ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬ್ಯಾಂಕ್‌ಗಾಗಿ ಜನರ ಪ್ರಾಣದ ಜೊತೆ ಕಾಂಗ್ರೆಸ್‌ ಚೆಲ್ಲಾಟ: ನಳಿನ್‌ ಕುಮಾರ್ ಕಟೀಲ್

Last Updated 6 ಜನವರಿ 2022, 11:12 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದಿಲ್ಲ ಎಂಬ ಭೀತಿ ಆ ಪಕ್ಷದ ನಾಯಕರಿಗೆ ಮನವರಿಕೆಯಾಗಿದೆ. ಹೀಗಾಗಿ, ಮೇಕೆದಾಟು ಯೋಜನೆ ಹೋರಾಟದ ಹೆಸರಿನಲ್ಲಿ ಹೊಸ ರಾಜಕೀಯ ನಾಟಕ ಆರಂಭಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಡುವೆ ಆಂತರಿಕ ಸ್ಪರ್ಧೆ ನಡೆಯುತ್ತಿದೆ. ಅದರ ಮುಂದುವರಿದ ಭಾಗವೇ ಮೇಕೆದಾಟು ಪಾದಯಾತ್ರೆಯ ನಾಟಕ. ಇದು ಕಾಂಗ್ರೆಸ್‌ನ ಹೋರಾಟವಲ್ಲ, ಬದಲಾಗಿ ಶಿವಕುಮಾರ್‌ ಅವರ ಹೋರಾಟ. ಕಾಂಗ್ರೆಸ್‌ನವರಿಗೆ ಈ ಯೋಜನೆಯ ಬಗ್ಗೆ ನೈಜ ಕಾಳಜಿ ಇದ್ದರೆ ಅವರ ಸರ್ಕಾರ ಇದ್ದಾಗ ಮಾಡಬೇಕಿತ್ತು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕೋವಿಡ್‌ ನಿರ್ಬಂಧಕ್ಕಾಗಿ ತಜ್ಞರ ವರದಿಯನ್ನು ಆಧರಿಸಿ ಸರ್ಕಾರ ಕಠಿಣ ನಿರ್ಬಂಧ ಹೇರಿದೆ. ಕೋವಿಡ್‌ಗೆ ಯಾವುದೇ ಜಾತಿ, ಪಕ್ಷ ಎಂಬುದಿಲ್ಲ. ಕೋವಿಡ್‌ನ 3ನೇ ಅಲೆಯನ್ನು ತಡೆಯುವುದಕ್ಕೆ ಎಲ್ಲರೂ ಸರ್ಕಾರದೊಂದಿಗೆ ಸಹಕರಿಸಬೇಕು. ಹೀಗಾಗಿ, ಬಿಜೆಪಿಯ ಕೆಲ ಕಾರ್ಯಕ್ರಮಗಳನ್ನೂ ಮುಂದೂಡಲಾಗಿದೆ. ನಮಗೆ ಜನರ ಪ್ರಾಣ ರಕ್ಷಣೆ ಮುಖ್ಯ. ಕಾಂಗ್ರೆಸ್‌ನವರು ಮತಬ್ಯಾಂಕ್‌ಗಾಗಿ ಜನರ ಪ್ರಾಣದ ಜತೆ ಚೆಲ್ಲಾಟವಾಡುವುದು ಸರಿಯಲ್ಲ’ ಎಂದು ಹೇಳಿದರು.

‘ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಾಹನ ತಡೆಯಲು ಯತ್ನಿಸಿರುವುದು ಖಂಡನೀಯ. ರೈತರ ಹೆಸರಿನಲ್ಲಿ ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ. ಇದು ಅಲ್ಲಿನ ಕಾಂಗ್ರೆಸ್‌ ಸರ್ಕಾರದ ನೇರ ವೈಫಲ್ಯವನ್ನು ತೋರಿಸುತ್ತದೆ. ತಕ್ಷಣ ನೈತಿಕ ಹೊಣೆ ಹೊತ್ತು ಪಂಜಾಬ್‌ನ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು’ ಎಂದು ನಳಿನ್‌ ಒತ್ತಾಯಿಸಿದರು.

‘ಸಚಿವ ಸಂಪುಟ ಪುನರ್‌ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರಮಾಧಿಕಾರ ಇದೆ. ಸೂಕ್ತ ಸಂದರ್ಭದಲ್ಲಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಸರ್ಕಾರವು ಕೋವಿಡ್‌ನ ಮೂರನೇ ಅಲೆಯನ್ನು ನಿಯಂತ್ರಿಸಲು ಹೆಚ್ಚಿನ ಗಮನ ಹರಿಸುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT