್ದರು. ನಾನು ಅದನ್ನು ನಿರಾಕರಿಸಿದ್ದೆ. ಭೂಕಬಳಿಕೆ ಮಾಡಿದವರನ್ನು ತಂದೆ ಮಗ ಸೇರಿ ರಕ್ಷಣೆ ಮಾಡುತ್ತಿದ್ದಾರೆ ಎಂದೂ ಬಹಿರಂಗವಾಗಿಯೇ ಹೇಳಿದ್ದೆ’ ಎಂದು ಅನ್ವರ್‌ ಮಾಣಿಪ್ಪಾಡಿ ತಿಳಿಸಿದರು. .

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು